Site icon Vistara News

Lok Sabha Election 2024: ಬಿಜೆಪಿಯ ʼಮೊಟ್ಟೆʼ ವಿಡಿಯೊ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲ; ಅಂತಹದ್ದೇನಿದೆ?

Lok Sabha Election 2024

Lok Sabha Election 2024

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಜೋರಾಗಿದೆ. ಈಗಾಗಲೇ ಎರಡು ಹಂತದ ಮತದಾನ ಮುಗಿದಿದ್ದು, ಮೂರನೇ ಹಂತಕ್ಕೆ ಸಿದ್ಧತೆ ನಡೆಯುತ್ತಿದೆ. ಕರ್ನಾಟದ 14 ಕ್ಷೇತ್ರಗಳಲ್ಲಿ ಮೇ 7ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಮಧ್ಯೆ ಬಿಜೆಪಿ (BJP) ಸೋಷಿಯಲ್‌ ಮೀಡಿಯಾದಲ್ಲಿ ಆಕ್ಷೇಪಾರ್ಹ ವಿಡಿಯೊ ಹಂಚಿಕೊಂಡಿದೆ ಎಂದು ಕಾಂಗ್ರೆಸ್‌ (Congress) ದೂರು ನೀಡಿದೆ. ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಲ್ಲಿ ಭೀತಿ ಹುಟ್ಟಿಸುವಂತ ವಿಡಿಯೊ ಪೋಸ್ಟ್‌ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಐಟಿ ಮುಖ್ಯಸ್ಥ ಅಮಿತ್‌ ಮಾಳವಿಯಾ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರು ಕಾಂಗ್ರೆಸ್‌ ದಾಖಲಿಸಿದೆ.

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ಸಲ್ಲಿಸಿದ ದೂರಿನಲ್ಲಿ, ಕರ್ನಾಟಕ ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನಿಮೇಟೆಡ್ ಪಾತ್ರಗಳನ್ನು ಚಿತ್ರಿಸುವ ವಿಡಿಯೊ ಇರುವುದನ್ನು ಉಲ್ಲೇಖಿಸಲಾಗಿದೆ.

ವಿಡಿಯೊದಲ್ಲಿ ಏನಿದೆ?

ಈ ವಿಡಿಯೊದ ಆರಂಭದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಮೀಸಲಾತಿಯ ಬುಟ್ಟಿಯಲ್ಲಿರುವ ಮೊಟ್ಟೆಗಳು ಎಂಬಂತೆ ಚಿತ್ರಿಸಲಾಗಿದೆ. ಬಳಿಕ ಈ ಮೀಸಲಾತಿ ಬುಟ್ಟಿಯಲ್ಲಿ ರಾಹುಲ್ ಗಾಂಧಿಯನ್ನು ಹೋಲುವ ಅನಿಮೇಟೆಡ್ ಪಾತ್ರ ಮುಸ್ಲಿಂ ಸಮುದಾಯದ ಮತ್ತೊಂದು ಮೊಟ್ಟೆಯನ್ನು ಇಡುವಂತೆ ತೋರಿಸಲಾಗಿದೆ. ಬಳಿಕ ಮೊಟ್ಟೆ ಬಿರಿದು ಪಕ್ಷಿಗಳು ಜೀವ ತಳೆಯುತ್ತವೆ. ಆಗ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಅವರನ್ನು ಹೋಲುವ ಪಾತ್ರಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗಿಂತ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನವನ್ನು ನೀಡುತ್ತವೆ. ಬಳಿಕ ಬಲಿಷ್ಠವಾಗುವ ಮುಸ್ಲಿಮರನ್ನು ಹೋಲುವ ಹಕ್ಕಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ಬುಟ್ಟಿಯಿಂದ ಹೊರದಬ್ಬುವುದು ವಿಡಿಯೊದಲ್ಲಿ ಕಂಡು ಬಂದಿದೆ.

“ಈ ವಿಡಿಯೊದಲ್ಲಿ ಮುಸ್ಲಿಂ ಸಮುದಾಯದವರಿಗೆ ಹೆಚ್ಚಿನ ಹಣವನ್ನು ನೀಡುವಂತೆ ಮತ್ತು ಮುಸ್ಲಿಂ ಸಮುದಾಯವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯವನ್ನು ಹೊರ ಹಾಕುವಂತೆ ಬಿಂಬಿಸಲಾಗಿದೆ” ಎಂದು ರಮೇಶ್ ಬಾಬು ಆರೋಪಿಸಿದ್ದಾರೆ. ʼʼಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾತ್ರವಲ್ಲ 1989ರ ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವೂ ಹೌದುʼʼ ಎಂದು ಹೇಳಿದ್ದಾರೆ. ಇಂತಹ ವಿಡಿಯೊಗಳು ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುವ ಸಾಧ್ಯತೆ ಇದೆ. 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದ ಸಂದರ್ಭದಲ್ಲಿ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊವನ್ನು ಅನುಮೋದಿಸಿದ್ದಕ್ಕಾಗಿ ಅವರು ರಾಜ್ಯ ಮಟ್ಟದ ಮಾಧ್ಯಮ ಮೇಲ್ವಿಚಾರಣಾ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಅದರ ಪ್ರಸಾರದ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌-ಬಿಜೆಪಿ ಮಧ್ಯೆ ʼಚೆಂಬುʼ ವಾರ್; ಗ್ಯಾರಂಟಿಗಳಿಂದ ಜನರಿಗೆ ಕಾಂಗ್ರೆಸ್‌ ಟೋಪಿ ಎಂದ ವಿಜಯೇಂದ್ರ

Exit mobile version