ನವದೆಹಲಿ: ಲೋಕಸಭಾ ಚುನಾವಣಾ (Lok Sabha Election 2024) ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್‌ಗೆ ಹೋಲಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿರುವ ಹೇಳಿಕೆ ವಿರುದ್ಧ ಕಾಂಗ್ರೆಸ್ (Congress) ಸೋಮವಾರ (ಏಪ್ರಿಲ್ 8) ಚುನಾವಣಾ ಆಯೋಗ (Election Commission)ಕ್ಕೆ ದೂರು ನೀಡಿದೆ.
ಕಾಂಗ್ರೆಸ್ ನಾಯಕರ ನಿಯೋಗವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ದೂರು ನೀಡಿದೆ. ಸರ್ಕಾರಿ ಕಟ್ಟಡಗಳು ಮತ್ತು ಕಾಲೇಜುಗಳಲ್ಲಿ ಪ್ರಧಾನಿ ಅವರ ಚಿತ್ರಗಳು ಮತ್ತು ದೊಡ್ಡ ಕಟೌಟ್ ಬಳಸುವುದು ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾವಿಸಿದೆ. ಚುನಾವಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಅವುಗಳನ್ನು ತೆಗೆದುಹಾಕಬೇಕೆಂದು ಮನವಿ ಸಲ್ಲಿಸಿದೆ.
Congress Party’s delegation led by Shri @salman7khurshid, Shri @MukulWasnik, Shri @Pawankhera & Shri @gurdeepsappal is meeting Election Commission at Nirvachan Sadan to raise complaint against PM Modi for MCC Violation.
— Aditya Goswami (@AdityaGoswami_) April 8, 2024
Some complaints which has been already raised by the Party. pic.twitter.com/7aevZvbIbu
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ʼʼಪ್ರಧಾನಿ ಮೋದಿ ಅವರ ಹೇಳಿಕೆ ವಿರುದ್ಧ ದೂರು ದಾಖಲಿಸಿದ್ದೇವೆ. ಅವರು ಕಾಂಗ್ರೆಸ್ ಪ್ರಣಾಳಿಕೆಯು ದೇಶವನ್ನು ವಿಭಜಿಸಲು ಮತ್ತು ಮುಸ್ಲಿಂ ಲೀಗ್‌ನ ಸ್ವಾತಂತ್ರ್ಯ ಪೂರ್ವ ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು. ಅಲ್ಲದೆ ಈ ಮುಸ್ಲಿಂ ಲೀಗ್ ಪ್ರಣಾಳಿಕೆಯ ಉಳಿದ ಭಾಗಗಳಲ್ಲಿ ಎಡಪಂಥೀಯರು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದ್ದಾರೆ ಎಂದಿದ್ದರು. ಹೀಗಾಗಿ ಅವರ ವಿರುದ್ಧ ದೂರು ನೀಡಿದ್ದೇವೆʼʼ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾದ ನಂತರ, ಕಾಂಗ್ರೆಸ್ ಮುಖಂಡ ಪವನ್ ಖೇರಾ ಮಾತನಾಡಿ, “ನಾವು ಚುನಾವಣಾ ಆಯೋಗದ ಮುಂದೆ ಪ್ರಧಾನಿ ಅವರ ಹೇಳಿಕೆ ಸೇರಿ ಹಲವು ಅಂಶಗಳನ್ನು ಪ್ರಸ್ತಾವಿಸಿದ್ದೇವೆ. ಅದರ ಬಗ್ಗೆ ನಾವು ಈ ಹಿಂದೆಯೂ ಚರ್ಚಿಸಿದ್ದೇವೆ ಮತ್ತು ನಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದೇವೆ. ಚುನಾವಣಾ ಪ್ರಚಾರದ ವೇಳೆ ಮಿಲಿಟರಿ ಸಮವಸ್ತ್ರ ಧರಿಸಿದ ಪ್ರಧಾನಿಯ ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಚುನಾವಣೆಯ ಸಮಯದಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಈಗಾಗಲೇ ಚುನಾವಣಾ ಆಯೋಗದ ಸಲಹೆ ಇದೆ. ಬಿಜೆಪಿ ನಿರಂತರವಾಗಿ ಇಂತಹ ಅಪರಾಧಗಳನ್ನು ಮಾಡುತ್ತಿರುವುದರಿಂದ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾವು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಖೇರಾ ಅವರೊಂದಿಗೆ ಪಕ್ಷದ ಮುಖಂಡರಾದ ಮುಕುಲ್ ವಾಸ್ನಿಕ್, ಸಲ್ಮಾನ್ ಖುರ್ಷಿದ್ ಮತ್ತು ಗುರ್ದೀಪ್ ಸಪ್ಪಲ್ ಇದ್ದರು. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷವು ಏಪ್ರಿಲ್ 6ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಇದನ್ನೂ ಓದಿ: Congress Manifesto: ಕಾಂಗ್ರೆಸ್ ಪ್ರಣಾಳಿಕೆ; ಅಲ್ಪಸಂಖ್ಯಾತರಿಗೆ ವಿಶೇಷ ಕೊಡುಗೆ ಘೋಷಣೆ, ಇಲ್ಲಿದೆ ಪಟ್ಟಿ
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೋದಿ ಹೇಳಿದ್ದೇನು?
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ʼʼಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ದಶಕಗಳ ಹಿಂದಿನದು. ಈಗ ಉಳಿದುಕೊಂಡಿರುವ ಪಕ್ಷವು ಭಾರತದ ನಿರೀಕ್ಷೆಗಳನ್ನು ಈಡೇರಿಸುವಂಥದ್ದಲ್ಲ. ಇತ್ತೀಚೆಗೆ ಬಿಡುಗಡೆಯಾದ ಕಾಂಗ್ರೆಸ್ ಪ್ರಣಾಳಿಕೆಯಿಂದ ಇದು ಸ್ಪಷ್ಟವಾಗಿದೆ. ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆʼʼ ಎಂದು ಟೀಕಿಸಿದ್ದರು.
ʼʼಕಾಂಗ್ರೆಸ್ ಪ್ರಣಾಳಿಕೆ ಸುಳ್ಳಿನ ಕಂತೆಯಾಗಿದ್ದು, ಪ್ರತಿಯೊಂದು ಪುಟವೂ ಭಾರತವನ್ನು ಒಡೆಯುವ ಪ್ರಯತ್ನದಂತಿದೆ. ಈ ಮುಸ್ಲಿಂ ಲೀಗ್ ಪ್ರಣಾಳಿಕೆಯ ಉಳಿದ ಭಾಗಗಳಲ್ಲಿ ಎಡಪಂಥೀಯ ಧೋರಣೆ ಪ್ರಾಬಲ್ಯ ಸಾಧಿಸಿದೆʼʼ ಎಂದು ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ