ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಕಣ ಮತ್ತಷ್ಟು ರಂಗೇರಿದೆ. ಶನಿವಾರ (ಮಾ. 16) ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಮೂರೂ ಪಕ್ಷಗಳು ಹೈ ಅಲರ್ಟ್ ಆಗಿವೆ. ಇನ್ನು ನಾಳೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಬಾಕಿ ಕ್ಷೇತ್ರಗಳ ಆಕಾಂಕ್ಷಿತ ಅಭ್ಯರ್ಥಿಗಳ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಕಾಂಗ್ರೆಸ್‌ನಲ್ಲಿ (Congress Karnataka) 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಬಾಕಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಈಗಾಗಲೇ ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡಿದೆ. ಬಿಜೆಪಿ ಈಗಾಗಲೇ ಕರ್ನಾಟಕದಲ್ಲಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು. ಈಗ ಬಾಕಿ ಕ್ಷೇತ್ರಗಳಿಗೆ ಅಂತಿಮ ಮಾಡಿ ಘೋಷಣೆ ಮಾಡುವುದಷ್ಟೇ ಬಾಕಿ ಇದೆ. ಸೋಮವಾರ (ಮಾ. 18) ಸಂಜೆ ವೇಳೆಗೆ ಬಹುತೇಕ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕಾಂಗ್ರೆಸ್ ಸಹ ಬಹುತೇಕ ಪಟ್ಟಿಯನ್ನು ಅಂತಿಮ ಮಾಡಿದ್ದಾಗಿ ಹೇಳಿಕೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ?
ಈಗಾಗಲೇ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಬಾಕಿ ಕ್ಷೇತ್ರಗಳಿಗೂ ಅಂತಿಮ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ 13 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾಕಿ ಪಟ್ಟಿಯು ಮಾ. 19ರ ನಂತರ ಫೈನಲ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
- ಬೆಂಗಳೂರು ಉತ್ತರ – ಪ್ರೊ. ರಾಜೀವ್ ಗೌಡ
- ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
- ಬೆಂಗಳೂರು ಕೇಂದ್ರ – ಹ್ಯಾರಿಸ್
- ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ
- ಚಾಮರಾಜನಗರ – ಸುನಿಲ್ ಬೋಸ್
- ಉಡುಪಿ ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ
- ಚಿತ್ರದುರ್ಗ – ಚಂದ್ರಪ್ಪ
- ದಕ್ಷಿಣ ಕನ್ನಡ – ಸೊರಕೆ
- ರಾಯಚೂರು – ಕುಮಾರ್ ನಾಯಕ
- ಕೊಪ್ಪಳ – ರಾಘವೇಂದ್ರ ಹಿಟ್ನಾಲ್ ವರ್ಸಸ್ ಬಸನಗೌಡ ಬಾದರ್ಲಿ
- ಬೀದರ್ – ರಾಜಶೇಖರ ಪಾಟೀಲ್
- ಬಳ್ಳಾರಿ – ನಾಗೇಂದ್ರ ವರ್ಸಸ್ ವೆಂಕಟೇಶ್ ಪ್ರಸಾದ್ ವರ್ಸಸ್ ವಿ.ಎಸ್. ಉಗ್ರಪ್ಪ
- ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
ನಮ್ಮ ಅಭ್ಯರ್ಥಿಗಳು ಬಹುತೇಕ ಫೈನಲ್ ಎಂದಿದ್ದ ಡಿಕೆಶಿ
“ನಾವು ನಮ್ಮ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದ್ದೇವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಮಾ. 16ರಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಕರ್ನಾಟಕದಲ್ಲಿನ ಮತದಾನದ ವಿವರ; ಇಲ್ಲಿದೆ ನೋಡಿ ವಿಡಿಯೊ
“ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಇಲ್ಲಿ ನಾವು ಹೋರಾಟ ಮಾಡಬೇಕು. ಅದನ್ನು ಸಂಭ್ರಮಿಸಿ, ಆನಂದಿಸಬೇಕು. ನಾವು ಮಾಡಿರುವ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು 20ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ನಾವು ನಮ್ಮ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದ್ದೇವೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಚುನಾವಣೆ ಘೋಷಣೆ ಬೆನ್ನಲ್ಲೇ ಕುರುಡು ಕಾಂಚಾಣದ ಕುಣಿತ; ಬೆಂಗಳೂರಲ್ಲಿ 13 ಲಕ್ಷ ರೂ. ಜಪ್ತಿ
ಮಾ. 19ರ ಸಿಇಸಿ ಸಭೆ ಬಳಿಕ ಅಂತಿಮ ನಿರ್ಣಯ
“ಭಾರತ ಜೋಡೊ ಯಾತ್ರೆ ಸಮಾರೋಪ ಹಾಗೂ ಇಂಡಿಯಾ ಒಕ್ಕೂಟ ಸಭೆ ಹಿನ್ನೆಲೆಯಲ್ಲಿ ಸಿಇಸಿ ಸಭೆ ಮುಂದೂಡಲಾಗಿದೆ. ಮಾ. 19ರಂದು ಸಿಇಸಿ ಸಭೆ ನಡೆಯುವ ಸಾಧ್ಯತೆ ಇದೆ. ನಂತರ ಉಳಿದ ಅಭ್ಯರ್ಥಿ ಅಂತಿಮ ಮಾಡಲಾಗುವುದು. ನೀವು ಬಿಜೆಪಿಯಲ್ಲಿ ನೋಡುತ್ತಿರುವ ಭಿನ್ನಮತ ಕಾಂಗ್ರೆಸ್ ಪಕ್ಷದಲ್ಲಿ ಆಗುವುದಿಲ್ಲ” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಹೀಗಾಗಿ ಕಾಂಗ್ರೆಸ್ ಸೋಮವಾರ ತನ್ನ ಇನ್ನೊಂದು ಪಟ್ಟಿಯನ್ನು ಬಿಡುಗಡೆ ಮಾಡುತ್ತದೆಯೋ ಅಥವಾ ಮತ್ತೆರಡು ದಿನ ಕಾಯಲಿದೆಯೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.