Site icon Vistara News

‌Lok Sabha Election 2024: ಡಿ.ಕೆ.ಸುರೇಶ್‌ದು ಸ್ವಾರ್ಥ, ಸುಲಿಗೆ, ಕೆಡುಕು ರಾಜಕಾರಣ ಎಂದ ಜೆಡಿಎಸ್!

Lok Sabha Election 2024 DK Suresh is selfish extortionist asays JDS

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bangalore Rural Lok Sabha constituency) ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ (DR CN Manjunath) ಬುದ್ಧಿವಂತ ರಾಜಕಾರಣಿಯಾಗಿದ್ದು, ಮಾಜಿ ಪ್ರಧಾನಿ ದೇವೇಗೌಡ ಪಕ್ಷ ಸರಿ ಇಲ್ಲ ಎಂದು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸಂಸದ ಡಿ.ಕೆ.ಸುರೇಶ್ (DK Suresh) ಹೇಳಿಕೆಗೆ ಜೆಡಿಎಸ್ (JDS Karnataka) ಖಡಕ್‌ ತಿರುಗೇಟು ನೀಡಿದೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಹೋರಾಟವು ನಿಸ್ವಾರ್ಥ ಮತ್ತು ಸ್ವಾರ್ಥ, ಸೇವೆ ಮತ್ತು ಸುಲಿಗೆ, ಒಳಿತು ಮತ್ತು ಕೆಡುಕಿನ ನಡುವೆ ಹೋರಾಟ ಎಂದು ಬಣ್ಣಿಸಿದೆ.

ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌, “ಡಾ.ಸಿ.ಎನ್.ಮಂಜುನಾಥ್ v/s ಡಿ.ಕೆ.ಸುರೇಶ್; ನಿಸ್ವಾರ್ಥ vs ಸ್ವಾರ್ಥ!; ಸೇವೆ v/s ಸುಲಿಗೆ!!; ಒಳಿತು v/s ಕೆಡುಕು!!!” ಇದಕ್ಕೆ ಮಿಗಿಲಾಗಿ ಹೆಚ್ಚಿನದನ್ನು ಹೇಳುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದೆ.

ನೀವೇನು? ಮಂಜುನಾಥ್‌ ಏನು?

ಡಿ.ಕೆ. ಸುರೇಶ್ ರವರೇ ನೀವೇನು? ಡಾ.ಸಿ.ಎನ್. ಮಂಜುನಾಥ್ ಅವರೇನು? ಎನ್ನುವುದು ರಾಜ್ಯಕ್ಕಷ್ಟೇ ಅಲ್ಲ, ಇಡೀ ಭಾರತ ದೇಶಕ್ಕೇ ಗೊತ್ತಿದೆ. ಅನಗತ್ಯವಾಗಿ ನಾಲಿಗೆ ಜಾರಿ ಗುಣ ಹಾಳು ಮಾಡಿಕೊಳ್ಳಬೇಡಿ. ಆರೋಗ್ಯ ಕ್ಷೇತ್ರದಲ್ಲಿ ಎಣೆ ಇಲ್ಲದಷ್ಟು ಸೇವೆ ಮಾಡಿ ಲಕ್ಷಾಂತರ ಬಡಜನರ ಹೃದಯದಲ್ಲಿ ನೆಲೆಸಿರುವ ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಅನಾರೋಗ್ಯಕರ ಅಪಪ್ರಚಾರದಲ್ಲಿ ನೀವು ನಿರತರಾಗಿದ್ದೀರಿ. ಸೋಲಿನ ದುಸ್ವಪ್ನದಿಂದ ನೀವು ಬಳಲುತ್ತಿರುವುದು ಸ್ಪಷ್ಟ ಎಂದು ಜೆಡಿಎಸ್ ತಿರುಗೇಟು ಕೊಟ್ಟಿದೆ.

ಫ್ಯಾಮಿಲಿ ಪಾಲಿಟಿಕ್ಸೋ ಅಥವಾ ಫ್ಯಾಮಿಲಿ ಪ್ಯಾಕೇಜೋ?

ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆಲ್ಲಿದೆ? ಇಡೀ ರಾಜ್ಯ ನಿಮ್ಮ ಕಬಂಧಬಾಹುಗಳಲ್ಲಿ ಬಂಧಿಯಾಗಿದೆ. ಅಣ್ಣ ಡಿಸಿಎಂ, ತಮ್ಮ ಎಂಪಿ, ಸಹೋದರಿಯ ಗಂಡ ವಿಧಾನ ಪರಿಷತ್ ಸದಸ್ಯ, ಇನ್ನೊಬ್ಬರು ಕುಣಿಗಲ್ ಶಾಸಕ. ಇದೇನು ಫ್ಯಾಮಿಲಿ ಪಾಲಿಟಿಕ್ಸೋ ಅಥವಾ ಫ್ಯಾಮಿಲಿ ಪ್ಯಾಕೇಜೋ? ನೀವು ಏನೆಂದು ಕರೀತೀರಿ ಡಿ.ಕೆ. ಸುರೇಶ್ ಅವರೇ? ಎಂದು ಖಾರವಾಗಿ ಪ್ರಶ್ನಿಸಿದೆ ಜೆಡಿಎಸ್.

ವ್ಯರ್ಥ ಆಲಾಪ ಏಕೆ ಸುರೇಶ್ ಅವರೇ?

ಅಳಿಯ ಜಾಣ ಆಗೋದು ತಪ್ಪಲ್ಲ. ನಿಮ್ಮಂತೆ ಇನ್ನೊಬ್ಬರ ಜೀವನಕ್ಕೆ ಎರವಾಗೋದು ತಪ್ಪಲ್ಲವೇ? ಡಾ.ಮಂಜುನಾಥ್ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೆ ನಿಮಗೇನು? ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿಮ್ಮ ಎದುರಾಳಿ, ಸೆಣಸಿ. ಅದು ಬಿಟ್ಟು ವ್ಯರ್ಥ ಆಲಾಪ ಏಕೆ ಸುರೇಶ್ ರವರೇ? ಎಂದು ಜೆಡಿಎಸ್ ಟಾಂಗ್ ನೀಡಿದೆ.

ಇದನ್ನೂ ಓದಿ: Lok Sabha Election 2024: ವಿಧಾನ ಪರಿಷತ್‌ಗೆ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್‌: ಸುಳಿವು ಕೊಟ್ಟ ಬಿಎಸ್‌ವೈ

ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ

ದೇವೇಗೌಡರ ಪಾರ್ಟಿ ಕಥೆ ಇರಲಿ, ನಿಮ್ಮ ಪಾರ್ಟಿ ಹಣೆಬರಹ ನೋಡಿಕೊಳ್ಳಿ. ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಕರ್ಮಕಾಂಡದ ಬಗ್ಗೆ ಹೇಳುತ್ತಾ ಹೋದರೆ ಅದೇ ಮಹಾ ಕಾದಂಬರಿ ಆಗುತ್ತದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಪಕ್ಕದವರ ತಟ್ಟೆಯಲ್ಲಿ ನೊಣ ಹುಡುಕುವ ದಡ್ಡತನವೇಕೆ? ಅಕ್ವರ್ಡ್ ಪದಕ್ಕೆ ನಿಮಗಿಂತ ಸರಿಯಾದ ಅನ್ವರ್ಥ ಇದೆಯೇ? ಏನಂತೀರಿ? ಎಂದು ಜೆಡಿಎಸ್ ಪ್ರಶ್ನಿಸಿದೆ.

Exit mobile version