Site icon Vistara News

Lok Sabha Election 2024: ಬನ್ನಿ ನಮ್ಮ ಕಪಾಳಕ್ಕೆ ಹೊಡೆಯಿರಿ; ನಾವೂ ಮೋದಿ ಮೋದಿ ಎನ್ನುತ್ತೇವೆ: ತಂಗಡಗಿಗೆ ಬಿಜೆಪಿ ಸವಾಲು

Lok Sabha Election 2024 Come and slap us We also say Modi Modi BJP challanges to Thangadagi

ಕೊಪ್ಪಳ: ಲೋಕಸಭಾ ಚುನಾವಣೆ (Lok Sabha Election 2024) ಪ್ರಚಾರ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಸಂಪುಟ ಸಚಿವ ಶಿವರಾಜ್‌ ತಂಗಡಗಿ (Shivaraj Tangadagi) ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ನಾಲಿಗೆ ಹರಿಬಿಟ್ಟಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕಾರಟಗಿಯಲ್ಲಿ ಮಾತನಾಡುತ್ತಾ, ಯುವಕರು ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿರುವುದಕ್ಕೆ ಈಗ ಕೊಪ್ಪಳ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, “ನಾವು ಮೋದಿ ಎನ್ನುತ್ತೇವೆ, ನಮಗೆ ಹೊಡೆಯಿರಿ ಬನ್ನಿ..” ಎಂದು ಸವಾಲೆಸೆದಿದ್ದಾರೆ.

“ಯುವಕರು ಮೋದಿ.. ಮೋದಿ.. ಎಂದರೆ ಕಪಾಳಕ್ಕೆ ಹೊಡಿಯಬೇಕು” ಎನ್ನುವ ಸಚಿವ ಶಿವರಾಜ ತಂಗಡಗಿ ಹೇಳಿಕೆ ವಿರುದ್ಧ ತಿರುಗಿಬಿದ್ದಿರುವ ಬಿಜೆಪಿ ಕಾರ್ಯಕರ್ತರು ಈ ಸಂಬಂಧ ಈಗ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದ್ದಾರೆ. “ನಾವು ಸಹ ಮೋದಿ.. ಮೋದಿ.. ಎನ್ನುತ್ತೇವೆ. ನಮಗೆ ಹೊಡೆಯಿರಿ ಬನ್ನಿ” ಎನ್ನುವ ಬಿಜೆಪಿ ಕಾರ್ಯಕರ್ತರು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Lok Sabha Election 2024: ಮೋದಿ ಗೆಲುವಿಗಾಗಿ ಈ 4 ವರ್ಗಗಳನ್ನು ಟಾರ್ಗೆಟ್‌ ಮಾಡಿದ ಬಿಜೆಪಿ

ಅಧಿಕಾರದ ದುರ್ಬುದ್ಧಿ ಈ ರೀತಿ ಮಾತನಾಡಿಸುತ್ತದೆ. ಇಂತಹ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಆರಾಧಿಸುವ ಅಸಂಖ್ಯಾತರು ತಕ್ಕ ಉತ್ತರ ನೀಡುತ್ತಾರೆ ಎಂದು ಪೋಸ್ಟರ್‌ಗಳನ್ನು ಹಾಕಿ ಪ್ರತ್ಯುತ್ತರ ನೀಡಲಾಗುತ್ತಿದೆ.

ವಾಟ್ಸಪ್‌ ಸ್ಟೇಟಸ್‌ಗಳಲ್ಲಿ ಹರಿದಾಟ

ಈಗ ಬಿಜೆಪಿ ಕಾರ್ಯಕರ್ತರು ವಾಟ್ಸಪ್‌ ಸ್ಟೇಟಸ್‌ಗಳಲ್ಲಿ ಈ ಪೋಸ್ಟರ್‌ಗಳನ್ನು ಹಾಕಿಕೊಳ್ಳುತ್ತಿದ್ದು, ಅಭಿಯಾನ ಮಾದರಿಯಲ್ಲಿ ಮಾಡುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಶಿವರಾಜ್‌ ತಂಗಡಗಿ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ತಂಗಡಗಿ ಹೇಳಿದ್ದೇನು?

ಕಾರಟಗಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಿವರಾಜ್‌ ತಂಗಡಗಿ, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಹಾಗೆ ನೋಡಿದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು. ನೀಡಿದ್ದಾರಾ? ಇನ್ನೂ ಯುವಕರು, ವಿದ್ಯಾರ್ಥಿಗಳು ಮೋದಿ ಮೋದಿ ಎನ್ನುತ್ತಾರೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ 5-10 ವರ್ಷ ಸುಳ್ಳು ಹೇಳುತ್ತಾರೆ. ಈ ಸುಳ್ಳು ಕೇಳಿಕೊಂಡು ಹೋಗಬೇಕಾ? ಎಂದು ಪ್ರಶ್ನೆ ಮಾಡಿದರು.

ಸಮುದ್ರದೊಳಗೆ ಪೂಜೆ

ದೇಶದಲ್ಲಿ 100 ಸ್ಮಾರ್ಟ್ ಸಿಟಿ ಮಾಡುತ್ತೇನೆ ಎಂದಿದ್ದರು. ಹಾಗಾದರೆ ಅದನ್ನು ಮಾಡಿದರಾ? ಅವರು ಸ್ಮಾರ್ಟ್ ಆದರು ಅಷ್ಟೆ. ಈಗ ಸಮುದ್ರದೊಳಗೆ ಹೋಗಿ ನವಿಲುಗರಿಯಿಂದ ಪೂಜೆ ಮಾಡಿದ್ದಾರೆ ಎಂದು ಶಿವರಾಜ್ ತಂಗಡಗಿ ಕಿಡಿಕಾರಿದರು.

ಇದನ್ನೂ ಓದಿ: Gali Janardana Reddy : ಗಣಿ ಧಣಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಮಡಿಲಿಗೆ, ಕಲ್ಯಾಣದಲ್ಲಿ ಲಾಭ ನಿರೀಕ್ಷೆ

ಕೊಪ್ಪಳ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಂತೆ

ಕೆಲವು ರಾಜ್ಯದಲ್ಲಿ ಬಿಜೆಪಿಯವರು ಹೋದರೆ ಹೊಡೆಯುತ್ತಾರೆ. ಮಿಜೊರಾಂ ಸೇರಿ ಕೆಲವು ರಾಜ್ಯಗಳಲ್ಲಿ ಅವರಿಗೆ ನೆಲೆ ಇಲ್ಲ. ಈ ಹಿಂದೆ ಕನಕಗಿರಿಯಿಂದ ಪಕ್ಷೇತರರಾದ ನನ್ನನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದರು.‌ ಆದರೆ, ಆಮೇಲೆ ಅನರ್ಹಗೊಳಿಸಿದರು. ಆಗ ನಾನು, ಈಗ ಸಂಗಣ್ಣ ಕರಡಿ. ಸಂಗಣ್ಣ ಮೋದಿ ಮೋದಿ ಎಂದು ಹೊಗಳಿದರು. ಪಾಪ ಒಳ್ಳೆಯ ಮನುಷ್ಯ. ಅವರಿಗೆ ಟಿಕೆಟ್ ನೀಡದೆ ಮನೆಯಲ್ಲಿ ಕೂರಿಸಿದ್ದಾರೆ. ಹೀಗಾಗಿ ಈಗ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಗೆದ್ದಂತೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.

Exit mobile version