ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಕಣ ಸಿದ್ಧಗೊಂಡಿದ್ದು, ಎಲ್ಲ ರಾಜಕೀಯ ಪಕ್ಷಗಳು ಬಹುತೇಕ ಅಭ್ಯರ್ಥಿಗಳನ್ನು ಘೋಷಿಸಿವೆ. ಇಂದು (ಗುರುವಾರ – ಮಾ. 28) ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಡಿಸಿಎಂ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅವರು ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಡಿಕೆಶಿ ಹಾಗೂ ಅತ್ತಿಗೆ ಉಷಾ ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡರು. ಅಲ್ಲಿಂದ ಕನಕಪುರ ನಗರದ ಕೆಂಕೇರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಆಶೀರ್ವಾದ ಪಡೆದ ಸಂಸದ ಡಿ.ಕೆ. ಸುರೇಶ್ ಅವರು ಅಣ್ಣ ಡಿ.ಕೆ. ಶಿವಕುಮಾರ್ ಅವರಿಂದ ಬಿ ಫಾರಂ ಅನ್ನು ಪಡೆದುಕೊಂಡರು. ಅಲ್ಲಿಂದ ಕನಕಪುರ ನಗರದ ಕೆಂಕೇರಮ್ಮ ದೇವಸ್ಥಾನಕ್ಕೆ ತೆರಳಿದ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲಿ ದೇವಿ ಎದುರು ಬಿ.ಫಾರಂ ಇಟ್ಟು ಪೂಜೆ ಸಲ್ಲಿಸಲಾಯಿತು.
ಕನಕಪುರದಿಂದ ರಾಮನಗರಕ್ಕೆ ಹೊರಟ ಡಿ.ಕೆ. ಸುರೇಶ್ ಅವರು ಅಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಚಾಮುಂಡೇಶ್ವರಿ ದೇವಸ್ಥಾನದಿಂದ ಪಿ.ಎಸ್.ವಿ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಚರ್ಚ್‌ನಿಂದ ಜಿಲ್ಲಾ ಮೈದಾನಕ್ಕೆ ಆಗಮಿಸಿ, ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಲಿದ್ದಾರೆ. ಮೆರವಣಿಗೆ ಮೂಲಕ ತೆರಳಿ ಡಿ.ಕೆ. ಸುರೇಶ್ ಅವರು ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಸಂಸದರಾದ ಶ್ರೀ @DKSureshINC ಅವರು ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಇದಕ್ಕೂ ಮುನ್ನ ಕನಕಪುರದಲ್ಲಿರುವ ನಮ್ಮ ಮನೆದೇವರಾದ ತಾಯಿ ಕೆಂಕೇರಮ್ಮ ದೇಗುಲಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯಲಾಯಿತು. ಪ್ರತಿಯೊಂದು ಮಹತ್ತರ ಕಾರ್ಯ ಆರಂಭಿಸುವ ಮುನ್ನ ತಾಯಿ ಕೆಂಕೇರಮ್ಮನ ಆಶೀರ್ವಾದ ಪಡೆಯುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ತಾಯಿ… pic.twitter.com/HesyHjZ4ER
— DK Shivakumar (@DKShivakumar) March 28, 2024
ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ನಮಗೆ ಹೊಸತಲ್ಲ: ಡಿ.ಕೆ. ಶಿವಕುಮಾರ್
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಈ ಬಾರಿಯ ಚುನಾವಣೆಯಲ್ಲಿ ನಾವು ವಿಶೇಷವಾದ ತಯಾರಿ ಮಾಡುವ ಅಗತ್ಯವಿಲ್ಲ. ನಮ್ಮ ಪರವಾಗಿ ಜನರು, ಕಾರ್ಯಕರ್ತರು ಇದ್ದಾರೆ. ಡಿ.ಕೆ. ಸುರೇಶ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದಾರೆ. ಕೋವಿಡ್ ಕಾಲದಲ್ಲಿ ಅವರ ಶ್ರಮ ಮತ್ತು ಕೆಲಸ ಶ್ಲಾಘನೀಯ ಎಂದು ಹೇಳಿದರು.
ಕೋವಿಡ್ ಕಾಲದಲ್ಲಿ ಎಲ್ಲ ನಾಯಕರು ಮನೆಯಿಂದ ಆಚೆ ಬರಲು ಹಿಂಜರಿದಾಗ, ಸುರೇಶ್ ಕೋವಿಡ್ ಆಸ್ಪತ್ರೆಗಳಿಗೆ ಹೋಗಿ, ಸೋಂಕಿತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಇದೆಲ್ಲವೂ ಇತಿಹಾಸ. ಅಂತಹ ಕಷ್ಟ ಕಾಲದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕ್ಷೇತ್ರದ ಜನರಿಗಾಗಿ ಶ್ರಮಿಸಿದ್ದಾರೆ. ಇದ್ಯಾವುದೂ ಚುನಾವಣೆ ಸಮಯದಲ್ಲಿ ಮಾಡಿದ ಕೆಲಸವಲ್ಲ. ಸುರೇಶ್ ಅವರು ಪ್ರತಿ ಹಳ್ಳಿ, ಹಳ್ಳಿ ಸುತ್ತಾಡಿ ಪಂಚಾಯ್ತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ದೇವೇಗೌಡರ ಕುಟುಂಬದ ವಿರುದ್ಧದ ಹೋರಾಟ ಮೊದಲಲ್ಲ
ಬಿಜೆಪಿ ಹಾಗೂ ಜೆಡಿಎಸ್ ಸೇರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದವರಾದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಲಾಗಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ನಾವು ದೇವೇಗೌಡರ ಕುಟುಂಬದ ವಿರುದ್ಧ ಅನೇಕ ಚುನಾವಣೆಗಳನ್ನು ಮಾಡಿದ್ದೇವೆ. ದೇವೇಗೌಡರ ವಿರುದ್ಧ ಓರ್ವ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ನಾನು ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದೇನೆ. 2013ರ ಉಪಚುನಾವಣೆಯಲ್ಲಿ ಇದೇ ರೀತಿ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದಾಗ ಸುರೇಶ್ ಅವರು ಗೆದ್ದಿದ್ದರು. ಆಗ ಸಿದ್ದರಾಮಯ್ಯ ಅವರ ಸರ್ಕಾರ ಇದ್ದರೂ ನಾನು ಸಚಿವನಾಗಿರಲಿಲ್ಲ. ಆಗ ನನಗೆ ದೊಡ್ಡ ಸವಾಲಾಗಿತ್ತು. ಆಗಲೂ ನಾವು ಸಹೋದರಿ ಅನಿತಾ ಕುಮಾರಸ್ವಾಮಿ ಅವರನ್ನು 1.30 ಲಕ್ಷ ಮತಗಳಿಂದ ಮಣಿಸಿದೆವು. ನಂತರ ಜನ ಸುರೇಶ್ ಅವರನ್ನು ಸತತವಾಗಿ ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.