ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಕಾಂಗ್ರೆಸ್‌ಗೆ ಬಣ ರಾಜಕೀಯ ತಲೆನೋವು ತಂದಿಟ್ಟಿದೆ. ಸದ್ಯ ಕೋಲಾರ ಲೋಕಸಭಾ ಕ್ಷೇತ್ರದ (Kolar Lok Sabha constituency) ಸಮಸ್ಯೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬಗೆಹರಿಸಲಾಗಿದೆ. ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದತ್ತ ಸಮಸ್ಯೆಗೆ ದೃಷ್ಟಿ ಹಾಯಿಸಿದ್ದಾರೆ. ಈ ನಡುವೆ ಈ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಖಡಕ್ ಎಚ್ಚರಿಕೆಯನ್ನು ನೀಡಿದ್ದು, ತಮಗೆ ಟಿಕೆಟ್ ಕೊಡದಿದ್ದರೆ ಪಕ್ಷವನ್ನೇ ತೊರೆಯುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ಪೈಪೋಟಿಯಲ್ಲಿರುವ ರಕ್ಷಾ ರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚಿಕ್ಕಬಳ್ಳಾಪುರ ಸಮಸ್ಯೆ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು, ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಆದರೆ, ಮಾಜಿ ಸಚಿವ ಎಂ.ಆರ್. ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಅವರಿಗೆ ಬಹುತೇಕ ಟಿಕೆಟ್ ಫಿಕ್ಸ್ ಎನ್ನಲಾಗಿದೆ. ಇದು ಈ ಕ್ಷೇತ್ರದ ಪ್ರಮುಖ ಟಿಕೆಟ್ ಆಕಾಂಕ್ಷಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಶಿವಶಂಕರ ರೆಡ್ಡಿ ಅವರನ್ನು ಕೆರಳಿಸಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್‌ಗಾಗಿ ಭಾರಿ ಲಾಭಿ
ಕಾಂಗ್ರೆಸ್ ಪಕ್ಷಕ್ಕೆ ಕೋಲಾರದೊಂದಿಗೆ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ಕೂಡ ಒತ್ತಡ ಸೃಷ್ಟಿಸಿದೆ. ರಕ್ಷಾ ರಾಮಯ್ಯ ಮತ್ತು ಶಿವಶಂಕರ ರೆಡ್ಡಿ ನಡುವೆ ಟಿಕೆಟ್‌ಗಾಗಿ ಕಾದಾಟವಿದೆ. ಈ ನಡುವೆ ಮಾಜಿ ಸಿಎಂ ವೀರಪ್ಪ ಮೊಯಿಲಿ ಕೂಡ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರದ ಮಾಜಿ ಸಂಸದರೂ ಆದ ಮೊಯಿಲಿ ತಮಗೇ ಟಿಕೆಟ್ ನೀಡುವಂತೆ ದಿಲ್ಲಿಯಲ್ಲಿ ಸೋನಿಯಾ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ರಕ್ಷಾ ರಾಮಯ್ಯ ಅವರಿಗೆ ಚುನಾವಣೆ ಗೆಲ್ಲುವ ಶಕ್ತಿ ಇಲ್ಲ. ಹೀಗಾಗಿ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಟಿಕೆಟ್ ಕೊಡಬೇಡಿ. ಜಿಲ್ಲಾ ಸಮಿತಿ ಕಳುಹಿಸಿದ ವೀರಪ್ಪ ಮೊಯ್ಲಿ ಇಲ್ಲವೇ, ಶಿವಶಂಕರರೆಡ್ಡಿ ಹೆಸರು ಅಂತಿಮ ಮಾಡುವಂತೆ ಸ್ಥಳೀಯ ನಾಯಕರು ಒತ್ತಾಯಿಸಿದ್ದಾರೆ.
ಆದರೆ, ಹೈಕಮಾಂಡ್ ಈಗಾಗಲೇ ರಕ್ಷಾ ರಾಮಯ್ಯ ಹೆಸರು ಅಂತಿಮ ಮಾಡಿದೆ. ಅಧಿಕೃತ ಘೋಷಣೆ ಒಂದೇ ಬಾಕಿಯಾಗಿದೆ. ಆದರೆ ಇದನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಪತ್ರ ಬರೆದಿದ್ದು, ನಿಮ್ಮ ನಿರ್ಧಾರ ಪುನರ್ ಪರಿಶೀಲನೆ ಮಾಡಿ ಎಂದಿದ್ದಾರೆ. ತಮ್ಮ ಮನವಿಗೆ ಮಣಿಯದಿದ್ದರೆ ಕೋಲಾರದ ಮಾದರಿಯಲ್ಲಿ ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!
ಪಕ್ಷ ತೊರೆಯುವ ಎಚ್ಚರಿಕೆ ನೀಡಿದ ಶಿವಶಂಕರ ರೆಡ್ಡಿ
ವಿಸ್ತಾರ ನ್ಯೂಸ್‌ಗೆ ಶಿವಶಂಕರರೆಡ್ಡಿ ಪ್ರತಿಕ್ರಿಯೆ ನೀಡಿ, ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಜಿಲ್ಲಾ ಸಮಿತಿ ಶಿಫಾರಸು ಮಾಡುವಾಗ ನನ್ನ ಹೆಸರು ಕಳಿಸಿದ್ದಾರೆ. ನನ್ನ ಮತ್ತು ವೀರಪ್ಪ ಮೊಯ್ಲಿ ಹೆಸರನ್ನು ಶಿಫಾರಸು ಮಾಡಿದ್ದರು. ವೀರಪ್ಪ ಮೊಯ್ಲಿ ಅವರು ವಯಸ್ಸು ಆಗಿದೆ ಅಂತ ಹಿಂದೆ ಸರಿದಿದ್ದಾರೆ. ಹೀಗಾಗಿ ನಾನು ಆಕಾಂಕ್ಷಿ ಅಂತ ಹೇಳಿದ್ದೇನೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೂ ಹೇಳಿದ್ದೇನೆ. ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ನೀಡಿದ್ದಾರೆ. ಕಾಂಗ್ರೆಸ್‌ನಲ್ಲೂ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಬಿಜೆಪಿಗೆ ಲಾಭವಾಗುತ್ತದೆ. ಎರಡು ಬಿರಿಯಾನಿ ಹಂಚಿದರೆ ಸಂಘಟನೆ ಆಗಲ್ಲ ಎಂದು ರಕ್ಷಾ ರಾಮಯ್ಯ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ನಮ್ಮನ್ನು ಪಕ್ಷ ಪರಿಗಣಿಸಿದರೆ ನಾವು ಪಕ್ಷದಲ್ಲಿ ಇರುತ್ತೇವೆ. ಹಣಬಲ ಮಾತ್ರ ಅಂದರೆ ನಮ್ಮ ಜನಬಲದ ಶಕ್ತಿ ತೋರಿಸಬೇಕಾಗುತ್ತದೆ. ಒಕ್ಕಲಿಗ ಸಮುದಾಯಕ್ಕೆ ಬಿಟ್ಟು ಬೇರೆ ಸಮುದಾಯಕ್ಕೆ ಟಿಕೆಟ್ ಕೊಟ್ಟರೆ ಗೆಲ್ಲೋದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾನು ಪಕ್ಷದಲ್ಲಿ ಇರಲ್ಲ ಎಂದು ಶಿವಶಂಕರ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.