ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಕಣ ದಿನೇ ದಿನೆ ರಂಗೇರುತ್ತಿದೆ. ಎಲ್ಲ ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ. ಇನ್ನು ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರಗಳು ತಮ್ಮ ಸರ್ಕಾರಿ ಕಾರ್ಯಕ್ರಮಗಳಿಗೆ ತ್ವರಿತವಾಗಿ ಚಾಲನೆ ನೀಡುತ್ತಾ ಬರುತ್ತಿದ್ದಾರೆ. ಇದೇ ವೇಳೆ ಇನ್ನು ಮೂರ್ನಾಲ್ಕು ದಿನದಲ್ಲಿ ಅಂದರೆ ಮಾರ್ಚ್ 13 ಅಥವಾ 14ಕ್ಕೆ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ (Lok Sabha election dates announced) ಆಗಲಿದೆಯೇ? ಹೌದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ನೂತನವಾಗಿ ಆಯ್ಕೆಯಾದ ಎಂಎಲ್‌ಸಿ ಪುಟ್ಟಣ್ಣ ಅವರಿಗೆ ಕೆಂಗೇರಿಯ ಸೂಲಿಕೆರೆ ಗ್ರಾಮದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಮಾರ್ಚ್ 13 ಮತ್ತು 14ರಂದು ಚುನಾವಣೆ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಅಷ್ಟರಲ್ಲಿ ನಾವು ಸರ್ಕಾರಿ ಕಾರ್ಯಕ್ರಮಗಳನ್ನು ಮಾಡಬೇಕಿದೆ. ನಮಗೆ ಸಮಯ ಇಲ್ಲ. ಕೇಂದ್ರ ಸರ್ಕಾರವೂ ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಲಿದೆ ಎಂದು ಹೇಳಿದರು.
ನಾಚಿಕೆ ಆಗಬೇಕು ಇವರಿಗೆ
ಬೆಂಗಳೂರು ನಗರದ ಎಲ್ಲ ಎಂಪಿಗಳನ್ನು ಗೆಲ್ಲಿಸಬೇಕಿದೆ. ಪದವೀಧರರ ಕ್ಷೇತ್ರಗಳನ್ನೂ ನಾವು ಗೆಲ್ಲಬೇಕು. ಅದಕ್ಕೆ ನೀವೆಲ್ಲ ಸಹಕಾರ ಕೊಡಬೇಕು. ನೀವು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು. ಜೆಡಿಎಸ್‌ನವರು ಬಿಜೆಪಿಯೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಅನ್ ಕಂಡೀಷನ್ ಆಗಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಬೇಕು ಎಂದು ಮಾಡಲಾಯಿತು. ಆದರೆ, ಮುಂದೆ ಏನಾಯಿತು? ಆಗ ಸಿಎಂ ಸ್ಥಾನದಿಂದ ಯೋಗೇಶ್, ಮುನಿರತ್ನ ಎಲ್ಲರೂ ಸೇರಿ ಅವರನ್ನು ಕುರ್ಚಿಯಿಂದ ಇಳಿಸಿದರು. ಈಗ ಅವರ ಜತೆಗೆ ಹೋಗಿದ್ದಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಇದನ್ನೂ ಓದಿ: HD Kumaraswamy: ಸಿದ್ದರಾಮಯ್ಯನವರೇ ನೀವೇ ನಮ್ಮ ನೀರೋ! ರಾಜ್ಯದ ಪಾಲಿನ ಝೀರೋ; ಎಚ್‌ಡಿಕೆ ವ್ಯಂಗ್ಯ
ನೀವು ಏನೂ ಮಾಡಲು ಆಗಲ್ಲ
ರಾಜ್ಯಸಭೆ ಚುನಾವಣೆಯಲ್ಲಿ ಶಿವಶಂಕರಪ್ಪ ಅವರಿಗೆ ಹಣ ಬೇಕಾ ಎಂದು ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಫೋನ್ ಮಾಡಿದ್ದರಂತೆ. ನೀವು ತಿರುಕನ ಕನಸು ಕಾಣುತ್ತಿದ್ದೀರಾ? ನಾವು 136+2 ಇದ್ದೇವೆ. ಅಲ್ಲದೆ, ಜನಾರ್ದನ ರೆಡ್ಡಿ, ಉಳಿದವರು ಸೇರಿ 140 ಆಗುತ್ತೇವೆ. ನೀವು ಏನೂ ಮಾಡೋಕೆ ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಡಿ.ಕೆ. ಸುರೇಶ್ ಗೆದ್ದೇ ಗೆಲ್ಲುತ್ತಾರೆ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (CM Siddaramaiah) ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್ (DK Suresh) ಗೆಲ್ಲುತ್ತಾರೆ. ಈಗಾಗಲೇ ನಾವು ಅವರನ್ನು ಈ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೇವೆ. ನೂರಕ್ಕೆ ನೂರು ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ನೂತನವಾಗಿ ಆಯ್ಕೆಯಾದ ಎಂಎಲ್‌ಸಿ ಪುಟ್ಟಣ್ಣ ಅವರಿಗೆ ಕೆಂಗೇರಿಯ ಸೂಲಿಕೆರೆ ಗ್ರಾಮದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಒಟ್ಟಾರೆ ಡಿ.ಕೆ. ಸುರೇಶ್ ಗೆಲ್ಲುತ್ತಾರೆ ಎಂಬ ಭರವಸೆ ನನಗೆ ಇದೆ. ಬಿಜೆಪಿ – ಜೆಡಿಎಸ್ ಚುನಾವಣೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದರು. ಈಗ ಪಕ್ಷ ಉಳಿಸಲು ಬಿಜೆಪಿ ಜತೆ ಹೊಂದಾಣಿಕೆಯನ್ನು ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇದಕ್ಕಾಇಗಿ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರ ಬೀಳಿಸಿದ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಅವರ ಉಳಿವಿಗೆ, ಕುಟುಂಬದ ಉಳಿವಿಗೆ ಏನು ಬೇಕಾದರೂ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಜನರು ಕಣ್ಣು ಮುಚ್ಚಿ ಬೆಂಬಲಿಸುತ್ತಾರೆ ಎಂದು ಅಂದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ – ಜೆಡಿಎಸ್ ಒಂದಾಗಿದ್ದಾರೆ ಚುನಾವಣೆಯಲ್ಲಿ ಪುಟ್ಟಣ್ಣ ಅವರಿಗೆ ಏನಾಗುತ್ತದೆ ಎಂಬ ಭಯ ಇತ್ತು. ನಾನು 2002ರಲ್ಲಿ ಜನತಾದಳ ಎಸ್ ಪಕ್ಷದ ಅಧ್ಯಕ್ಷನಾಗಿದ್ದೆ. ಆಗ ಶಿಕ್ಷಕರ ಕ್ಷೇತ್ರಕ್ಕೆ ನಿಲ್ಲುತ್ತೇನೆ ಎಂದು ಹೇಳಿದರು. ಪುಟ್ಟಣ್ಣಗೆ ಜೆಡಿಎಸ್‌ನಿಂದ ಟಿಕೆಟ್ ಕೊಟ್ಟಿದ್ದೆ. ಅವರು ನಿಮ್ಮ ಕ್ಷೇತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದ ಮತದಾರರಾದ ನೀವು ಮತ್ತೆ ಆಶೀರ್ವಾದ ಮಾಡಿದ್ದೀರಿ. ಈ ಶಿಕ್ಷಕರ ಕ್ಷೇತ್ರದ ಚುನಾವಣೆ ಲೋಕಸಭೆಗೆ ದಿಕ್ಸೂಚಿ ಅಂತ ಕುಮಾರಸ್ವಾಮಿ ಹೇಳಿದ್ದರು. ಪುಟ್ಟಣ್ಣ ಗೆಲುವು ಲೋಕಸಭೆಗೆ ದಿಕ್ಸೂಚಿಯಾಗಿದೆ. ಲೋಕಸಭೆಯಲ್ಲಿ ಡಿ.ಕೆ. ಸುರೇಶ್ ಗೆದ್ದೇ ಗೆಲ್ಲುತ್ತಾರೆ. ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರ ಮುಖ ನೋಡಿ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಇವರಂಥ ಮೂರ್ಖರು ಯಾರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.