ಮೈಸೂರು: ಕರ್ನಾಟಕದಲ್ಲಿ ಜೆಡಿಎಸ್ (JDS Karnataka) ಕಟ್ಟಿದ್ದೇ ನಾನು. ನಾನೇ ಆ ಪಕ್ಷದ ಸಂಸ್ಥಾಪಕ ಅಧ್ಯಕ್ಷ. ಆದರೆ, ಮಾಜಿ ಪ್ರಧಾನಿ, ಮಿಸ್ಟರ್ ಎಚ್.ಡಿ. ದೇವೇಗೌಡರು (HD Devegowda) ನನ್ನನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿದರು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯವನ್ನು ಕೈಗೊಂಡರು.
ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಹುಟ್ಟಿದ ಕಥೆ ಬಗ್ಗೆ ಹೇಳಿದರು. ಜೆಡಿಎಸ್ ಹುಟ್ಟಿದ್ದು ಹೇಗೆ ಗೊತ್ತಾ? 2009ರಲ್ಲಿ ರಾಮಕೃಷ್ಣ ಹೆಗಡೆ, ಎಸ್. ಬೊಮ್ಮಾಯಿ ಸೇರಿದಂತೆ ಅನೇಕರು ಜನತಾ ದಳ ಬಿಟ್ಟು ಹೋದರು. ಅವರೆಲ್ಲ ಬಿಜೆಪಿ ಜತೆ ಸೇರಿಕೊಂಡು ಜೆಡಿಯು ಮಾಡಿಕೊಂಡರು. ಆಗ ನಾನು ಎಚ್.ಡಿ. ದೇವೇಗೌಡರ ಬಳಿ ಹೋಗಿ ಜೆಡಿಎಸ್ ಮಾಡೋಣ ಎಂದು ಹೇಳಿದೆ. ನಂತರ ಜೆಡಿಎಸ್ ಹುಟ್ಟಿಕೊಂಡಿತು. ನಾನು ಜೆಡಿಎಸ್ ಸಂಸ್ಥಾಪಕ ಅಧ್ಯಕ್ಷ. ನಂತರ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು. ಜೆಡಿಎಸ್‌ನಿಂದ ನನಗೆ ಅನ್ಯಾಯ ಆಗಿದೆ ಎಂದು ಹೇಳಿದರು.
ಜೆಡಿಎಸ್ ಅನ್ನು ನಾನು ಬಿಡಿಲಿಲ್ಲ. ಮಿಸ್ಟರ್ ದೇವೇಗೌಡ ನಮ್ಮನ್ನು ಉಚ್ಚಾಟಿಸಿ ಹೊರಗೆ ಕಳಿಸಿದರು. ಆದರೆ, ಈಗ ನಾನೇ ಜೆಡಿಎಸ್ ಬಿಟ್ಟು ಬಂದೆ ಅಂತ ಸುಳ್ಳು ಹೇಳುತ್ತಾರೆ. ಉಪಯೋಗಿಸಿಕೊಳ್ಳುವುದು, ಬಿಸಾಡುವುದು ಜೆಡಿಎಸ್ ಕೆಲಸ. ಬಿಜೆಪಿ ಕೋಮುವಾದಿ ಪಕ್ಷವಾಗಿದೆ. ಹೀಗಾಗಿ ಅವರ ಜತೆ ಹೋದ ಜೆಡಿಎಸ್ ಜಾತ್ಯತೀತ ಪದವನ್ನು ಕೈ ಬಿಡಲಿ ಅಂತ ಹೇಳಿದೆ. ಅದಕ್ಕೆ ನನ್ನ ಗರ್ವಭಂಗ ಮಾಡಿ ಅಂತ ದೇವೇಗೌಡರು ಹೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದು: Lok Sabha Election 2024: ಅಮಿತ್ ಶಾ ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡಲೋ? ಕಿತ್ತುಕೊಳ್ಳಲೋ? ಸಿಎಂ ಪ್ರಶ್ನೆ
2006ರ ಚಾಮುಂಡೇಶ್ವರಿ ಉಪ ಚುನಾವಣೆ ನೀವು ನನ್ನ ಕೈ ಹಿಡಿಯದೆ ಇದ್ದಿದ್ದರೆ ನನ್ನ ರಾಜಕೀಯ ನಿರ್ನಾಮ ಆಗುತ್ತಿತ್ತು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡ ಎಲ್ಲ ಸೇರಿ ನನ್ನನ್ನು ಸೋಲಿಸಲು ಬಂದರು. ಜನ ನನ್ನ ಕೈ ಬಿಡಲಿಲ್ಲ. ಹೀಗಾಗಿ ಎರಡು ಬಾರಿ ಸಿಎಂ ಆಗಿದ್ದೇನೆ. ದೇವೇಗೌಡರ ಕುಟುಂಬದವರು ಯಾರೂ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲ್ಲ. ಡಾ. ಮಂಜುನಾಥ್, ಪ್ರಜ್ವಲ್, ಎಚ್.ಡಿ. ಕುಮಾರಸ್ವಾಮಿ ಎಲ್ಲರೂ ಸೋಲುತ್ತಾರೆ. ಇನ್ನು ಕುಮಾರಸ್ವಾಮಿ ಹಾಗೂ ದೇವೇಗೌಡರು ಇಲ್ಲಿಗೆ ಬಂದು ಕಣ್ಣೀರು ಹಾಕಬಹುದು. ಅದಕ್ಕೆ ಕರಗಬೇಡಿ, ಮರುಗಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ವೇಳೆ ಮನವಿ ಮಾಡಿದರು.
ಸರ್ಕಾರ ಬೀಳಿಸಿದವರ ಜತೆಗೇ ಹೋದರು
ರಾಜಕೀಯ ಜ್ಞಾನ ಇರುವವರು ಲೋಕಸಭೆಗೆ ಹೋಗಬೇಕು. ಬಿಜೆಪಿ ಎಂಪಿಗಳು ನರೇಂದ್ರ ಮೋದಿ ಅವರನ್ನು ಕಂಡರೇ ಗಢ ಗಢ ಅಂತ ಹೆದರಿಕೊಳ್ಳುತ್ತಾರೆ. ಇಂತಹವರನ್ನು ಲೋಕಸಭೆಗೆ ಕಳುಹಿಸಿದರೆ, ನಿಮ್ಮ ಪರವಾಗಿ ಕೆಲಸ ಮಾಡುತ್ತಾರಾ? ಲಕ್ಷ್ಮಣ್‌ಗೆ ಧೈರ್ಯವಂತ, ಜನಪರವಾದ ಕಾಳಜಿ ಇರುವ ವ್ಯಕ್ತಿ. ಬಿಜೆಪಿಯವರು ಏನೂ ಮಾಡಲಿಲ್ಲ.
ಬಿಜೆಪಿಯವರು ಜೆಡಿಎಸ್ ಜತೆ ಶಾಮೀಲು ಆಗಿದ್ದಾರೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ಜಾರಿಗೆ ಬಂತು. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದರು. ಬಿಜೆಪಿಗೆ ಹೋಗಬಾರದು ಅಂಥ ಅವರನ್ನೇ ಸಿಎಂ ಮಾಡಲಾಗಿತ್ತು.. ದೇವೇಗೌಡರು ಸಹ ಒಪ್ಪಿಕೊಂಡು ಬಿಜೆಪಿ ಜತೆ ಹೋಗಲ್ಲ ಎಂದು ಹೇಳಿದರು. ಒಂದು ವರ್ಷ ಎರಡು ತಿಂಗಳು ಚೆನ್ನಾಗಿತ್ತು. ಸಮ್ಮಿಶ್ರ ಸರ್ಕಾರ ತೆಗೆದಿದ್ದು ಮಿಸ್ಟರ್ ಯಡಿಯೂರಪ್ಪ. ಈಗ ಅವರ ಜತೆಯೇ ಬಾಯಿ ಬಾಯಿ ಎಂದು ಹೋಗಿದ್ದಾರೆ ಎಂದು ಹೇಳಿದ್ದಾರೆ