ಮಡಿಕೇರಿ: ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ. ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನ ಬದಲಾಯಿಸುವುದು ಬಿಜೆಪಿ ಪರಿವಾರದ ಹುನ್ನಾರ. ಕೇಂದ್ರ ಸಚಿವರಾಗಿದ್ದವರೇ ಈ ಮಾತನ್ನು ಬಹಿರಂಗವಾಗಿ ಹೇಳಿದ್ದಾರೆ ಎಂದು ಎಚ್ಚರಿಸಿದರು.
ಇವರು ದೇಶಭಕ್ತರಾಗಲು ಸಾಧ್ಯವೇ ಇಲ್ಲ
ಆರ್‌ಎಸ್‌ಎಸ್ ಪರಿವಾರದವರು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಏಕೆ ಭಾಗವಹಿಸಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇವರು ದೇಶಭಕ್ತರಾಗಲು ಸಾಧ್ಯವೇ ಇಲ್ಲ. ಸಮಾಜದಲ್ಲಿನ ಎಲ್ಲ ಜಾತಿ, ವರ್ಗ ಮತ್ತು ಧರ್ಮದ ಬಡವರಿಗೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬುವುದಕ್ಕಾಗಿ ನಾವು ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷ ಪ್ರಧಾನಿಯಾಗಿ ಕೊಟ್ಟ ಮಾತಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ? ಎದೆ ಮುಟ್ಟಿಕೊಂಡು ಹೇಳಿ ಎಂದು ಸಿದ್ದರಾಮಯ್ಯ ಅವರು ಸಾರ್ವಜನಿಕರಿಗೆ ಪ್ರಶ್ನೆ ಮಾಡಿದರು.
ಯಾವ ಮತಕ್ಕೆ ಗೌರವ ಬರುತ್ತದೆ?
ಭಾರತೀಯರನ್ನು ನಂಬಿಸಿ, ಭ್ರಮೆ ಹುಟ್ಟಿಸಿ, ಭಾವನೆಗಳನ್ನು ಕೆರಳಿಸಿ ಭಯಾನಕವಾಗಿ ವಂಚಿಸುವವರಿಗೆ ಮತ ಹಾಕಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದಾ? ಅಥವಾ ನುಡಿದಂತೆ ನಡೆದು ರಾಜ್ಯದ ಜನರ ಬದುಕಿಗೆ ಸ್ಪಂದಿಸಿದ ನಮಗೆ ಮತ ಹಾಕಿದರೆ ಆ ಮತಕ್ಕೆ ಗೌರವ ಬರುತ್ತದಾ? ಕೊಡಗು ಜಿಲ್ಲೆಯ ಮತದಾರರು ಪ್ರಜ್ಞಾವಂತರಾಗಿದ್ದಾರೆ. ಯೋಚಿಸಿ ಮತ ಚಲಾಯಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೊಡಗಿನ ಶಾಸಕರಾದ ಪೊನ್ನಣ್ಣ ಮತ್ತು ಮಂಥರ್ ಗೌಡ ಅವರು ಕ್ಷೇತ್ರದ ಅಭಿವೃದ್ಧಿಗೆ ಏನೇನು ಕೇಳ್ತಾರೋ ಅದೆಲ್ಲವನ್ನೂ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಮೆಹರೂಜ್ ಖಾನ್ ಸೇರಿ ಹಲವು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.