ಬೆಂಗಳೂರು: ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬೆಂಗಳೂರು ಗ್ರಾಮಾಂತರ ಕ್ಷೇತ್ರದ (Bangalore Rural Constituency) ಕನಕಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ 505 ರೂ, ಮಲೆ ಮಹದೇಶ್ವರದ ಲಾಡು, ಗ್ಯಾರಂಟಿ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಕಣ್ಣು ಮುಚ್ಚಿ ಕುಳಿತಿದ್ದು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಕೇತಗಾನಹಳ್ಳಿಯಲ್ಲಿ ಕುಟುಂಬ ಸಮೇತ ಬಂದು ಮತಚಲಾಯಿಸಿದ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಇರುವ ಮಾಹಿತಿ ಪ್ರಕಾರ 14 ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಒಳ್ಳೆಯ ರೀತಿ ಮತದಾನ ನಡೆಯುತ್ತಿದೆ. ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದು ಕಪ್ಪು ಚುಕ್ಕೆ ರೀತಿ ಪ್ರಕ್ರಿಯೆಗಳು ನಡೆಯುತ್ತಿವೆ. ನಿನ್ನೆ ಸಹ ಕನಕಪುರದಲ್ಲೂ ಧೈರ್ಯದಿಂದ ಎದರಿಸುವ ವಾತಾವರಣ ನಿರ್ಮಾಣವಾಗಿದೆ. ಆದರೆ, ಕನಕಪುರದ ಸೊರಕಾಯಿ ದೊಡ್ಡಿ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕುಣಿಗಲ್ ಸೇರಿದಂತೆ ಹಲವು ಭಾಗದಲ್ಲಿ ಬೆಳಗಿನ ಜಾವ ಐದು ಗಂಟೆಗೆ ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ಕೊಟ್ಟು 4 ರಿಂದ 5 ಸಾವಿರ ರೂಪಾಯಿಯ ಕೂಪನ್ ಕೊಟ್ಟಿದ್ದಾರೆ. ಈ ಹಿಂದೆ ಕುಕ್ಕರ್ ಎಲ್ಲ ಕೊಟ್ಟಿದ್ದಾರೆ. ಈಗ ಕಾರ್ಡ್ ಮತ್ತು ಕೂಪನ್ ಕೊಟ್ಟಿದ್ದಾರೆ. ಈಗ ಎಲ್ಲ ಕಡೆ ಇದನ್ನು ಶುರು ಮಾಡಿದ್ದಾರೆ. ಹಾಲಿ ಶಾಸಕರ ಫೋಟೋ ಹಾಕಿ 10 ಸಾವಿರದ ರೂಪಾಯಿಯ ಕೂಪನ್ ಕೊಡುತ್ತಿದ್ದಾರೆ. ಕ್ಯೂ ಆರ್ ಕೋಡ್ ಕೊಡುವ ಚಾಳಿಯನ್ನು ಶುರು ಮಾಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದರು.
ಚುನಾವಣಾ ಆಯೋಗದ ವಿರುದ್ಧ ಎಚ್‌ಡಿಕೆ ಗರಂ
ಚುನಾವಣಾ ಆಯೋಗವು ಈ ರೀತಿ ಚುನಾವಣೆಯನ್ನು ನಡೆಸುವ ಬದಲು ನೇರವಾಗಿ ಹಣ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರಬಹುದು. ಆಯಾಯ ಅಭ್ಯರ್ಥಿಗಳು ತಮ್ಮ ಶಕ್ತಿ ಅನುಸಾರ ಹಣ ನೀಡುತ್ತಾರೆ. ದೇಶದಲ್ಲಿ ಈ ರೀತಿಯ ವ್ಯವಸ್ಥೆಯನ್ನು ತಂದರೆ ಒಳ್ಳೆಯದು ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಇದನ್ನು ಚುನಾವಣಾ ಅಂತ ಕರೆಯುತ್ತಾರಾ? ಪ್ರಜಾಪ್ರಭುತ್ವದ ಹಬ್ಬ ಎಂದು ಹೇಳಲಾಗುತ್ತದೆಯೇ? ದುಡ್ಡು ಇರುವವರಿಗೆ, ಲೂಟಿ ಮಾಡುವವರಿಗೆ ಮಾತ್ರ ಇದು ಹಬ್ಬ. ಜನಸಾಮಾನ್ಯರಿಗೆ ಅಲ್ಲ. ಈ ರೀತಿಯಾಗಿ ಮತ ಪಡೆಯೋದು ಅಂದರೆ ಹೇಗೆ? ಮಹಾನಭಾವರು ಬುದ್ಧಿ ಹೇಳಿದ್ದೇ ಹೇಳಿದ್ದು ಎಂದು ಡಿ.ಕೆ. ಸಹೋದರರ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Lok Sabha Election 2024: ಆಕ್ಸಿಜನ್ ಸಹಾಯದಿಂದ ಮತ ಚಲಾಯಿಸಿದ ಮಹಿಳೆ; ವೋಟು ಹಾಕಿ ಕುಸಿದು ಮೃತಪಟ್ಟ ವೃದ್ಧೆ!
ಮತಗಟ್ಟೆ ಮುಂದೆ ಡಿಕೆ ಶಿವಕುಮಾರ್ ರಿಯಾಕ್ಷನ್; ಇಲ್ಲಿದೆ ವಿಡಿಯೊ
ಜ್ಯೋತಿಷಿ ಹೇಳಿದಂತೆ ಹಣ ಹಂಚಿಕೆ
ಕನಕಪುರದಲ್ಲಿ ಜ್ಯೋತಿಷಿ ಹೇಳಿದಂತೆ ಹಣ ಹಂಚಿದ್ದಾರೆ. ಯಾರೋ ಶಾಸ್ತ್ರದವರು ಹೇಳಿದ್ದಾರೆ ಎಂದು 505 ರೂಪಾಯಿ, ಮಲೆ ಮಹದೇಶ್ವರ ದೇವರ ಲಾಡು ಮತ್ತು ಗ್ಯಾರಂಟಿ ಕಾರ್ಡ್‌ಗಳನ್ನು ರಾತ್ರಿಯಲ್ಲ ಹಂಚಿದ್ದಾರೆ. ಈ ಬಗ್ಗೆ ನಮ್ಮ ಡಿಸಿ ಮತ್ತು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಕ್ತವಾದ ಚುನಾವಣೆ ನಡೆಯುತ್ತಿಲ್ಲ. ಇವತ್ತು ಸೋಲಿನ ಭೀತಿಯಿಂದ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣಾ ಅಕ್ರಮಗಳ ಮೂಲಕ ಗೆಲ್ಲುತ್ತೇವೆ ಎಂದು ಹೋಗುತ್ತಿದ್ದಾರೆ. ಅಕ್ರಮ ಮಾಡಿದರೂ ಜನತೆ ಬಲಿಯಾಗಿದೆ ನ್ಯಾಯಯುತವಾಗಿ ಮತದಾನ ಮಾಡಿ ಎಂದು ಮನವಿ ಮಾಡುತ್ತೇನೆ. ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳೋದು ಒಳ್ಳೆಯದು. ಚುನಾವಣಾ ಆಯೋಗ ತನ್ನ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಕಿವಿಮಾತು ಹೇಳಿದರು.