ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡು ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ಮಾಡುತ್ತಿದೆ. ಈ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನವನ್ನು ಬಿಜೆಪಿ ಮಾಡಿದೆ ಎನ್ನಲಾಗಿದ್ದು, ಈ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಇದಕ್ಕೆ ಈಗ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ (Dr CN Manjunath) ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಅವರ ಸ್ಪರ್ಧೆ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ಮಂಜುನಾಥ್ ಅವರ ಮನವೊಲಿಸುವಲ್ಲಿ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಯಶಸ್ವಿಯಾಗಿದ್ದು, ಕಣಕ್ಕಿಳಿಯಲು ಮಂಜುನಾಥ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಾ. ಮಂಜುನಾಥ್ ಮನವೊಲಿಕೆ ಮಾಡುವಲ್ಲಿ ಎಚ್.ಡಿ. ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮಂಜುನಾಥ್ ಒಲವು ತೋರಿರುವ ಬಗ್ಗೆ ಬಿಜೆಪಿ ನಾಯಕರಿಗೆ ಎಚ್‌ಡಿಕೆ ತಿಳಿಸಿದ್ದಾರೆ ಎನ್ನಲಾಗಿದೆ.
ಮಂಜುನಾಥ್ ಸ್ಪರ್ಧೆ ಖಚಿತ
ಬೆಂಗಳೂರು ಗ್ರಾಮಾಂತರದಿಂದ ಮಂಜುನಾಥ್ ಸ್ಪರ್ಧೆ ಖಚಿತ ಎಂದು ತಿಳಿದುಬರುತ್ತಿದ್ದಂತೆ ಈ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಸಂಬಂಧ ಮಂಗಳವಾರ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನವ ದೆಹಲಿಗೆ ಭೇಟಿ ನೀಡಲಿದ್ದು, ಬಿಜೆಪಿ ನಾಯಕರ ಜತೆ ಅಂತಿಮ ಹಂತದ ಮಾತುಕತೆಯನ್ನು ನಡೆಸಲಿದ್ದಾರೆ. ಮಂಜುನಾಥ್ ಸ್ಪರ್ಧೆ ಬಗ್ಗೆ ಈಗಾಗಲೇ ಎಚ್‌ಡಿಕೆ ಬಿಜೆಪಿ ನಾಯಕರ ಗಮನಕ್ಕೆ ತಂದಿದ್ದಾರೆ.
ರಾಜಕೀಯ ಪ್ರವೇಶ ಇಲ್ಲ ಎಂದಿದ್ದ ದೇವೇಗೌಡರು
ಡಾ. ಸಿ.ಎನ್. ಮಂಜುನಾಥ್ ಅವರು ರಾಜಕೀಯ ಪ್ರವೇಶ ಮಾಡುವುದಿಲ್ಲ, ಅವರು ಲೋಕಸಭಾ ಚುನಾವಣೆಯಲ್ಲಿ (Parliament Election 2024) ಸ್ಪರ್ಧೆ ಮಾಡುವುದಿಲ್ಲ ಎಂದುಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು (HD Devegowda) ಅವರು ಈಚೆಗೆ ಕಡ್ಡಿ ಮುರಿದಂತೆ ಹೇಳಿದ್ದರು. ಈ ಮೂಲಕ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವದಂತಿಗೆ ತೆರೆ ಎಳೆದಿದ್ದರು.
ಜಯದೇವ ಸಂಸ್ಥೆಯಿಂದ ನಿವೃತ್ತರಾದ ಬಳಿಕ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಅವರ ಸೇವೆಯನ್ನು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳುವುದಕ್ಕಾಗಿ ಬಿಜೆಪಿ ಕೂಡಾ ಅವರ ಸ್ಪರ್ಧೆಗೆ ಒತ್ತು ನೀಡಲಿದೆ. ಸ್ವತಃ ಅಮಿತ್ ಶಾ ಮತ್ತು ಮೋದಿ ಅವರೇ ಈ ವಿಚಾರದಲ್ಲಿ ಉತ್ಸುಕರಾಗಿದ್ದಾರೆ. ಅವರು ಮುಂದೆ ದೇಶದ ಆರೋಗ್ಯ ಸಚಿವರಾಗಲೂಬಹುದು ಎಂಬವರೆಗೆ ಮಾತುಗಳು ಹರಿದಾಡಿದ್ದವು. ಆದರೆ, ದೇವೇಗೌಡರು ಇದನ್ನು ನಿರಾಕರಣೆ ಮಾಡಿದ್ದರು.
ಮಂಜುನಾಥ್ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬಹುದು, ಇದು ಸುಮಲತಾ ಅವರನ್ನು ಸಮಾಧಾನ ಮಾಡಲು ಒಂದು ಸಕಾರಣವೂ ಆದೀತು. ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ನ ಹಾಲಿ ಸಂಸದ ಡಿ.ಕೆ. ಸುರೇಶ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಆದಾರು ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಇದೆಲ್ಲದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಂಜುನಾತ್, ಎಲ್ಲ ಕಡೆಯಿಂದ ಚರ್ಚೆ ನಡೆಯುತ್ತಿದೆ. ಆದರೆ, ನಾನು ಈ ಬಗ್ಗೆ ತೀರ್ಮಾನ ಮಾಡಿಲ್ಲ ಎಂದಿದ್ದರು. ಕೊನೆಗೆ ಮಾಜಿ ಪ್ರಧಾನಿ ದೇವೇಗೌಡರು ಸಹ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಆದರೆ, ಎಚ್.ಡಿ. ಕುಮಾರಸ್ವಾಮಿ ಅವರು ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ನ 21 ಅಭ್ಯರ್ಥಿಗಳ ಪಟ್ಟಿ ಇಂದೇ ಫೈನಲ್; 8 ಸಚಿವರು ಕಣಕ್ಕೆ?
ದೇವೇಗೌಡರು ಬೇಡ ಎಂದಿದ್ದು ಏಕೆ?
- ಮಂಜುನಾಥ್ ಅವರು ಇಡೀ ದೇಶಾದ್ಯಂತ ತಮ್ಮದೇ ಆದ ಹೆಸರು ಮಾಡಿದವರು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಅಂಥವರು ಬರೋದು ಸರಿಯಲ್ಲ.
- ಅವರಿಗೆ ಒಂದು ಒಳ್ಳೆಯ ಸ್ಥಾನವಿದೆ. ಮುಗಿಲೆತ್ತರದ ಹೆಸರಿದೆ. ಇಂತಹ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿ ಅಂತ ನಾವು ಒತ್ತಾಯಿಸುವುದಿಲ್ಲ.
- ಡಾ. ಸಿ.ಎನ್ ಮಂಜುನಾಥ್ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ತೀರ್ಮಾನ ನಾವು ಮಾಡಲ್ಲ. ಹಾಗಾಗಿ ಸ್ಪರ್ಧೆ ಮಾಡಲ್ಲ
ಈ ಎಲ್ಲ ಕಾರಣವನ್ನು ನೀಡಿ ಎಚ್.ಡಿ. ದೇವೇಗೌಡ ಅವರು ಮಂಜುನಾಥ್ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು.