ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ (Bangalore Rural Lok Sabha constituency) ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ (Dr CN Manjunath) ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (HD Devegowda) ಪಾರ್ಟಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪಾರ್ಟಿ ಸರಿ ಇಲ್ಲ ಅಂತ ಬುದ್ಧಿವಂತ ಅಳಿಯ ಈ ತೀರ್ಮಾನ ಮಾಡಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ (DK Suresh) ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್ ಅವರು ಡಾ. ಸಿ.ಎನ್. ಮಂಜುನಾಥ್ ಸ್ಪರ್ಧೆ ಬಗ್ಗೆ ಪರೋಕ್ಷ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ, ದೇವೇಗೌಡರ ಅಳಿಯ ಆಗಿರುವ ಮಂಜುನಾಥ್ ಅವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಬದಲು ಬಿಜೆಪಿಯಿಂದ ಏಕೆ ಸ್ಪರ್ಧೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಈ ಮೇಲಿನ ಉತ್ತರ ಕೊಟ್ಟಿದ್ದಾರೆ.
ಡಾ.ಸಿ.ಎನ್. ಮಂಜುನಾಥ ಅವರ ರಾಜಕೀಯ ಪ್ರವೇಶದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್, ಈ ಬಗ್ಗೆ ನೀವು ಮಂಜುನಾಥ್ ಅವರನ್ನೇ ಕೇಳಬೇಕು. ಅವರ ರಾಜಕೀಯ ಪ್ರವೇಶದ ಬಗ್ಗೆ ನಾನು ಉತ್ತರ ಹೇಳೋದು ಸಮಂಜಸ ಅಲ್ಲ. ಅವರ ರಾಜಕೀಯ ಪ್ರವೇಶವನ್ನು ಸ್ವಾಗತ ಮಾಡುತ್ತೇವೆ. ರಾಜಕಾರಣಿಯನ್ನು ರಾಜಕಾರಣದ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದರು.
ಇವರು ಅಚ್ಚರಿ ಅಭ್ಯರ್ಥಿ ಎಂದು ಹೇಳಲಾರೆ
ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಕುಟುಂಬದ ಮತ್ತೊಂದು ಭಾಗವಾಗಿದ್ದಾರೆ. ದೇವೇಗೌಡರ ಕುಟುಂಬದ ಮತ್ತೊಂದು ಭಾಗ ಆಗಿರುವುದರಿಂದ ಅವರನ್ನು ಅಚ್ಚರಿ ಅಭ್ಯರ್ಥಿ ಎಂಬುದಾಗಿ ನಾನು ಹೇಳುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಿಮ್ಮನ್ನು ಸೋಲಿಸಲು ವಿರೋಧಿಗಳೆಲ್ಲ ಒಂದಾಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್, ಅವರಿಗೆಲ್ಲ ದೇವರು ಒಳ್ಳೆಯದು ಮಾಡಲಿ, ನೀವು ನನ್ನ ಪರ ಇರಿ ಸಾಕು ಎಂದು ಮಾಧ್ಯಮದವರಿಗೆ ಹೇಳಿದರು.
ಮಂಜುನಾಥ್‌ಗೆ ಟಿಕೆಟ್ ಘೋಷಣೆ ಮಾಡಿದ ಬಿಜೆಪಿ
ಡಾ. ಸಿ.ಎನ್. ಮಂಜುನಾಥ್ ಅವರು ಇನ್ನೂ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಆದರೆ, ಅವರು ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪಕ್ಷ ಸೇರ್ಪಡೆಗೆ ಮೊದಲೇ ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Lok Sabha Election 2024: ಬಿಜೆಪಿ ಪಟ್ಟಿ ರಿಲೀಸ್; ಮೈಸೂರಿಗೆ ಯದುವೀರ್, ಬೆಂ. ಉತ್ತರಕ್ಕೆ ಶೋಭಾ ಶಿಫ್ಟ್, ಉಡುಪಿಗೆ ಕೋಟ!
ಇನ್ನು ಡಾ. ಸಿ.ಎನ್. ಮಂಜುನಾಥ್ ಸಹ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಬುಧವಾರವೇ (ಮಾ. 13) ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಿದ್ಧತಾ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್, ಶಾಸಕ ಮುನಿರತ್ನ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಹೀಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯು ಬುಧವಾರವೇ ಚುನಾವಣಾ ರಣಕಹಳೆಯನ್ನು ಮೊಳಗಿಸಿದೆ.