ದಾವಣಗೆರೆ: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಭಯ ಕಾಡಲಾರಂಭಿಸಿದೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಆಯಾ ಕ್ಷೇತ್ರದ ಕೆಲವು ನಾಯಕರು ತೀವ್ರ ವಿರೋಧವನ್ನು ಹೊರಹಾಕಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ (Davangere Lok Sabha constituency) ಬಿಜೆಪಿ (BJP Karnataka) ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ (SA Ravindranath) ಹಾಗೂ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರ ತಂಡ ಬಂಡಾಯದ ಬಾವುಟವನ್ನು ಹಾರಿಸಿತ್ತು. ಈ ಸಂಬಂಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅಖಾಡಕ್ಕೆ ಇಳಿದಿದ್ದು, ಅಸಮಾಧಾನವನ್ನು ಶಮನ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಂಗಳವಾರ (ಮಾ. 26) ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್ ನೇತೃತ್ವದಲ್ಲಿ “ಬಂಡಾಯ ಶಮನ” ಸಭೆಯನ್ನು ನಡೆಸಲಾಯಿತು. ಸುಮಾರು 2 ತಾಸುಗಳಿಗೂ ಹೆಚ್ಚು ಸಮಯ ಚರ್ಚೆ ನಡೆಸಲಾಗಿದೆ. ಬಳಿಕ ಸಿದ್ದೇಶ್ವರ್- ರೇಣುಕಾಚಾರ್ಯ ಬಣದ ನಡುವೆ ಸಂಧಾನ ನಡೆಸಲಾಗಿದೆ. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ದಾವಣಗೆರೆ ಚುನಾವಣೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಗೆಲುವು
ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್, ದಾವಣಗೆರೆ ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಾವಣೆ ಇಲ್ಲ. ಗಾಯತ್ರಿ ಸಿದ್ದೇಶ್ವರ್ ಅವರ ಸ್ಪರ್ಧೆ ಖಚಿತ. ಆದರೆ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಈ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಿಂದ ಅತಿ ಹೆಚ್ಚು ಮತಗಳಿಂದ ಗಾಯತ್ರಿ ಸಿದ್ದೇಶ್ವರ್ ಗೆಲ್ಲುತ್ತಾರೆ. ಯಾವುದೇ ಬಂಡಾಯವಿಲ್ಲ. ಎಲ್ಲವೂ ಶಮನ ಆಗಿದೆ ಎಂದು ಹೇಳಿದರು.
ಯಾವುದೇ ಷರತ್ತು ಇಲ್ಲ: ಬಿ.ಎಸ್. ಯಡಿಯೂರಪ್ಪ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಎರಡು ಗಂಟೆಗಳ ಕಾಲ ಎಲ್ಲರ ಭಾವನೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಿದ್ದೇವೆ. ಈಗಾಗಲೇ ಲೋಕಸಭಾ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಆಯ್ಕೆ ಮಾಡಿದ್ದೇವೆ. ಅವರ ಗೆಲುವಿಗೆ ಒಗ್ಗಟ್ಟಾಗಿ ಎಲ್ಲರೂ ಕೆಲಸ ಮಾಡಬೇಕು. ರವೀಂದ್ರನಾಥ್ ಅವರಿಗೆ ಚುನಾವಣೆ ನೇತೃತ್ವವನ್ನು ವಹಿಸಲಾಗಿದೆ. ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಇಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗಲಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ಒಡಕಿನ ಮಾತಿಗೆ ಅವಕಾಶ ಇಲ್ಲ. ಎಲ್ಲವೂ ಒಳ್ಳೆಯದಾಗಿದೆ. ಯಾವುದೇ ಷರತ್ತು ಇಲ್ಲದೆ, ಸರ್ವಾನುಮತದಿಂದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ನಿರ್ಣಯ ಮಾಡಲಾಗಿದೆ ಎಂದು ಹೇಳಿದರು.
ಎಲ್ಲವೂ ಸರಿ ಹೋಗಿದೆ: ರವೀಂದ್ರನಾಥ್
ಸಣ್ಣ ಪುಟ್ಟ ದೋಷಗಳಿದ್ದವು, ಅವೆಲ್ಲವೂ ಸರಿ ಆಗಿದೆ. ದಾವಣಗೆರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಎಲ್ಲ ರೀತಿಯ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಮಾತನಾಡದೆ ಇರುವುದರಿಂದ ಎಲ್ಲವೂ ಸಮಸ್ಯೆ ಆಗಿದ್ದವು. ಈಗ ಎಲ್ಲರೂ ಮಾತನಾಡಿದ್ದೇವೆ. ಹಾಗಾಗಿ ಎಲ್ಲವೂ ಸರಿ ಹೋಗಿದೆ ಎಂದು ಮಾಜಿ ಸಚಿವ ರವೀಂದ್ರನಾಥ್ ಹೇಳಿದರು.