ದೆಹಲಿ: ಲೋಕಸಭಾ ಚುನಾವಣೆ(Lok Sabha Election 2024)ಯ ಹೊಸ್ತಿಲಿನಲ್ಲಿ ಕಾಂಗ್ರೆಸ್ (Congress)ಗೆ ಮತ್ತೊಂದು ಹಿನ್ನಡೆಯಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಅಜಯ್ ಕಪೂರ್ (Ajay Kapoor) ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ, ಉತ್ತರ ಪ್ರದೇಶದ ಕಾನ್ಪುರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅಜಯ್ ಕಪೂರ್ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಅಜಯ್ ಕಪೂರ್ ಹೇಳಿದ್ದೇನು?
ಬಳಿಕ ಬಿಜೆಪಿ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಜಯ್ ಕಪೂರ್, ಇದು ಪುನರ್ಜನ್ಮವಿದ್ದಂತೆ ಎಂದು ವ್ಯಾಖ್ಯಾನಿಸಿದರು. “ದೇಶದ ಪ್ರಧಾನಿ ಮೋದಿ ಅವರ ಕುಟುಂಬವನ್ನು ಸೇರುವ ಮೂಲಕ ನಾನು ಭಾವಪರವಶನಾಗಿದ್ದೇನೆ” ಎಂದು ಭಾವುಕರಾದರು. ʼʼಕಾಂಗ್ರೆಸ್ ಜತೆಗಿನ 35 ವರ್ಷಗಳ ಸುದೀರ್ಘ ಒಡನಾಟದಲ್ಲಿ ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ ಇಂದು ದೇಶದ ಪ್ರಗತಿಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಮೋದಿ ಅವರ ಕುಟುಂಬವನ್ನು ಸೇರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು.
#WATCH | Ajay Kapoor, Congress Secretary, joins the BJP in Delhi. pic.twitter.com/mIBPzhyq2t
— ANI (@ANI) March 13, 2024
ಅಜಯ್ ಕಪೂರ್ ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ್ದಾರೆ. “ನಾನು 35 ವರ್ಷಗಳಿಂದ ಕಾಂಗ್ರೆಸ್‌ಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದೇನೆ. ಈಗ ನನ್ನ ಹುದ್ದೆ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿʼʼ ಎಂದು ಅವರು ಬರೆದುಕೊಂಡಿದ್ದಾರೆ.
ಮೋದಿ ಯುಗ ಪುರುಷ
ಪ್ರಧಾನಿ ಮೋದಿ ಅವರನ್ನು ಅಜಯ್ ಕಪೂರ್ ‘ಯುಗಪುರುಷ’ ಎಂದು ಬಣ್ಣಿಸಿದರು. ಉಳಿದ ರಾಜಕೀಯ ಜೀವನವನ್ನು ಮೋದಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿಗಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. “ಇದು ನನ್ನ ಹೊಸ ಜೀವನದ ಪ್ರಾರಂಭ. ನಾನು ನನ್ನ ಮುಂದಿನ ಜೀವನವನ್ನು ಬಿಜೆಪಿ ನಾಯಕತ್ವಕ್ಕೆ ಅರ್ಪಿಸುತ್ತೇನೆ. ಪ್ರಧಾನಿ ಮೋದಿ ಅವರ ಕುಟುಂಬದ ಸದಸ್ಯನಾಗಿ, ನಾನು ಬಿಜೆಪಿ ಮತ್ತು ಸಮಾಜಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ಅಜಯ್ ಕಪೂರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ʼʼಕಾಂಗ್ರೆಸ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕಪೂರ್ ಸುಮಾರು ಆರು ವರ್ಷಗಳ ಕಾಲ ಬಿಹಾರದ ಉಸ್ತುವಾರಿಯಾಗಿದ್ದರು. ಅವರು ಬಿಜೆಪಿಗೆ ಆಗಮಿಸಿರುವುದರಿಂದ ಬಿಹಾರ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಪಕ್ಷಕ್ಕೆ ಲಾಭವಾಗಲಿದೆʼʼ ಎಂದು ಹೇಳಿದರು.
ಇದನ್ನೂ ಓದಿ: Modi in Karnataka : ಮಾರ್ಚ್ 16ರಂದು ಮೋದಿ ಕಲಬುರಗಿಗೆ, 18ರಂದು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ
ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಪದ್ಮಾಕರ್ ವಾಲ್ವಿ ಬಿಜೆಪಿಗೆ ಸೇರಿದ್ದರು. 56 ವರ್ಷದ ಅಜಯ್ ಕಪೂರ್ 2002 ಮತ್ತು 2017ರ ನಡುವೆ ಮೂರು ಬಾರಿ ಕಾಂಗ್ರೆಸ್‌ನಿಂದ ಕಾನ್ಪುರದ ಶಾಸಕರಾಗಿದ್ದರು. ಆದಾಗ್ಯೂ 2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರು ಕಿದ್ವಾಯಿ ನಗರದಿಂದ ಪರಾಭವಗೊಂಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನಿಂದ ಕಾನ್ಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಇದೀಗ ಅವರು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಲೆಕ್ಕಾಚಾರ ತಲೆಕೆಳಗಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ