Site icon Vistara News

Lok Sabha Election 2024: ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಡ್ಡಿ; ಪೆಂಡಾಲ್‌, ಮೈಕ್‌ ತೆಗೆಸಿದ ಬಿಬಿಎಂಪಿ!

Lok Sabha Election 2024 Congress disrupts RSS programme BBMP removes pandal and mic

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಕಾವು ಜೋರಾಗಿದೆ. ಈ ವೇಳೆ ಬೆಂಗಳೂರಿನ ವೈಯ್ಯಾಲಿಕಾವಲ್‌ನಲ್ಲಿ ಆರ್‌ಎಸ್‌ಎಸ್‌ (RSS) ವತಿಯಿಂದ ಇಂದು (ಮಂಗಳವಾರ – ಏಪ್ರಿಲ್‌ 9) ಆಯೋಜನೆ ಮಾಡಲಾಗಿರುವ ಯುಗಾದಿ ಉತ್ಸವ (Ugadi Festival) ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಪೆಂಡಾಲ್‌ ಹಾಗೂ ಮೈಕ್‌ ಅನ್ನು ಬಿಬಿಎಂಪಿ ಹಾಗೂ ಚುನಾವಣಾ ಅಧಿಕಾರಿಗಳು ತೆಗೆಸಿದ್ದಾರೆ.

ಆರ್‌ಎಸ್‌ಎಸ್ ವತಿಯಿಂದ ಏರ್ಪಡಿಸಲಾಗಿರುವ ಸಂಜೆ ಏರ್ಪಡಿಸಲಾಗಿದ್ದ ಯುಗಾದಿ ಉತ್ಸವ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ಕಾಂಗ್ರೆಸ್‌ ಕಾರ್ಯಕರ್ತರು ವಿರೋಧ ಮಾಡುತ್ತಿದ್ದಾರೆ.

Lok Sabha Election 2024 Congress disrupts RSS programme BBMP removes pandal and mic

ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಜನ್ಮದಿನದ ನಿಮಿತ್ತ ಆಯೋಜನೆಯಾಗಿದ್ದ ಕಾರ್ಯಕ್ರಮ ಇದಾಗಿದ್ದು, ಇದಕ್ಕಾಗಿ ವೈಯ್ಯಾಲಿಕಾವಲ್‌ನಲ್ಲಿರುವ ಕರ್ನಲ್ ವಸಂತ್ ಕ್ರೀಡಾಂಗಣದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮವನ್ನು ನಡೆಸಲು ಬಿಡಬಾರದು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟುಹಿಡಿದು ಕುಳಿತಿದ್ದಾರೆ. ಹೀಗಾಗಿ ಸ್ಥಳಕ್ಕೆ ಬಂದು ಅಡ್ಡಿಪಡಿಸಿದ್ದಾರೆ.

ಕಾಂಗ್ರೆಸ್ ಆಕ್ಷೇಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾರ್ಯಕ್ರಮ ಸಂಘಟಕರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ಆದರೆ, ಈ ಕಾರ್ಯಕ್ರಮವನ್ನು ನಡೆಸಲು ತಾವು ಅನುಮತಿಯನ್ನು ಪಡೆದುಕೊಂಡಿದ್ದಾಗಿ ಸಂಘಟಕರು ಹೇಳಿದ್ದಾರೆ.

Lok Sabha Election 2024 Congress disrupts RSS programme BBMP removes pandal and mic

ಕಾಂಗ್ರೆಸ್‌ ಆಕ್ಷೇಪ ಏಕೆ?

ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಅನುಮತಿ ಕೇಳಿದ್ದರೆ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಹೇಗೆ ಅನುಮತಿ ಕೊಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಾದ ಮಾಡಿದ್ದಾರೆ. ಸ್ಥಳದಲ್ಲಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ.

ಪೆಂಡಾಲ್‌ ತೆಗೆಯಲು ಸೂಚನೆ

ಅದಾಗಲೇ ಕಾರ್ಯಕ್ರಮದ ಜಾಗದಲ್ಲಿ ಪೆಂಡಾಲ್ ಹಾಕಲಾಗಿತ್ತು. ಆದರೆ, ಕಾಂಗ್ರೆಸ್‌ ಆಕ್ರೋಶದ ಕಾರಣ, ಕಾರ್ಯಕ್ರಮದಲ್ಲಿ ಪೆಂಡಾಲ್‌ ಹಾಕುವಂತಿಲ್ಲ. ಮೈಕ್ ತೆಗೆಯಬೇಕು ಎಂದು ಬಿಬಿಎಂಪಿ ಅಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳು ಆಯೋಜಕರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಆಯೋಜಕರು ಎಲ್ಲವನ್ನೂ ತೆಗೆದಿದ್ದಾರೆ.

ಬೆಂಗಳೂರು ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇವೆ: ನಲಪಾಡ್‌

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್, ನಾವು ಕಾರ್ಯಕ್ರಮ ಮಾಡಲು ಕೆಲ ದಿನಗಳ ಹಿಂದೆ ಮನವಿ ಮಾಡಿದ್ದೆವು. ಆದರೆ, ನೀತಿ ಸಂಹಿತೆ ಇರುವುದರಿಂದ ಅನುಮತಿ ಕೊಡಲಿಲ್ಲ. ಅಲ್ಲದೆ, ಭಾನುವಾರ ಆಟದ ಮೈದಾನವು ಆಟಕ್ಕೆ ಮಾತ್ರ ಮೀಸಲು ಎಂಬ ನಿಯಮ ಇದೆ. ಹೀಗಾಗಿ ನಾವು ಬಿಬಿಎಂಪಿ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಚುನಾವಣಾ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಕಾರ್ಯಕ್ರಮ ನಡೆಸಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದೇವೆ. ಬೆಂಗಳೂರು ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದರು.

Exit mobile version