Site icon Vistara News

Lok Sabha Election 2024: ಕಾಂಗ್ರೆಸ್‌ನಿಂದ ಬಿಡಿಎ ಮೂಲಕ ಹಣ ಸಂಗ್ರಹ ಶಂಕೆ; ಆಯೋಗಕ್ಕೆ ಬಿಜೆಪಿ ದೂರು

Lok Sabha Election 2024 Congress suspects collection of funds through BDA BJP complains to EC

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಡಿಎ (BDA) ಮೂಲಕ ಚುನಾವಣೆಗೆ ಅಡ್ಡದಾರಿಯಿಂದ ಹಣ ಸಂಗ್ರಹಿಸುವ ಶಂಕೆಯಿದ್ದು, ಇದರ ವಿರುದ್ಧ ಚುನಾವಣಾ ಆಯೋಗಕ್ಕೆ (Election Commission) ದೂರು ಕೊಡಲಾಗಿದೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ (Suresh Kumar) ತಿಳಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್. ಸುರೇಶ್ ಕುಮಾರ್, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿ ಶಿವರಾಮ ಕಾರಂತ ಬಡಾವಣೆಯಲ್ಲಿನ ಗುತ್ತಿಗೆದಾರರ ಪಾವತಿಗಾಗಿ 1 ಸಾವಿರ ಕೋಟಿಯಿಂದ 2 ಸಾವಿರ ಕೋಟಿ ರೂಪಾಯಿ ಬೇಕಿದ್ದು, ಅದಕ್ಕಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲ ನಿವೇಶನಗಳನ್ನು ಬ್ಯಾಂಕಿಗೆ ಅಡಮಾನ ಇಟ್ಟು ಹಣ ಪಡೆಯಲು ಬಿಡಿಎದವರು ಹೊರಟಿದ್ದಾರೆ. ನೀತಿ ಸಂಹಿತೆ ಇರುವಾಗ ಇಷ್ಟೊಂದು ಭಾರಿ ಮೊತ್ತ ಪಡೆಯುವುದು ಅನುಮಾನಕ್ಕೆ ಆಸ್ಪದವಾಗಿದೆ. ಗುತ್ತಿಗೆದಾರರಿಗೆ ಈಗಲೇ ಹಣ ಕೊಡಬೇಕೇ? ಇದರ ಹಿಂದಿನ ಉದ್ದೇಶ ಏನಿದೆ ಎಂದು ಪ್ರಶ್ನಿಸಿದರು.

ಅಡ್ಡದಾರಿಗಳಿಂದ ಹಣದ ವ್ಯವಸ್ಥೆ?

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಮೂಲಸೌಕರ್ಯ ಕಾಮಗಾರಿಗಳನ್ನು ಮುಂದುವರಿಸಲು ಗುತ್ತಿಗೆದಾರರಿಗೆ ಪಾವತಿ ನೆಪ ಒಡ್ಡಿ, ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲು ಅಡ್ಡದಾರಿಗಳಿಂದ ಹಣದ ವ್ಯವಸ್ಥೆ ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಬಿಡಿಎದಿಂದ ಯಾವುದೇ ರೀತಿಯ ಪಾವತಿಗಳು ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು. ನೀತಿ ಸಂಹಿತೆ ಮುಗಿಯುವವರೆಗೆ ಇಂಥ ದುಸ್ಸಾಹಸಕ್ಕೆ ಅವಕಾಶ ಕೊಡಬಾರದೆಂದು ಕೋರಿದ್ದೇವೆ ಎಂದರು.

ಬೂತ್‌ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜ ಹಾರಾಟ

ನಿನ್ನೆ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಗಿದೆ. 1980ರ ಏಪ್ರಿಲ್ 6ರಂದು ನಮ್ಮ ಪಕ್ಷವನ್ನು ಸ್ಥಾಪಿಸಲಾಗಿತ್ತು. ಇದರ ಅಂಗವಾಗಿ ರಾಜ್ಯದೆಲ್ಲೆಡೆ ಎಲ್ಲ ಕಾರ್ಯಕರ್ತರ ಮನೆಗಳ ಮೇಲೆ ಅದರಲ್ಲೂ ವಿಶೇಷವಾಗಿ ಎಲ್ಲ ಬೂತ್ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಿದ್ದೇವೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದರು.

ತನಗೆ ಯಾವ ಪಕ್ಷದ ಮೇಲೆ ಗೌರವ, ವಿಶ್ವಾಸ ಇದೆಯೋ ಅಂಥವರು ತಮ್ಮ ಮನೆಯ ಮೇಲೆ ಧ್ವಜ ಹಾಕಲು ಮುಕ್ತ ಅನುಮತಿ ಇದೆ ಎಂದು ಚುನಾವಣಾ ಆಯೋಗವೇ ತಿಳಿಸಿದೆ. ನೀತಿ ಸಂಹಿತೆಗೆ ಅದಕ್ಕೂ ಸಂಬಂಧ ಇಲ್ಲ ಎಂದು ತಿಳಿಸಲಾಗಿದೆ. ಅದೇ ರೀತಿ ತಮ್ಮ ವಾಹನಗಳ ಮೇಲೆ ಧ್ವಜ ಹಾಕಲು ನಿಯಮ ಇದೆ. ಸ್ವಯಂ ಇಚ್ಛೆಯಿಂದ, ಸ್ವಯಂ ಸ್ಫೂರ್ತಿಯಿಂದ ಇದನ್ನು ಮಾಡಲು ತಿಳಿಸಲಾಗಿದೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಇಬ್ಬಗೆ ನೀತಿ ಏಕೆ?

ರಾಜಾಜಿನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಳಾಂಗಣ ಕ್ರೀಡಾಂಗಣವಿದೆ. ಆ ಆವರಣದಲ್ಲಿರುವ ವಾಜಪೇಯಿಯವರ ಮುಖಕ್ಕೆ ಬಟ್ಟೆ ಸುತ್ತಿದ್ದರು. ಅದು ಖಾಸಗಿ ಜಾಗ. ಇದು ಅತ್ಯಂತ ಹಾಸ್ಯಾಸ್ಪದ ಕ್ರಮ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಟೀಕಿಸಿದರು. ಆದರೆ, ರಾಜೀವ್ ಗಾಂಧಿ ಅಷ್ಟಪಥ ಕಾರಿಡಾರನ್ನು ಮುಚ್ಚಿರಲಿಲ್ಲ. ಸೆಂಟ್ರಲ್ ಟಾಕೀಸಿನ ರಾಜೀವ್ ಗಾಂಧಿ ಪ್ರತಿಮೆಗೆ ಬಟ್ಟೆ ಸುತ್ತುವುದಿಲ್ಲ. ಇಬ್ಬರೂ ಭಾರತ ರತ್ನ ಪುರಸ್ಕೃತರು. ಈ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನೆ ಮಾಡಿದ ಮೇಲೆ ಬಟ್ಟೆ ಸುತ್ತಿದ್ದನ್ನು ತೆಗೆದರು ಎಂದು ಶಾಸಕ ಎಸ್. ಸುರೇಶ್ ಕುಮಾರ್ ವಿವರಿಸಿದರು.

ಅಭ್ಯರ್ಥಿಗಳ ಮೇಲಿನ ಕ್ರಿಮಿನಲ್‌ ಕೇಸ್‌ಗಳೆಷ್ಟು?

ಏ. 26ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದ ಮೊದಲನೇ ಹಂತದಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಕಡೆಯಿಂದ ಪ್ರತಿ ಅಭ್ಯರ್ಥಿಯ ಒಟ್ಟು ಕ್ರಿಮಿನಲ್ ಕೇಸ್ ಎಂಬ ಮಾಹಿತಿ ಇದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಅಭ್ಯರ್ಥಿಗಳ ವಿರುದ್ಧ 18, ಬಿಜೆಪಿ ವಿರುದ್ಧ 10 ಮತ್ತು ಜೆಡಿಎಸ್ ವಿರುದ್ಧ 5 ಕೇಸುಗಳಿವೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ವಿವರಿಸಿದರು.

ಈ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಟ್ಟರು

ಬೆಂಗಳೂರಿಗೆ ನೀರಿನ ಸಮಸ್ಯೆ ಆಗುವ ಮುನ್ಸೂಚನೆ ಇದ್ದರೂ ಇಂಡಿ ಒಕ್ಕೂಟದ ಪಕ್ಷ ಎಂಬ ಕಾರಣಕ್ಕೆ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ಈಗ ಕಾವೇರಿ 5ನೇ ಹಂತದ ಯೋಜನೆ ಜಾರಿಯಲ್ಲಿದೆ. ಅದು ಕಳೆದ ವರ್ಷವೇ ಮುಗಿಯಬೇಕಿತ್ತು. ಸರ್ಕಾರದ ಜವಾಬ್ದಾರಿಯುತ ಸಚಿವರು ಯೋಜನೆ ಪೂರ್ಣಗೊಳಿಸಲು ಕ್ರಮ ತೆಗೆದುಕೊಂಡಿಲ್ಲವೇಕೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಪ್ರಶ್ನೆಯನ್ನು ಮುಂದಿಟ್ಟರು.

ಇದನ್ನೂ ಓದಿ: Lok Sabha Election 2024: ಬೆಂಗಳೂರಲ್ಲಿ ಮತಬೇಟೆಗಿಳಿದ ಸಿಎಂ ಸಿದ್ದರಾಮಯ್ಯ; ಮಹಿಳಾ ಕೇಂದ್ರಿತ ಪ್ರಚಾರ!

ಕಾನೂನು ವಿಭಾಗದ ಕೈಪಿಡಿ ಬಿಡುಗಡೆ

ಇದೇ ವೇಳೆ ಅವರು ಕಾನೂನು ವಿಭಾಗದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಈ ಕೈಪಿಡಿಯಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಚುನಾವಣಾ ನಿಯಮಗಳ ಬಗ್ಗೆ ಮತ್ತು ಚುನಾವಣಾ ಸಂಬಂಧಿತ ಕಾನೂನುಗಳನ್ನು ತಿಳಿಸಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇದರಲ್ಲಿ ಅಭಿಪ್ರಾಯ ಬರೆದಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಪಕ್ಷವಾದ ಬಿಜೆಪಿ ಕಾನೂನಿಗೆ ಅನುಗುಣವಾಗಿ ಸ್ಪರ್ಧೆ ಮಾಡಲಿದೆ. ಅದಕ್ಕಾಗಿ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕೈಪಿಡಿ ಹೊರತರಲಾಗಿದೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಹೇಳಿದರು.

ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ ಕುಮಾರ್, ಚುನಾವಣಾ ನಿರ್ವಹಣಾ ಸಮಿತಿ ಪ್ರಮುಖ ದತ್ತಗುರು ಹೆಗಡೆ, ಕಾನೂನು ವಿಭಾಗದ ಪ್ರಮುಖ ವಿನೋದ್‍ ಕುಮಾರ್, ಪ್ರಮುಖರು ಉಪಸ್ಥಿತರಿದ್ದರು.

Exit mobile version