Site icon Vistara News

Lok Sabha Election 2024: ಬೆಂಗಳೂರಲ್ಲಿ ಅಬ್ಬರದ ರೋಡ್‌ ಶೋ ನಡೆಸಿದ ಸಿಎಂ ಸಿದ್ದರಾಮಯ್ಯ!

Lok Sabha Election 2024 Cm Siddaramaiah holds roadshow in Bengaluru

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರದ ಅಬ್ಬರ ಶುರುವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಈಗ ರೋಡ್‌ ಶೋಗಳನ್ನು (Road Show) ನಡೆಸಲು ಆರಂಭ ಮಾಡಿದ್ದಾರೆ. ಈ ಮೂಲಕ ಶಕ್ತಿ ಪ್ರದರ್ಶನವನ್ನು ಮಾಡುವುದಲ್ಲದೆ, ಮತದಾರರನ್ನು ಸೆಳೆಯುತ್ತಿದ್ದಾರೆ. ಭಾನುವಾರ ರಾಜಧಾನಿಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ (Bangalore North Lok Sabha constituency) ಸಿಎಂ ಸಿದ್ದರಾಮಯ್ಯ (CM Siddaramaiah) ಭರ್ಜರಿ ರೋಡ್‌ ಶೋ ಮಾಡಿದ್ದಾರೆ.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರೋಡ್‌ ಶೋದಲ್ಲಿ ಭಾಗಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಪರ ಮತಯಾಚನೆ ಮಾಡಿದ್ದಾರೆ. ರಸ್ತೆಯುದ್ದಕ್ಕೂ ಜನರತ್ತ ಕೈಬೀಸುತ್ತಾ ಬಂದ ಸಿಎಂ ಸಿದ್ದರಾಮಯ್ಯ, ಆಗಾಗ ಕಾಂಗ್ರೆಸ್‌ಗೆ ಮತ ಹಾಕಿ ಎಂದು ನಾಗರಿಕರಲ್ಲಿ ಮನವಿ ಮಾಡಿದರು.

Lok Sabha Election 2024 Cm Siddaramaiah holds roadshow in Bengaluru

ಮಲ್ಲೇಶ್ವರಂ, ಸುಬ್ರಮಣ್ಯನಗರ, ಗಾಯತ್ರಿನಗರದಲ್ಲಿ ರೋಡ್‌ ಶೋ

ಪ್ರೊ.ರಾಜೀವ್ ಗೌಡ ಪರವಾಗಿ ಮಲ್ಲೇಶ್ವರಂ, ಸುಬ್ರಮಣ್ಯನಗರ, ಗಾಯತ್ರಿನಗರದ ಕೆಲವು ರಸ್ತೆಗಳಲ್ಲಿ ರೋಡ್‌ ಶೋ ನಡೆಸಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹೊಸ ಶಕ್ತಿ ಹಾಗೂ ಹುರುಪನ್ನು ತುಂಬಿದರು. ಸುಡು ಬಿಸಿಲನ್ನೂ ಲೆಕ್ಕಿಸದೆ ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ರೋಡ್ ಶೋ ನಡೆಸಿದರು.

ರಾಜೀವ್ ಗೌಡ ಗೆಲ್ಲೋದು ಸತ್ಯ: ಸಿಎಂ ಸಿದ್ದರಾಮಯ್ಯ

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರೊ. ರಾಜೀವ್ ಗೌಡ (Rajeev Gowda) ಗೆಲ್ಲೋದು ಸಹ ಅಷ್ಟೇ ಸತ್ಯ ಎಂದು ಹೇಳಿದರು.

Lok Sabha Election 2024 Cm Siddaramaiah holds roadshow in Bengaluru

ರಾಜ್ಯದ ಪರ ಕೆಲಸ ಮಾಡದ ಶೋಭಾ

ಕೇಂದ್ರ ಕೃಷಿ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ರಾಜ್ಯದ ರೈತರ ಪರವಾಗಿ ಯಾವ ಕೆಲಸಗಳನ್ನೂ ಮಾಡಲಿಲ್ಲ. ಸಂಸದೆಯಾಗಿಯೂ ನಾಡಿನ ಪರವಾಗಿ ಕೆಲಸ ಮಾಡಲಿಲ್ಲ. ಇಂಥವರಿಗೆ ಬೆಂಬಲಿಸಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದಾ ಎಂದು ಪ್ರಶ್ನೆ ಮಾಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಂದಲೇ ಗೋ-ಬ್ಯಾಕ್ ಅನ್ನಿಸಿಕೊಂಡ ಶೋಭಾ ಕರಂದ್ಲಾಜೆ ಅವರಿಗೆ ಇಲ್ಲಿ ಟಿಕೆಟ್ ಕೊಟ್ಟಿದ್ದಾರೆ. ಉತ್ತರ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ಶೋಭಾ ಅವರಿಗೆ ಇಲ್ಲಿಂದಲೂ ನೀವು ವಾಪಸ್ ಕಳಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಶೋಭಾ ಕರಂದ್ಲಾಜೆ ಅವರು ಐದು ವರ್ಷಗಳ ಕಾಲ ರಾಜ್ಯಕ್ಕೆ ಆದ ಅನ್ಯಾಯಗಳ ಬಗ್ಗೆ ಒಂದೇ ಒಂದು ದಿನವೂ ಧ್ವನಿ ಎತ್ತಲಿಲ್ಲ. ಇಂಥವರಿಂದ ನಿಮ್ಮ ಮತಕ್ಕೆ ಬೆಲೆ ಬರುತ್ತದಾ? ನೀತಿ ಆಯೋಗದ ಉಪಾಧ್ಯಕ್ಷರಾಗಿ, ಉನ್ನತ ಶೈಕ್ಷಣಿಕ ಅರ್ಹತೆ ಮತ್ತು ತಿಳಿವಳಿಕೆ ಹೊಂದಿ ರಾಜ್ಯಕ್ಕೆ ಆದ ಅನ್ಯಾಯಗಳ ಬಗ್ಗೆ ನಿರಂತರವಾಗಿ ಧ್ವನಿ ಎತ್ತುವ ರಾಜೀವ್ ಗೌಡರಿಂದ ನಿಮ್ಮ ಮತಕ್ಕೆ ಉತ್ತಮ ಘನತೆ ಬರುತ್ತದೆ. ಆದ್ದರಿಂದ ಪ್ರಜ್ಞಾವಂತರಾಗಿ ಇವರನ್ನು ಗೆಲ್ಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಭಾರತೀಯರ ಬದುಕಿಗೆ ಅಚ್ಛೆ ದಿನ್ ಬರಲೇ ಇಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಹೇಳಿದ ಯಾವುದನ್ನೂ ಜಾರಿ ಮಾಡಲೇ ಇಲ್ಲ. ಕಪ್ಪು ಹಣ ತರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ, ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಅಡುಗೆ ಎಣ್ಣೆ, ಬೇಳೆ ಕಾಳು ಯಾವುದರ ಬೆಲೆಯನ್ನೂ ಇಳಿಸಲಿಲ್ಲ. ಬರೀ ಬಾಯಲ್ಲಿ ಅಚ್ಛೇ ದಿನ್ ಆಯೇಗಾ ಎಂದು ಭಾಷಣ ಭಾರಿಸಿದ್ದು ಬಿಟ್ಟರೆ ಭಾರತೀಯರ ಬದುಕಿಗೆ ಅಚ್ಛೆ ದಿನ್ ಬರಲೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರದ ಬೆಲೆ ಏರಿಕೆಗಳಿಂದ ಹೈರಾಣಾಗಿದ್ದ ನಮ್ಮ ನಾಡಿನ ಜನತೆಯ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದಲೇ ಐದು ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 5-6 ಸಾವಿರ ಉಳಿತಾಯ ಆಗುವ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಭದ್ರ ಆಗಿರುವವರೆಗೂ ಈ ಅನುಕೂಲ ಪ್ರತಿ ತಿಂಗಳೂ ಜನರ ಮನೆ ಬಾಗಿಲಿಗೆ ಬರುತ್ತಲೇ ಇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 14ರಂದು ಕರ್ನಾಟಕಕ್ಕೆ ಮೋದಿ; ಬೆಂಗಳೂರಲ್ಲಿ ರೋಡ್‌ ಶೋ

ದೇವೇಗೌಡರ ವಿರುದ್ಧ ವಾಗ್ದಾಳಿ

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದರೆ ಭಾರತ ತೊರೆಯುವುದಾಗಿ ಹೇಳಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗ ಮೋದಿಯವರ ಜತೆಗೇ ಸೇರಿದ್ದಾರೆ. ಇದ್ದದ್ದು ಇದ್ದಂಗೆ ಹೇಳಿದರೆ ದೇವೇಗೌಡರಿಗೆ ಸಿಟ್ಟು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕನ್ನಡಿಗರು ಸ್ವಾಭಿಮಾನ ಮೆರೆಯಬೇಕು

ನಾಡಿನ ಜನತೆಯ ತೆರಿಗೆ ಹಣದ ಪಾಲಿನಲ್ಲಿ ರಾಜ್ಯಕ್ಕೆ ವಿಪರೀತ ಅನ್ಯಾಯ ಮಾಡಿದರು. ರಾಜ್ಯದ ಜನತೆ ಪ್ರವಾಹದಿಂದ, ಬರಗಾಲದಲ್ಲಿ ನರಳುವಾಗ ಮೋದಿ, ಅಮಿತ್ ಶಾ ನೆಪಕ್ಕೂ ರಾಜ್ಯಕ್ಕೆ ಕಾಲಿಡಲಿಲ್ಲ. ರಾಜ್ಯದ ಪಾಲಿನ ಬರ ಪರಿಹಾರದ ಹಣವನ್ನು ಇವತ್ತಿನವರೆಗೂ ಒಂದೇ ಒಂದು ರೂಪಾಯಿ ನೀಡಲಿಲ್ಲ. ಹೀಗೆ ನಿರಂತರವಾಗಿ ರಾಜ್ಯದ ಜನತೆಗೆ ಮಹಾದ್ರೋಹ ಎಸಗಿದ ಬಿಜೆಪಿ ಯನ್ನು ಸೋಲಿಸಿ 7 ಕೋಟಿ ಕನ್ನಡಿಗರು ಸ್ವಾಭಿಮಾನ ಮೆರೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

Exit mobile version