ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕೋಲಾರದ ಕುರುಡು ಮಲೆ ದೇವಸ್ಥಾನದಿಂದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು (Congress Praja Dhvani Yatra) ಪ್ರಾರಂಭ ಮಾಡಲಾಗಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ರಾಜ್ಯ ಬಿಜೆಪಿ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬೃಹತ್ ರೋಡ್ ಶೋ (Congress Road Show) ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನರೇಂದ್ರ ಮೋದಿ (PM Narendra Modi) ಅವರನ್ನು ಕೆಳಗಿಳಿಸಿ. ರಾಹುಲ್ ಗಾಂಧಿ (Rahul Gandhi) ಅವರನ್ನು ಪ್ರಧಾನಿ ಮಾಡಿ ಎಂದು ಕರೆ ನೀಡಿದ್ದಾರೆ.
ರೋಡ್ ಶೋ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಐದೂ ವರ್ಷಗಳ ಕಾಲ ಅದನ್ನು ಮುಂದುವರಿಸುತ್ತೇವೆ. ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಆರ್ಥಿಕ ವ್ಯವಸ್ಥೆ ದಿವಾಳಿಯಾಗಲಿದೆ ಎಂದಿದ್ದರು. ನಾವು ಗ್ಯಾರಂಟಿ ಜಾರಿಗೊಳಿಸಿಲ್ಲವಾ? ಬಿಜೆಪಿಯವರಂತೆ ನಾವು ಸುಳ್ಳು ಹೇಳಿಲ್ಲ. ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಬಿಜೆಪಿಯವರು ನಮಗೆ ಮೋಸ ಮಾಡಿಬಿಟ್ಟರು. ಮೊದಲು ಅಕ್ಕಿ ಕೊಡುತ್ತೇವೆ ಅಂದ್ರು. ಆಮೇಲೆ ಕೊಡೋದಿಲ್ಲ ಅಂತಾ ಹೇಳಿದರು. ಮೋಸ ಮಾಡಿ ಅಕ್ಕಿ ಕೊಡಲಿಲ್ಲ. ಅಕ್ಕಿಗೆ ಹಣ ಕೊಡುತ್ತೇವೆ ಕೊಡಿ ಎಂದರೂ ಕೊಡಲಿಲ್ಲ ಎಂದು ಆರೋಪಿಸಿದರು.
ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ಗೆ ಮತ ಹಾಕಿ
ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ನಡೆದುಕೊಂಡಿದ್ದಾರಾ? ಪ್ರಧಾನಿ ನರೇಂದ್ರ ಮೋದಿ ಹತ್ತು ವರ್ಷಗಳಲ್ಲಿ ನುಡಿದಂತೆ ನಡೆದುಕೊಂಡರಾ? ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು, ಸೃಷ್ಟಿ ಆಯ್ತಾ? ಈಗ ಡೀಸೆಲ್, ಪೆಟ್ರೋಲ್ ಬೆಲೆ ಏನಾಗಿದೆ? ಆ ಜೆಡಿಎಸ್‌ನವರು ಬಿಜೆಪಿಯವರನ್ನು ಬಯ್ಯುತ್ತಿದ್ದರು. ಈಗ ಜೆಡಿಎಸ್‌ನವರೂ ಕೋಮುವಾದಿಗಳಾಗುತ್ತಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಬಿಜೆಪಿಗೆ ವೋಟ್ ಹಾಕುತ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Karnataka Drought: ಬರ ಪರಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ ತಪ್ಪುಗಳ ಪಟ್ಟಿಯನ್ನೇ ಇಟ್ಟ ಆರ್. ಅಶೋಕ್!
ಕಾಂಗ್ರೆಸ್ ನುಡಿದಂತೆ ನಡೆದಿಲ್ಲ!
ಸಿದ್ದರಾಮಯ್ಯ ಅವರು ಮಾತನಾಡುವ ಜೋಶ್‌ನಲ್ಲಿ ಒಮ್ಮೆ, “ಕಾಂಗ್ರೆಸ್ ನುಡಿದಂತೆ ನಡೆದಿಲ್ಲ” ಎಂದು ಬಾಯಿ ತಪ್ಪಿ ಹೇಳಿದರು. ತಕ್ಷಣವೇ ಸರಿಪಡಿಸಿಕೊಂಡ ಸಿದ್ದರಾಮಯ್ಯ, ಬಿಜೆಪಿ ನುಡಿದಂತೆ ನಡೆಯೋದಿಲ್ಲ. ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ ಎಂದು ಒತ್ತಿ ಹೇಳಿದರು.
ಬಿಜೆಪಿಯವರು ರೈತರ ಹಣ ದುಪ್ಪಟ್ಟು ಮಾಡಿದ್ರಾ? ಡಿಸೇಲ್ 57 ರೂಪಾಯಿ ಇದ್ದಿದ್ದು, ಈಗ 95 ರೂಪಾಯಿ ಆಗಿದೆ. ಪೆಟ್ರೋಲ್ 71 ರೂಪಾಯಿ ಇದ್ದಿದ್ದು, ಈಗ 106 ರೂಪಾಯಿ ಆಗಿದೆ. ಗ್ಯಾಸ್ ಬೆಲೆ 400ರಿಂದ 800ಕ್ಕೆ ಹೋಗಿದೆ. ಇವರಿಗೆ ನೀವು ವೋಟು ಹಾಕ್ತೀರಾ? ಜೆಡಿಎಸ್‌ನವರು ಕೋಮುವಾದಿ ಆಗುತ್ತಿದ್ದಾರೆ. ಜನರ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ. ಜಾತಿ ಹೆಸರಿನಲ್ಲಿ ವಿಂಗಡಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತನ್ನಿ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಿರಿ. ನರೇಂದ್ರ ಮೋದಿ ಅವರನ್ನು ಕೆಳಗಿಳಿಸಿ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಿ ಎಂದು ಕರೆ ನೀಡಿದರು.
ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸಿಎಂ ವಾಗ್ದಾಳಿ
ಬಿಜೆಪಿ, ಜೆಡಿಎಸ್ ಇಬ್ಬರು ಒಂದಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನರೇಂದ್ರ ಮೋದಿ ಪ್ರಧಾನಿ ಆಗಲ್ಲ ಅಂದಿದ್ದರು. ಹಾಗೊಂದು ವೇಳೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದರು. ನಾನು ಮುಸಲ್ಮಾನನಾಗಿ ಹುಟ್ಟುತ್ತೇನೆ ಅಂದಿದ್ದರು. ಈಗ ಬಿಜೆಪಿಯವರ ಜತೆಗೆ ಹೋಗಿದ್ದಾರೆ. ಜೆಡಿಎಸ್‌ಗೆ ಮೂರು ಸೀಟು ಬಿಟ್ಟುಕೊಟ್ಟಿದ್ದಾರೆ. ಕೋಲಾರಕ್ಕೂ ಜೆಡಿಎಸ್‌ಗೆ ಟಿಕೆಟ್ ಕೊಟ್ಟಿದ್ದಾರೆ. ಕೋಲಾರದಲ್ಲಿ ನೀವು ಜೆಡಿಎಸ್ ಅನ್ನು ಸೋಲಿಸಿ. ದಯಮಾಡಿ ನೀವು ಸೋಲಿಸಬೇಕು. ಕೆಸಿ ವ್ಯಾಲಿ ಯೋಜನೆ ತರುವಾಗ ಅಡ್ಡಿಪಡಿಸಿದ್ದರು. ಇದೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರೋಧ ಮಾಡಿದ್ದರು. ಅಂಥವರಿಗೆ ನೀವು ವೋಟು ಕೊಡ್ತೀರಾ? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಸೋಲಿಸಿ. ನಮ್ಮ ಅಭ್ಯರ್ಥಿ ಡಾ. ಕೆ.ವಿ. ಗೌತಮ್ ಕುಮಾರ್ ಅವರನ್ನು ಗೆಲ್ಲಿಸಿ. ಜೆಡಿಎಸ್ ಅಭ್ಯರ್ಥಿಯನ್ನು ನಾರಾಯಣಸ್ವಾಮಿ ಎರಡು ಬಾರಿ ಸೋಲಿಸಿದ್ದಾರೆ. ಬಂಗಾರಪೇಟೆಯಲ್ಲಿ ಮಲ್ಲೇಶ್ ಅವರನ್ನು ಸೋಲಿಸಿದ್ದಾರೆ. ಈ ಬಾರಿ ಮತಗಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ
ಬಯಸದೇ ಬಂದ ಭ್ಯಾಗ್ಯ ಎಂಬಂತೆ ಗೌತಮ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಸರ್ಕಾರ ನೀಡಿರುವ ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ಬರುತ್ತಿದೆಯೇ ಎಂದು ಕೇಳಿದಾಗ ಬರುತ್ತಿದೆ ಎಂದರು. ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದೀರಾ ಎಂದು ಕೇಳಿದೆ ಓಡಾಡುತ್ತಿದ್ದೇವೆ ಎಂದರು. ಅಕ್ಕಿ ಬರುತ್ತಿದೆಯೇ ಎಂದು ಕೇಳಿದೆ ಬರುತ್ತಿದೆ ಎಂದರು. ಕರೆಂಟ್ ಬಿಲ್ ಶೂನ್ಯ ಬರುತ್ತಿದೆಯೇ ಎಂದು ಕೇಳಿದೆ ಹೌದು ಎಂದು ಹೇಳಿದ್ದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ರೈತರಿಗೆ ಸಾಲ ಮನ್ನಾ
ಈಗ ನಡೆಯುತ್ತಿರುವುದು ಲೋಕಸಭೆ ಚುನಾವಣೆ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದರೆ 5 ನ್ಯಾಯ ಯೋಜನೆಗಳ ಮೂಲಕ 25 ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ, ಗ್ಯಾರಂಟಿ ಚೆಕ್‌ಗೆ ಸಹಿ ಹಾಕಿದ್ದಾರೆ. ಗೃಹಲಕ್ಷ್ಮಿ ಮಾದರಿಯಲ್ಲಿ ಮಹಾಲಕ್ಷ್ಮಿ ಯೋಜನೆ ಮೂಲಕ ವರ್ಷಕ್ಕೆ 1 ಲಕ್ಷ ಹಣವನ್ನು ಬಡ ಕುಟುಂಬದ ಮಹಿಳೆಯೊಬ್ಬಳಿಗೆ ನೀಡಲಾಗುವುದು. ಇನ್ನು ಯುವಕರಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ ನೀಡಲಾಗುವುದು. ರೈತರಿಗೆ ಸಾಲ ಮನ್ನಾ ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿ. ನರೇಗಾ ಕೂಲಿ 400 ರೂ. ನೀಡಲಾಗುವುದು. 25 ಲಕ್ಷ ರೂಪಾಯಿವರೆಗಿನ ಆರೋಗ್ಯ ವಿಮೆ ನೀಡಲಾಗುವುದು. ಇದು ಹಸ್ತದ ಗುರುತಿನ ಗ್ಯಾರಂಟಿ ಯೋಜನೆಗಳಾಗಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ @DKShivakumar, ಸಿಎಂ @siddaramaiah ಅವರು ಕೋಲಾರದ ಮುಳುಬಾಗಿಲು ಕುರುಡುಮಲೈ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಲೋಕಸಭೆ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. pic.twitter.com/tWSKTb6Ysp
— Karnataka Congress (@INCKarnataka) April 6, 2024
ಕಾಂಗ್ರೆಸ್‌ನಿಂದ ಸಾಮಾಜಿಕ ಭದ್ರತೆ
ಹುಟ್ಟಿದ ಸೂರ್ಯ ಮುಳುಗಿದಂತೆ, ಅರಳಿದ್ದ ಕಮಲ ಬಾಡುತ್ತಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಅಧಿಕಾರಕ್ಕೆ ಬಂದ ಕಾರಣ ಇಂದು ನಿಮಗೆ ಗ್ಯಾರಂಟಿ ಯೋಜನೆಗಳು ಸಿಗುತ್ತಿವೆ. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾಮಾಜಿಕ ನ್ಯಾಯ ನೀಡಲಿದೆ. ಎಲ್ಲ ವರ್ಗದವರಿಗೆ ಸಾಮಾಜಿಕ ಭದ್ರತೆ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಸೋಲಿನ ಭೀತಿಯಿಂದ ಬಿಜೆಪಿಯ ಅರ್ಧದಷ್ಟು ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಬಿಜೆಪಿ ದೇಶದಲ್ಲಿ 200ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವುದಿಲ್ಲ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ನಿಮ್ಮೆಲ್ಲರಿಗೂ ಅನುಕೂಲವಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ: Cholera Outbreak: ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ಪಾಸಿಟಿವ್; ಹಾಸ್ಟೆಲ್ ಕಿಚನ್ ಸೀಜ್!
ನುಡಿದಂತೆ ನಡೆದಿದ್ದೇವೆ; ನಮಗೇ ಮತ ಕೊಡಿ
ಕುರುಡುಮಲೆಯಲ್ಲಿ ವಿನಾಯಕನಿಗೆ ಪೂಜೆ ಮಾಡಿ ರಾಜ್ಯದ ಕಷ್ಟ ನಿವಾರಣೆ ಮಾಡಲು ಪ್ರಾರ್ಥಿಸಿ ಈ ಪ್ರಚಾರ ಆರಂಭಿಸಿದ್ದೇವೆ. ನಾವು ಕಳೆದ ಚುನಾವಣೆಯಲ್ಲಿ ನುಡಿದಂತೆ ನಡೆದಿದ್ದೇವೆ. ಈಗ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ದೇಶಕ್ಕೆ ಶಕ್ತಿ ತುಂಬಲು ಮುಂದಾಗಿದ್ದಾರೆ. ನೀವು ನಮ್ಮೆಲ್ಲರ ಕೈ ಬಲಪಡಿಸಬೇಕು. ಕೋಲಾರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಒಮ್ಮೆ ದಳ, ಒಮ್ಮೆ ಬಿಜೆಪಿ ಆಕಸ್ಮಿಕವಾಗಿ ಇಲ್ಲಿ ಗೆದ್ದಿದೆ. ಕೋಲಾರದವರು ಚಿನ್ನದ ಮಕ್ಕಳು. ಹಾಲು, ತರಕಾರಿ, ರೇಷ್ಮೆ ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ರಮೇಶ್ ಕುಮಾರ್ ಸೇರಿದಂತೆ ಈ ಭಾಗದ ನಾಯಕರು ಹೋರಾಟ ಮಾಡಿದ್ದಾರೆ. ಆ ಮೂಲಕ ಬೆಂಗಳೂರಿನ ನೀರನ್ನು ಇಲ್ಲಿಗೆ ತಂದು ರೈತರ ಬದುಕು ಹಸನು ಮಾಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷ ಕಾರಣ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಗೌತಮ್ ಬಹಳ ವಿದ್ಯಾವಂತ, ಬುದ್ಧಿವಂತ, ಪ್ರಜ್ಞಾವಂತ. ಈತ ಎಲ್ಲಾ ವರ್ಗದ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದ್ದಾನೆ. ಈತನನ್ನು ನಿಮ್ಮ ಮಗನಂತೆ ಸ್ವೀಕಾರ ಮಾಡಿ ಆಶೀರ್ವಾದ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಈ ವೇಳೆ, ಸಚಿವ ಎಂಸಿ ಸುಧಾಕರ್, ಬೈರತಿ ಸುರೇಶ್, ರಮೇಶ್ ಕುಮಾರ್ ಮತ್ತಿತರರು ಹಾಜರಿದ್ದರು .