Site icon Vistara News

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 DK Brothers hold roadshow in Ramanagara and DK Suresh file nomination

ರಾಮನಗರ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ (Bangalore Rural Constituency) ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಡಿ.ಕೆ. ಸುರೇಶ್‌ (DK Suresh) ಅವರು ಜನಸ್ತೋಮದ ನಡುವೆ ಗುರುವಾರ (ಮಾ. 28) ನಾಮ ಪತ್ರವನ್ನು ಸಲ್ಲಿಸಿದ್ದಾರೆ. ಈ ವೇಳೆ ರಾಮನಗರದ ಜಿಲ್ಲಾ ಮೈದಾನದಲ್ಲಿ ಶಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Suresh) ಸೇರಿದಂತೆ ಕಾಂಗ್ರೆಸ್‌ ನಾಯಕರು ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಡಿ.ಕೆ. ಸುರೇಶ್‌ ನನ್ನ ತಮ್ಮ ಅನ್ನೋದನ್ನು ಸೈಡಿಗಿಡಿ. ಒಬ್ಬ ಸಂಸದನಾಗಿ ಅವರು ಗ್ರಾಮ ಪಂಚಾಯಿತಿ ಸದಸ್ಯನಂತೆ ಮಾಡಿರುವ ಅಭಿವೃದ್ಧಿ ಕಾರ್ಯವನ್ನು ನೋಡಿ ಮತ ಹಾಕಿ ಎಂದು ಹೇಳಿದರು.

ರಾಮನಗರ ಜಿಲ್ಲಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಗೆ ಸಹಸ್ರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರ ಜತೆಗೆ ಮೆರವಣಿಗೆ ನಡೆಸಿದ ಡಿ.ಕೆ. ಸುರೇಶ್‌ ರಾಮನಗರ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಆನೇಕಲ್ ಶಿವಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮತ್ತಿತರರು ಇದ್ದರು.

ಇದನ್ನೂ ಓದಿ: Lok Sabha Election 2024: ಇಂದು ಡಿಕೆ ಸುರೇಶ್‌ ನಾಮಪತ್ರ ಸಲ್ಲಿಕೆ; ಅಣ್ಣ – ಅತ್ತಿಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸಂಸದ

ಇತ್ತ ರಾಮನಗರ ಜಿಲ್ಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನಮ್ಮ ಮೇಲೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬಿದ್ದು ಬಿಟ್ಟಿದ್ದಾರೆ. ಐಟಿ, ಇಡಿಗೆ ದೂರು ಕೊಟ್ಟಿದ್ದಾರೆ. ಅದಕ್ಕೆ ನಿಮ್ಮನ್ನು ಬಿಸಿಲಿನಲ್ಲಿ ನಿಲ್ಲಿಸಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಡಿ.ಕೆ ಸುರೇಶ್ ಅವರು ನಾಲ್ಕನೇ ಬಾರಿ ಲೋಕಸಭೆ ಪ್ರವೇಶಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ನಾವ್ಯಾರೂ ಡಿ.ಕೆ. ಸುರೇಶ್ ಅವರನ್ನು ಆಯ್ಕೆ ಮಾಡಿ ಕಳಿಸಿರಲಿಲ್ಲ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಅಂದು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಬೈ ಎಲೆಕ್ಷನ್ ಆಯಿತು. ಆಗ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇದ್ದರು, ನಾನು ಮಂತ್ರಿ ಆಗಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಡಿ.ಕೆ. ಸುರೇಶ್‌ಗೆ ಟಿಕೆಟ್ ಕೊಟ್ಟಿದ್ದರು. ಅಂದು ಜಿಲ್ಲೆಯ ಜನತೆ ಡಿ.ಕೆ. ಶಿವಕುಮಾರ್ ಅವರಿಗೆ ಶಕ್ತಿ ತುಂಬಬೇಕು ಎಂದು 1 ಲಕ್ಷ 30 ಸಾವಿರ ಮತಗಳಿಂದ ಲೋಕಸಭೆಗೆ ಕಳಿಸಿದ್ದೀರಿ ಎಂದು ಹೇಳಿದರು.

ಡಿಕೆಸು ನನ್ನ ತಮ್ಮ ಅನ್ನೋದು ಬಿಡಿ!

ಡಿ.ಕೆ. ಸುರೇಶ್ ನನ್ನ ತಮ್ಮ ಅನ್ನೋದು ಬಿಡಿ, ಪಂಚಾಯಿತಿ ಸದಸ್ಯನ ರೀತಿಯಲ್ಲಿ ಅವರು ಕೆಲಸ ‌ಮಾಡಿದರು. ದೇವೇಗೌಡರು, ಕುಮಾರಸ್ವಾಮಿ ಸಂಸದರು ಆಗಿದ್ದರು. ಅವರು ಎಷ್ಟು ಬಾರಿ ನಿಮ್ಮ ಹಳ್ಳಿಗೆ ಬಂದಿದ್ದಾರೆ‌? ಅದು ನಿಮ್ಮ ಮತ್ತು ಅವರ ಆತ್ಮಸಾಕ್ಷಿಗೆ ಬಿಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕ್ಷೇತ್ರದ ಜನರಿಗೆ 100 ಎಕರೆಯಲ್ಲಿ ಸೈಟ್ ಕೊಡಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೆ. ಆದರೆ, ಕುಮಾರಸ್ವಾಮಿ ಸಭೆಗೆ ಬರಲಿಲ್ಲ. ಈಗ ಇಕ್ಬಾಲ್ ಅವರನ್ನು ಆಯ್ಕೆ ಮಾಡಿದ್ದೀರಿ. ಮಾಗಡಿಯಲ್ಲಿ ಸೈಟ್ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನೀರಿಗಾಗಿ ಮೇಕೆದಾಟು ಪಾದಯಾತ್ರೆ ಮಾಡಿದ್ದೇವೆ. ಆಗ ಜೆಡಿಎಸ್ ಬೆಂಬಲ ಕೊಡಲಿಲ್ಲ. ಈಗ ಎಚ್.ಡಿ. ದೇವೇಗೌಡರು ನೀರಿನ ಬಗ್ಗೆ ಮಾತನಾಡುತ್ತಿದ್ದಾರೆ. ತಮ್ಮ ಕುಟುಂಬದವರು ಸ್ಪರ್ಧೆ ಮಾಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ರೈತರ ಮುನಿಸು ತಟ್ಟಬಹುದು ಎಂದು ಮಾತನಾಡುತ್ತಾರೆ‌ ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನು ಬಿಜೆಪಿ ಚಿಹ್ನೆಯಲ್ಲಿ ನಿಲ್ಲಿಸಿದ್ದಾರೆ‌‌. ಕರ್ನಾಟಕದಲ್ಲಿ ಜೆಡಿಎಸ್‌ ಎಲ್ಲಿದೆ‌? ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಜಿಲ್ಲೆಯಿಂದ ಸಿಎಂ ಆಗಿದ್ದರು. ಈಗ ಮಂಡ್ಯಕ್ಕೆ ಹೊರಟಿದ್ದಾರೆ. ನೀವು ಟಾಟಾ ಗುಡ್ ಬೈ ಹೇಳಬೇಕು ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಇದನ್ನೂ ಓದಿ: Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

ಡಿ.ಕೆ. ಸುರೇಶ್ ರಾಜೀನಾಮೆ ಕೊಡಲು ಹೋಗಿದ್ದಾರೆ!

ಡಿ.ಕೆ. ಶಿವಕುಮಾರ್‌ ಅವರು ಮಾತನಾಡುವ ಭರದಲ್ಲಿ ಡಿ.ಕೆ. ಸುರೇಶ್ ರಾಜೀನಾಮೆ ಕೊಡಲು ಹೋಗಿದ್ದಾರೆ ಎಂದು ಬಾಯಿ ತಪ್ಪಿ ಹೇಳಿದರು. ಬಳಿಕ ನಾಮಪತ್ರ ಸಲ್ಲಿಸಲು ಹೋಗಿದ್ದಾರೆ ಎಂದು ಸರಿಮಾಡಿಕೊಂಡರು.

ಕೋವಿಡ್ ಸಮಯದಲ್ಲಿ ಶಾಸಕರಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಎಲ್ಲಿಗೆ ಹೋಗಿದ್ದರು? ಅಭ್ಯರ್ಥಿ, ಕುಟುಂಬದವರು ಎಲ್ಲಿ ಹೋಗಿದ್ದರು? ಡಿ.ಕೆ. ಸುರೇಶ್ ಅವರು ಸಂಕಷ್ಟದಲ್ಲಿ ಜನರಿಗೆ ಔಷಧಿ, ಆಸ್ಪತ್ರೆ ವ್ಯವಸ್ಥೆಗಳನ್ನು ಮಾಡಿದರು. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಧೀರನೂ ಅಲ್ಲ. ಅಧಿಕಾರದಲ್ಲಿ ಇದ್ದಾಗಲೇ ಏನು ಮಾಡಲಿಲ್ಲ, ಈಗ ಏನು ಮಾಡ್ತಾರೆ? ನಾವು ನಿಮ್ಮ ಸೇವೆಗೆ ಸಿದ್ಧವಾಗಿದ್ದೇವೆ ಎಂದು ಎಚ್‌ಡಿಕೆ ವಿರುದ್ಧ ಡಿ.ಕೆ. ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಸಚಿವ ಮಂಕಾಳ್ ವೈದ್ಯ, ಕುಣಿಗಲ್ ಶಾಸಕ ರಂಗನಾಥ್, ಇಕ್ಬಾಲ್ ಹುಸೇನ್, ಪಿ.ಜಿ.ಆರ್ ಸಿಂಧ್ಯ, ಕುಸುಮಾ ಹನುಮಂತರಾಯಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Exit mobile version