Site icon Vistara News

Lok Sabha Election 2024: ದೇವೇಗೌಡರಿಂದ ಕನ್ನಡಿಗರಿಗೆ ದ್ರೋಹ; ನನ್ನದು ಕನ್ನಡಿಗನ ಸ್ವಾಭಿಮಾನ: ಸಿದ್ದರಾಮಯ್ಯ

Lok Sabha Election 2024 CM Siddaramaiah hits back at HD DeveGowda for alliance wit BJP

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದ್ದ ಬಿಜೆಪಿ-ಜೆಡಿಎಸ್‌ ಸಮನ್ವಯ ಸಭೆಯಲ್ಲಿ (BJP JDS coordination meeting) ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Devegowda), ಕಾಂಗ್ರೆಸ್‌ ಅನ್ನು ಸೋಲಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ “ಗರ್ವಭಂಗ’ ಮಾಡಿ ಎಂದು ಕರೆ ನೀಡಿದ್ದಕ್ಕೆ ಈಗ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನನ್ನದು ಗರ್ವವೂ ಅಲ್ಲ, ಅಹಂಕಾರವೂ ಅಲ್ಲ ಎಂದು ಹೇಳಿದ್ದಾರೆ. ನನ್ನದು ಕನ್ನಡಿಗರ ರಕ್ತದ ಕಣಕಣದಲ್ಲಿರುವ ಸ್ವಾಭಿಮಾನ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಸಿಎಂ ಸಿದ್ದರಾಮಯ್ಯ, ದೇವೇಗೌಡರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮ್ಮಂತೆ ವಿರೋಧಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾರೆ ಎಂದು ಟೀಕೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಪ್ರಕಟಣೆಯಲ್ಲೇನಿದೆ?

“ಜೆಡಿ(ಎಸ್) ವರಿಷ್ಠ ಎಚ್.ಡಿ. ದೇವೇಗೌಡರು ನನ್ನ ಗರ್ವಭಂಗ ಮಾಡುತ್ತೇನೆಂದು ಶಪಥ ಮಾಡಿದ್ದಾರೆ. ನನ್ನದು ಗರ್ವವೂ ಅಲ್ಲ, ಅಹಂಕಾರವೂ ಅಲ್ಲ. ನನ್ನದು ಕನ್ನಡಿಗರ ರಕ್ತದ ಕಣಕಣದಲ್ಲಿರುವ ಸ್ವಾಭಿಮಾನ, ಕನ್ನಡ-ಕನ್ನಡಿಗ-ಕರ್ನಾಟಕದ ರಕ್ಷಣೆಗಾಗಿ ತಲೆ ಎತ್ತಿ, ಎದೆಯುಬ್ಬಿಸಿ ಪ್ರಶ್ನಿಸುವ ಮತ್ತು ಹೋರಾಟ ನಡೆಸುವ ಸ್ವಾಭಿಮಾನ ಎನ್ನುವುದನ್ನು ಅತ್ಯಂತ ವಿನಯಪೂರ್ವಕವಾಗಿ ಅವರ ಗಮನಕ್ಕೆ ತರಬಯಸುತ್ತೇನೆ.

ಸನ್ಮಾನ್ಯ ದೇವೇಗೌಡರೇ, ವೈಯಕ್ತಿಕ ಇಲ್ಲವೆ ರಾಜಕೀಯ ಲಾಭಕ್ಕಾಗಿ ನಾನು ಯಾರ ಜೊತೆಯಲ್ಲಿಯೂ ರಾಜಿ ಮಾಡಿಕೊಳ್ಳಲಾರೆ, ಅಂತಹ ಪರಿಸ‍್ಥಿತಿ ಬಂದೊದಗಿದರೆ ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ ವಿನಃ ಕರ್ನಾಟಕದ ಹಿತಾಸಕ್ತಿಯ ವಿರೋಧಿಗಳ ಜೊತೆಯಲ್ಲಿ ನಿಮ್ಮಂತೆ ಹೊಂದಾಣಿಕೆ ಮಾಡಿಕೊಳ್ಳಲಾರೆ.

ಆತ್ಮಸಾಕ್ಷಿಯಾದರೂ ನಿಮ್ಮನ್ನು ಚುಚ್ಚಲಿಲ್ಲವೇ?

ದೇವೇಗೌಡರ ಜೊತೆ ರಾಜಕೀಯವಾಗಿ ನನಗೆ ಭಿನ್ನಾಭಿಪ್ರಾಯವಿದ್ದರೂ. ನಮ್ಮ ನೆಲ, ಜಲ ಮತ್ತು ಭಾಷೆಯ ರಕ್ಷಣೆಯ ಬಗೆಗಿನ ಅವರ ನಿಲುವಿನ ಬಗ್ಗೆ ಗೌರವ ಇತ್ತು. ಆದರೆ ಕಳೆದ ಹತ್ತು ವರ್ಷಗಳ ಅಧಿಕಾರವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೆಜ್ಜೆಹೆಜ್ಜೆಗೂ ಕರ್ನಾಟಕದ ಹಿತಾಸಕ್ತಿಯ ವಿರುದ್ಧವೇ ಕೆಲಸ ಮಾಡಿದೆ. ನಾಡಧ್ವಜಕ್ಕೆ ವಿರೋಧ, ಹಿಂದಿ ಹೇರಿಕೆ, ಕಾವೇರಿ, ಕೃಷ್ಣ, ಮಹದಾಯಿ ಜಲವಿವಾದಗಳಲ್ಲಿ ಅನ್ಯಾಯ, ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗ ಯುವಜನರಿಗೆ ವಂಚನೆ…. ಹೀಗೆ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ದ್ರೋಹ ಎಸಗುತ್ತಾ ಬಂದಿದೆ. ಹೀಗಿದ್ದರೂ “ದೇಶದ ಎಲ್ಲ ಸಮಸ್ಯೆಗಳಿಗೆ ಮೋದಿ ಮತ್ತು ಶಾ ಬಳಿ ಪರಿಹಾರ ಇದೆ” ಎಂದು ಹೇಳುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯಾದರೂ ನಿಮ್ಮನ್ನು ಚುಚ್ಚಲಿಲ್ಲವೇ?

ಜೆಡಿಎಸ್‌ನಿಂದ ಕನ್ನಡಿಗರಿಗೆ ದ್ರೋಹ

ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯಕ್ಕೆ ಕ್ಷಮೆಯೇ ಇಲ್ಲ. ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರದ ಖಜಾನೆಗೆ ಸಂದಾಯವಾಗುವ ಕನ್ನಡಿಗರ ಒಂದು ರೂಪಾಯಿಗೆ ಪ್ರತಿಯಾಗಿ ಕೇವಲ ಹದಿಮೂರು ಪೈಸೆಯಷ್ಟು ಹಣ ಮಾತ್ರ ಕರ್ನಾಟಕಕ್ಕೆ ವಾಪಸು ಬರುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೂಡಾ ಕೇಂದ್ರ ಸರ್ಕಾರದ ಅನ್ಯಾಯವನ್ನು ಕೂಗಿ ಕೂಗಿ ಹೇಳುತ್ತಿವೆ. ಆದರೆ ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಮಾತ್ರ ನಮ್ಮ ನೆಲ-ಜಲ-ಭಾಷೆಯ ವಿರೋಧಿಗಳ ಜತೆಯಲ್ಲಿ ರಾಜಿ ಮಾಡಿಕೊಂಡು ಕನ್ನಡಿಗರಿಗೆ ದ್ರೋಹ ಎಸಗಿದೆ.

ಇದನ್ನೂ ಓದಿ: Lok Sabha Election 2024: ಯಾರೂ ಗೆರೆ ದಾಟುವಂತಿಲ್ಲ: ಕೈ ಒಳಜಗಳಕ್ಕೆ ಡಿಕೆಶಿ ವಾರ್ನಿಂಗ್;‌ ಮೋದಿ ಬಂದರೂ ಹೆದರಲ್ಲ!

ಸಮಸ್ತ ಕನ್ನಡಿಗರಿಗೆ ಮಾಡುವ ದ್ರೋಹ

ಸನ್ಮಾನ್ಯ ದೇವೇಗೌಡರೇ, ಎಪ್ಪತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು ಕನ್ನಡಿಗರ ಪ್ರೀತಿ-ಅಭಿಮಾನವನ್ನು ಉಂಡು ಬೆಳೆದ ನೀವು ‘’ನಾವು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿಯೇ ಚುನಾವಣೆ ನಡೆಸುತ್ತೇವೆ” ಎಂಬ ಶರಣಾಗತಿಯ ಹೇಳಿಕೆಯನ್ನು ನೀಡುವಾಗ ಕನಿಷ್ಠ ನಿಮ್ಮ ಆತ್ಮಾಭಿಮಾನವೂ ಕುಟುಕಲಿಲ್ಲವೇ? ಕನ್ನಡ-ಕರ್ನಾಟಕ ವಿರೋಧಿ ನಾಯಕನಿಗೆ ಈ ರೀತಿ ಶರಣಾಗುವುದು ಸಮಸ್ತ ಕನ್ನಡಿಗರಿಗೆ ಮಾಡುವ ದ್ರೋಹ ಎಂದು ನಿಮಗೆ ಅನಿಸಲಿಲ್ಲವೇ? ನಿಮ್ಮೊಳಗಿನ ರಾಜಕೀಯ ನಾಯಕ ಅಷ್ಟೊಂದು ದುರ್ಬಲ ಅಸಹಾಯಕನಾಗಿ ಹೋದನೇ?

ರಾಜಕೀಯ ಲಾಭಕ್ಕಾಗಿ ಮೈತ್ರಿ

ತಮ್ಮ ರಾಜಕೀಯ ಜೀವನದುದ್ದಕ್ಕೂ ಪ್ರಾದೇಶಿಕ ಆಶೋತ್ತರಗಳನ್ನು ಪ್ರತಿಪಾದಿಸಿಕೊಂಡು ಕೇಂದ್ರದ ಅಧಿಪತ್ಯವನ್ನು ಪ್ರಶ್ನಿಸುತ್ತಾ ಬಂದ ದೇವೇಗೌಡರು ಈ ಇಳಿವಯಸ್ಸಿನಲ್ಲಿ ಈ ರೀತಿಯ ರಾಜಕೀಯ ರಾಜಿ ಮಾಡಿಕೊಳ್ಳುವಂತೆ ಮಾಡಿದ ಶಕ್ತಿ ಮತ್ತು ವ್ಯಕ್ತಿ ಯಾರೇ ಇರಬಹುದು, ಆದರೆ ದೇವೇಗೌಡರು, ಕೇವಲ ರಾಜಕೀಯ ಲಾಭಕ್ಕಾಗಿ ಮೈತ್ರಿ ಮಾಡಿಕೊಂಡು ಸಮಸ್ತ ಆರೂವರೆ ಕೋಟಿ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದ್ದಾರೆ. ಈ ದ್ರೋಹಕ್ಕಾಗಿ ದೇವೇಗೌಡರು ಮತ್ತು ಅವರ ಪಕ್ಷ ಭಾರಿ ಬೆಲೆ ತೆರಲಿರುವುದು ಖಚಿತ” ಎಂದು ಸಿಎಂ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.

Exit mobile version