ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಜಾತಿ ಪಾಲಿಟಿಕ್ಸ್ ಹೆಚ್ಚಾಗಿದೆ. ಆಯಾ ಸಮುದಾಯಗಳ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳ ನಾಯಕರು ಪ್ಲ್ಯಾನ್ ಮಾಡುತ್ತಿದ್ದಾರೆ. ಇನ್ನು ಒಕ್ಕಲಿಗ ಬೆಲ್ಟ್‌ನಲ್ಲಿ ಏಟು ಎದುರೇಟು ಪಾಲಿಟಿಕ್ಸ್ ಜೋರಾಗಿದೆ. ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ನಾಯಕರು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ. ಶ್ರೀಗಳು ಆಶೀರ್ವಾದ ಮಾಡ್ತಾರೆ, ವಿಭೂತಿ ಇಡ್ತಾರೆ. ಅವರು ನಮ್ಮ ಪರವೂ ಇಲ್ಲ, ಅವರ ಪರವೂ ಇಲ್ಲ. ನಮ್ಮ ಒಕ್ಕಲಿಗ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಅಂದು ಅಧಿಕಾರದಿಂದ ಕೆಳಗೆ ಇಳಿಸಲಾಯಿತಲ್ಲವೇ? ಅದನ್ನು ಕೇಳುವ ಶಕ್ತಿ ಸ್ವಾಮೀಜಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಯಾವುದನ್ನೂ ಮುಚ್ಚಿಡೋದಕ್ಕೆ ಆಗಲ್ವಲ್ಲಾ? ಎಂದು ಶ್ರೀಗಳಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಬಳಿಗೆ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೂ ಹೋಗಿದ್ದರು. ಇವತ್ತು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಹೋಗಿದ್ದಾರೆ. ಸ್ವಾಮೀಜಿ ಯಾರಿಗೂ ಬೆಂಬಲಿಸುವುದಿಲ್ಲ. ಆಶೀರ್ವಾದ ಮಾಡುತ್ತಾರೆ. ವಿಭೂತಿ ಇಡುತ್ತಾರೆ. ನಮ್ಮ ಪರವೂ ಇಲ್ಲ, ಅವರ ಪರವೂ ಇಲ್ಲ. ನಮ್ಮ ಒಕ್ಕಲಿಗ ಮುಖ್ಯಮಂತ್ರಿಯನ್ನು ಆಗ ಇಳಿಸಿದ್ದರಲ್ಲವೇ? ಅದನ್ನು ಕೇಳುವ ಶಕ್ತಿ ಸ್ವಾಮೀಜಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಯಾವುದನ್ನೂ ಮುಚ್ಚಿಡುವುದಕ್ಕೆ ಆಗಲ್ವಲ್ಲಾ? ಎಂದು ಶ್ರೀಗಳ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದರು.
ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅವರ ಮಾತಿನ ಮೇಲೆಯೇ ಸ್ಟ್ಯಾಂಡ್ ಇಲ್ಲ. ಕುಮಾರಸ್ವಾಮಿ ಯಾರಿಗೆ ಟೀಕೆ ಮಾಡಿಲ್ಲ ಹೇಳಿ? ಮೇಕೆದಾಟು ಬಗ್ಗೆಯೂ ಟೀಕೆ ಮಾಡಿದ್ದರು. ಈಗ ಮೇಕೆದಾಟು ಬಗ್ಗೆ ಬೆಂಬಲ ಅಂತಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಗ್ಗೆ ಮಾತನಾಡಿದ್ದರು. ಜನರು ಅವರನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಒಕ್ಕಲಿಗ ಮುಖ್ಯಮಂತ್ರಿ ಇಳಿಸಿದ್ದು ಅವರೇ. ಆಮೇಲೆ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಿದರು. ಇದರ ಬಗ್ಗೆ ನಾನು ಸಮಾಜಕ್ಕೆ ಹೇಳಬೇಕಲ್ಲ ಎಂದು ಹೇಳಿದರು.
ಒಕ್ಕಲಿಗರು ದಡ್ಡರಲ್ಲ. ಒಕ್ಕಲಿಗ ಸ್ವಾಮೀಜಿಗಳು ದಡ್ಡರಲ್ಲ. ನಾನು ಗಿಫ್ಟ್ ವೋಚರ್ ಹಂಚುತ್ತಿದ್ದೀನೋ ಇಲ್ಲವೋ? ನಾನು ಬಾಡೂಟ ಹಾಕುತ್ತಿದ್ದೇನೋ ಇಲ್ಲವೋ ಗೊತ್ತಿಲ್ಲ. ನಾವು ನಾಲ್ಕು ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ. ನೋಡ್ತಾ ಇರಿ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.
ಧಾರವಾಡದಲ್ಲಿ ದಿಂಗಾಲೇಶ್ವರ ಶ್ರೀ ಸ್ಪರ್ಧೆ ಹಿಂದೆ ಕಾಂಗ್ರೆಸ್ ಇದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಾವು ಏನಾದರೂ ಮಾಡುವುದಿದ್ದರೆ ಪರೋಕ್ಷವಾಗಿ ಅಲ್ಲ. ನೇರವಾಗಿಯೇ ಮಾಡುತ್ತೇವೆ. ಅಲ್ಲಿ ನಮ್ಮ ಕ್ಯಾಂಡಿಡೇಟ್ ಅನ್ನು ಫೈನಲ್ ಮಾಡಿದ್ದೇವೆ. ವಿನೋಸ್‌ಗೆ ಟಿಕೆಟ್ ಕೊಟ್ಟಿದ್ದೇವೆ. ಕೊಟ್ಟ ಮೇಲೆ ಹಿಂದೆ ಮುಂದೆ ನೋಡಲ್ಲ. ಶ್ರೀಗಳ ಬಗ್ಗೆ ಗೌರವವಿದೆ. ನಮ್ಮ ಕ್ಯಾಂಡಿಡೇಟ್ ಸೂಟಬಲ್ ಇದ್ದಾರೆ. ಆದರೂ ಅಲ್ಲಿ ಒತ್ತಡ ಬರುತ್ತಿದೆ. ಇಂದು ಇಲ್ಲವೇ ನಾಳೆ ನಾನು ಸಿಎಂ ಸಿದ್ದರಾಮಯ್ಯ ಅವರ ಜತೆಗೆ ಕುಳಿತು ಮಾತನಾಡುತ್ತೇನೆ. ಬಳಿಕ ಹೈಕಮಾಂಡ್ ಗಮನಕ್ಕೆ ತಂದು ನಿರ್ಧರಿಸುತ್ತೇವೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದೆ. ಅವರಿಗೆ ಒಂದಷ್ಟು ವಿವರಗಳನ್ನು ಕೊಡಬೇಕಿತ್ತು. ಅದನ್ನು ಕೊಟ್ಟಿದ್ದೇನೆ. ಅವರು ಏಪ್ರಿಲ್ 12ರಂದು ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಹೋಗುತ್ತದೆ. ಅಂದು ನಾನೂ ಸಹ ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದರು.
ನಾನು ಎಂದೂ ಸಹ ಅಧಿಕಾರದಲ್ಲಿದ್ದಾಗ ನಮ್ಮ ಸ್ವಾಮೀಜಿಯನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ. ನಾನು ಎಂದೂ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ. ಜಾತ್ಯತೀತ ಅಂತ ಹೇಳೋರು, ಪ್ರತಿ ದಿನ ಜಾತಿ ಬಗ್ಗೆಯೇ ಮಾತನಾಡುತ್ತಾರೆ. ನಮ್ಮ ಸಮಾಜದ ಜನ ದಡ್ಡರಲ್ಲ. ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರು ನಮ್ಮ ಸಮುದಾಯದವರು. ಅವರನ್ನು ರಜಕೀಯವಾಗಿ ದುರುಪಯೋಗ ಮಾಡಿಕೊಂಡಿಲ್ಲ. ಕಾಂಗ್ರೆಸ್‌ನ ಮಹಾ ನಾಯಕರು ಮಾತನಾಡುತ್ತಾರಲ್ಲವೇ? ಅವರೇ ಯಾಕೆ ಸಂಘರ್ಷ ನಡೀತು ಅಂತಲೂ ಹೇಳಬೇಕಲ್ವಾ.? ಸಿದ್ದುವನದಲ್ಲಿ ಸರ್ಕಾರ ರಚನೆ ಮಾಡಿದಾಗಲೇ ಹೇಳಬೇಕಲ್ವಾ? ಐದು ವರ್ಷ ಅನ್ ಕಂಡೀಷನಲ್ ಸಪೋರ್ಟ್ ಕೊಟ್ಟಿದ್ದರಂತೆ. ಸಿದ್ದುವನದಲ್ಲಿ ಅದಕ್ಕೆ ಔಷಧಿ ಅರೆದರಲ್ವಾ.? ಅವರ ಮೈತ್ರಿ ಚೆನ್ನಾಗಿತ್ತಂತಾ? ನನ್ನ ನೋಡಿ ಪಾಪ ಅನ್ನೋರು ತುಂಬಾ ಜನ ಇದ್ದಾರೆ. ಅವರು ಪಾಪ ಅನ್ನೋದು ಬೇಕಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಡಿಕೆಶಿಗೆ ಸೋಲುವ ಭೀತಿ: ಆರ್. ಅಶೋಕ್
ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಒಕ್ಕಲಿಗ ಸರ್ಕಾರ ಬೀಳಿಸಿದ್ದೇ ಬಿಜೆಪಿಯಾಗಿದೆ. ಸ್ವಾಮೀಜಿ ಹೋದವರೆಲ್ಲರಿಗೂ ವಿಭೂತಿ ಕೊಡ್ತಾರೆ ಅಂತ ಡಿಕೆಶಿ ಹೇಳಿದ್ದಾರೆ. ಮೊದಲು ಡಿಕೆಶಿಗೆ ಸೋಲುವ ಭೀತಿ ಎದುರಾಗಿದೆ. ನಾವೆಲ್ಲ ಮಠಕ್ಕೆ ಬಂದಿರೋದು ನೋಡಿ ಚಳಿ ಜ್ವರ ಬಂದಿದೆ. ಒಕ್ಕಲಿಗ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಬೀಳಿಸಿದ್ದು ಬಿಜೆಪಿ ಅಂತಾರೆ. ಕುಮಾರಸ್ವಾಮಿ ಅವರ ಸರ್ಕಾರ ಬೀಳುವಾಗ ಯಾವ ಪಕ್ಷದಿಂದ ಎಂಎಲ್‌ಎಗಳು ಹೆಚ್ಚಾಗಿ ಹೊರಗೆ ಬಂದರು? ಸಿಎಂ ಸಿದ್ದರಾಮಯ್ಯ ಅವರನ್ನೇ ಡಿಕೆಶಿ ಕೇಳಲಿ, ಅವರೇ ಏನೆಂದು ಹೇಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಅವರಿಗೆ ಸೋಲುವ ಭೀತಿ ಎದುರಾಗಿದೆ. ಮನೆಯಲ್ಲಿ ಯುಗಾದಿ ಹಬ್ಬದ ಊಟಕ್ಕೆ ಹೋದರೆ ಯಾರ ಪರ್ಮಿಶನ್ ಬೇಕು? ಊಟ ಮಾಡೋಕೆ ಯಾರ ಅನುಮತಿ ಬೇಕು? ಸ್ವಾಮೀಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇವರು ಕಷ್ಟದಲ್ಲಿ ಇದ್ದಾಗ ಸ್ವಾಮೀಜಿ ಅವರ ಮನೆಗೆ ಹೋಗಿದ್ದರು. ಈ ರೀತಿ ಮಾತನಾಡಿದರೆ ಅವರಿಗೆ ಒಳ್ಳೆಯದಾಗಲ್ಲ.
ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.