Site icon Vistara News

Lok Sabha Election 2024: ಆ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್‌ಗೆ ಸಚಿವರ‌ ಕುಟುಂಬವೇ ಅನಿವಾರ್ಯ!

Lok Sabha Election 2024 Congress needs ministers family for three seats

ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಎಲ್ಲ ರಾಜಕೀಯ ಪಕ್ಷಗಳು ಭಾರಿ ಸಿದ್ಧತೆಗಳನ್ನು ನಡೆಸುತ್ತಿವೆ. ಈ ನಡುವೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ. ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಎಲ್ಲರೂ ಗೆಲ್ಲುವ ಅಭ್ಯರ್ಥಿಯನ್ನೇ ನೋಡುತ್ತಿದ್ದಾರೆ. ಇದಕ್ಕಾಗಿ ಹಲವು ಲೆಕ್ಕಾಚಾರಗಳು ಹಾಗೂ ಸಮೀಕರಣಗಳನ್ನು ಹಾಕಿಕೊಳ್ಳಲಾಗುತ್ತಿದೆ. ಇದೆಲ್ಲದರ ಹೊರತಾಗಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ (Congress Karnataka) ಕೆಲವು ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಹೀಗಾಗಿ ಪ್ರಮುಖವಾಗಿ ಮೂರು ಕ್ಷೇತ್ರಗಳಿಗೆ ಸಚಿವರ‌ ಕುಟುಂಬವೇ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ದಕ್ಷಿಣ, ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ. ಇಲ್ಲಿ ಆಯಾ ಭಾಗದ ಸಚಿವರ ಹಿಡಿತ ಗಟ್ಟಿಯಾಗಿದ್ದು, ಅವರ ಕುಟುಂಬದಿಂದ ಕಣಕ್ಕಿಳಿಸಿದರೆ ಮಾತ್ರ ಫೈಟ್‌ ನೀಡಲು ಸಾಧ್ಯ. ಜತೆಗೆ ಕಷ್ಟಪಟ್ಟರೆ ಗೆಲುವಿನ ರೇಖೆಯನ್ನೂ ಮುಟ್ಟಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ. ಹೀಗಾಗಿ ಈ ಮೂರು ಕ್ಷೇತ್ರಗಳಲ್ಲಿ ಸಚಿವರ ಪುತ್ರ, ಪುತ್ರಿಯರ ಸ್ಪರ್ಧೆ ಬಹುತೇಕ ಖಚಿತವಾಗಿದೆ ಎಂದೇ ಹೇಳಲಾಗುತ್ತಿದೆ.

ಈ‌ ಕುರಿತು ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸಹ ಅಭಿಪ್ರಾಯಗಳು ವ್ಯಕ್ತವಾಗಿವೆ. ತಡರಾತ್ರಿ ಸಚಿವ ಸತೀಶ್ ಜಾರಕಿಹೊಳಿ‌, ಸಚಿವ ರಾಮಲಿಂಗಾರೆಡ್ಡಿ ಅವರನ್ನು ಕರೆಸಿ‌ ಮಾತುಕತೆ ನಡೆಸಲಾಗಿದೆ. ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ‌ಯನ್ನು ಕಣಕ್ಕಿಳಿಸುವುದು ಅನಿವಾರ್ಯ ಎಂಬ ಸ್ಥಿತಿ ಇದೆ. ಒಂದು ವೇಳೆ ಇಲ್ಲಿ ಪ್ರಿಯಾಂಕಾ ಜಾರಕಿಹೊಳಿ‌ ಸ್ಪರ್ಧೆ ಮಾಡಿದರೆ ಫೈಟ್ ಆಗಲಿದೆ. ಹೀಗಾಗಿ ಅವರನ್ನು ಕಣಕ್ಕೆ ಇಳಿಸಿ ಎಂದು ಸತೀಶ್‌ ಜಾರಕಿಹೊಳಿಗೆ ಹೇಳಿದ್ದಾರೆ ಎನ್ನಲಾಗಿದೆ.

ಒಪ್ಪುತ್ತಾರಾ ಸತೀಶ್‌ ಜಾರಕಿಹೊಳಿ?

ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (Priyanka Jarakiholi) ಅವರನ್ನು ಕಣಕ್ಕಿಳಿಸುವ ಬಗ್ಗೆ ಸತೀಶ್‌ ಜಾರಕಿಹೊಳಿ ಇನ್ನೂ ಒಮ್ಮತಕ್ಕೆ ಬಂದಿಲ್ಲ ಎನ್ನಲಾಗಿದೆ. ಪುತ್ರಿಯನ್ನು ರಾಜಕೀಯಕ್ಕೆ ತರಲು ಸತೀಶ್‌ ಸಹಿತ ಅವರ ಕುಟುಂಬದಲ್ಲಿ ಯಾರಿಗೂ ಮನಸ್ಸಿಲ್ಲ ಎನ್ನಲಾಗಿದೆ. ಹಾಗಾಗಿ ಸತೀಶ್‌ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಬೆಳಗಾವಿ ಭಾಗದಲ್ಲಿ ಜಾರಕಿಹೊಳಿ ಕುಟುಂಬದ ಹಿಡಿತ ಚೆನ್ನಾಗಿಯೇ ಇದೆ. ಈ ಕಾರಣದಿಂದಾಗಿ ಸತೀಶ್‌ ಮೇಲೆ ಒತ್ತಡ ಹೆಚ್ಚುತ್ತಿದೆ. ಈ ಕಾರಣದಿಂದಲೇ ಸ್ಕ್ರೀನಿಂಗ್‌ ಕಮಿಟಿ ಸಭೆ ಬಳಿಕವೂ ಸಿಎಂ ಜತೆ ಸತೀಶ್‌ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮೃಣಾಳ್‌ ಸ್ಪರ್ಧೆ?

ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಮೃಣಾಲ್ ಹೆಬ್ಬಾಳ್ಕರ್ (Mrunal Hebbalkar) ಅವರ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗಿದೆ. ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Vistara news polling booth: ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ. ಸುರೇಶ್‌ ಕಿಂಗ್!‌ ಮೈತ್ರಿ ಆಟ ಇಲ್ಲಿ ನಡೆಯಲ್ಲ?

ಬೆಂಗಳೂರು ದಕ್ಷಿಣಕ್ಕೆ ಸೌಮ್ಯಾ ಅಭ್ಯರ್ಥಿ?

ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಹ ಪ್ರಬಲ ಅಭ್ಯರ್ಥಿಯ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ (Sowmya Reddy) ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಾಯಕರು ಒಲವು ತೋರಿದ್ದಾರೆ. ಆದರೆ, ಪುತ್ರಿಯನ್ನು ಕಣಕ್ಕಿಳಿಸಲು ಸಚಿವ ರಾಮಲಿಂಗಾರೆಡ್ಡಿ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸ್ಕ್ರೀನಿಂಗ್ ಕಮಿಟಿ ಸಭೆಗೆ ಅವರನ್ನು ಕರೆಸಿ‌ ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ಒಂದು ವೇಳೆ ಸೌಮ್ಯಾ ಸ್ಪರ್ಧೆ ಮಾಡಿದರೆ ಫೈಟ್ ಕೊಡಬಹುದು. ಹಾಗಾಗಿ ಅವರನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ವರಿಷ್ಠರು ಹೇಳಿದ್ದಾರೆ. ಇದಕ್ಕೆ ಮೊದಲು ಇಲ್ಲ ಎಂದಿದ್ದ ಸಚಿವ ರಾಮಲಿಂಗಾರೆಡ್ಡಿ ಅವರು ಬಳಿಕ ಸಮಾಯಾವಕಾಶ ಕೇಳಿದ್ದಾರೆ. ತಮ್ಮ ಬೆಂಬಲಿಗರು ಹಾಗೂ ಪುತ್ರಿಯ ಜತೆಗೆ ಸಮಾಲೋಚಿಸಿ ತಿಳಿಸುವುದಾಗಿ ಹೇಳಿದ್ದಾರೆ.

Exit mobile version