Site icon Vistara News

Lok Sabha Election 2024: ನಾಳೆ ಡಾ. ಮಂಜುನಾಥ್‌ ಬಿಜೆಪಿ ಸೇರ್ಪಡೆ; ಬೆಂಗಳೂರು ಗ್ರಾಮಾಂತರದಿಂದ ಇಂದೇ ಪ್ರಚಾರ!

Lok Sabha Election 2024 Dr Manjunath joins BJP Campaigning from Bengaluru Rural today

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಬಿರುಸಿನ ತಯಾರಿ ಮಾಡಿಕೊಳ್ಳುತ್ತಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕವು ಬಿಜೆಪಿ ಪಾಲಿಗೆ ಅತಿ ದೊಡ್ಡ ರಾಜ್ಯವಾಗಿದೆ. ಅಲ್ಲದೆ, ಇಲ್ಲಿ ಬಿಜೆಪಿ ಪರವಾದ ಅಲೆ ಇದೆ. ಜತೆಗೆ ಇಲ್ಲಿನ ಮತದಾರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡುತ್ತಾನೆ ಎಂಬ ವಿಷಯವು ಹಲವು ಎಲೆಕ್ಷನ್‌ಗಳ ಮೂಲಕ ಸಾಬೀತಾಗಿದೆ. ಹೀಗಾಗಿ ಕಳೆದ ಬಾರಿ 25 + 1 ಸೀಟನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ 28ಕ್ಕೆ 28 ಕ್ಷೇತ್ರವನ್ನೂ ಪಡೆದು ಕ್ಲೀನ್‌ ಸ್ವೀಪ್‌ ಮಾಡುವ ಬಗ್ಗೆ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಈಗ ಬಿಜೆಪಿ – ಜೆಡಿಎಸ್‌ ಮೈತ್ರಿ ಪಕ್ಷಕ್ಕೆ ಕಬ್ಬಿಣದ ಕಡಲೆ ಎಂದೇ ಭಾವಿಸಲಾಗಿರುವ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರಕ್ಕೆ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್.‌ ಮಂಜುನಾಥ್‌ (Dr CN Manjunath) ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ. ಇದರ ಭಾಗವಾಗಿ ಮಂಜುನಾಥ್‌ ಅವರು ನಾಳೆ (ಗುರುವಾರ – ಮಾ. 14) ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಬುಧವಾರ ಬಿಜೆಪಿ ಪಕ್ಷವನ್ನು ಸೇರಲಿರುವ ಡಾ. ಸಿ.ಎನ್ ಮಂಜುನಾಥ್ ಅವರು ಚುನಾವಣಾ ಅಖಾಡಕ್ಕೆ ನೇರ ಎಂಟ್ರಿ ಕೊಡಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಡಾ. ಮಂಜುನಾಥ್ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದಾರೆ. ನಾಳೆ ನಡೆಯಲಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ‌ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭಾ ಪ್ರತಿಪಕ್ಷ ನಾಯಕ ಅಶೋಕ್ ಸೇರಿದಂತೆ ಪ್ರಮುಖ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಜರುಗಲಿದೆ.

ಈಗಲೇ ಪ್ರಚಾರ ಶುರು!

ಡಾ. ಸಿ.ಎನ್.‌ ಮಂಜುನಾಥ್‌ ಅವರು ಇನ್ನೂ ಬಿಜೆಪಿ ಸೇರಿಲ್ಲ. ಅಲ್ಲದೆ, ಬಿಜೆಪಿಯಿಂದ ಇನ್ನೂ ಅಧಿಕೃತವಾಗಿ ಟಿಕೆಟ್‌ ಘೋಷಣೆ ಆಗಿಲ್ಲ. ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅವರು ಚುನಾವಣಾ ಪ್ರಚಾರ ಕಾರ್ಯಕ್ಕೆ ಬುಧವಾರವೇ ಚಾಲನೆ ನೀಡಲಿದ್ದಾರೆ. ಇಂದು ಸಂಜೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಬಿಜೆಪಿ ನಾಯಕರು ಅಲ್ಲಿ ಚುನಾವಣಾ ಸಿದ್ಧತಾ ಸಭೆಯನ್ನು ನಡೆಸಲಿದ್ದು, ಡಾ. ಸಿ.ಎನ್. ಮಂಜುನಾಥ್, ಶಾಸಕರಾದ ಮುನಿರತ್ನ, ಕೃಷ್ಣಪ್ಪ, ವಿಧಾನ‌ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಇತರರು ಭಾಗಿಯಾಗಲಿದ್ದಾರೆ.

ರಾಜಕೀಯ ಪ್ರವೇಶ ಇಲ್ಲ ಎಂದಿದ್ದ ದೇವೇಗೌಡರು

ಡಾ. ಸಿ.ಎನ್‌. ಮಂಜುನಾಥ್‌ ಅವರು ರಾಜಕೀಯ ಪ್ರವೇಶ ಮಾಡುವುದಿಲ್ಲ, ಅವರು ಲೋಕಸಭಾ ಚುನಾವಣೆಯಲ್ಲಿ (Parliament Election 2024) ಸ್ಪರ್ಧೆ ಮಾಡುವುದಿಲ್ಲ ಎಂದುಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು (HD Devegowda) ಅವರು ಈಚೆಗೆ ಕಡ್ಡಿ ಮುರಿದಂತೆ ಹೇಳಿದ್ದರು. ಈ ಮೂಲಕ ಬಿಜೆಪಿ -ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವದಂತಿಗೆ ತೆರೆ ಎಳೆದಿದ್ದರು.

ಜಯದೇವ ಸಂಸ್ಥೆಯಿಂದ ನಿವೃತ್ತರಾದ ಬಳಿಕ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಅವರ ಸೇವೆಯನ್ನು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳುವುದಕ್ಕಾಗಿ ಬಿಜೆಪಿ ಕೂಡಾ ಅವರ ಸ್ಪರ್ಧೆಗೆ ಒತ್ತು ನೀಡಲಿದೆ. ಸ್ವತಃ ಅಮಿತ್‌ ಶಾ ಮತ್ತು ಮೋದಿ ಅವರೇ ಈ ವಿಚಾರದಲ್ಲಿ ಉತ್ಸುಕರಾಗಿದ್ದಾರೆ. ಅವರು ಮುಂದೆ ದೇಶದ ಆರೋಗ್ಯ ಸಚಿವರಾಗಲೂಬಹುದು ಎಂಬವರೆಗೆ ಮಾತುಗಳು ಹರಿದಾಡಿದ್ದವು. ಆದರೆ, ದೇವೇಗೌಡರು ಇದನ್ನು ನಿರಾಕರಣೆ ಮಾಡಿದ್ದರು.

ಮಂಜುನಾಥ್‌ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬಹುದು, ಇದು ಸುಮಲತಾ ಅವರನ್ನು ಸಮಾಧಾನ ಮಾಡಲು ಒಂದು ಸಕಾರಣವೂ ಆದೀತು. ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ನ ಹಾಲಿ ಸಂಸದ ಡಿ.ಕೆ. ಸುರೇಶ್‌ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಆದಾರು ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಇದೆಲ್ಲದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಂಜುನಾತ್‌, ಎಲ್ಲ ಕಡೆಯಿಂದ ಚರ್ಚೆ ನಡೆಯುತ್ತಿದೆ. ಆದರೆ, ನಾನು ಈ ಬಗ್ಗೆ ತೀರ್ಮಾನ ಮಾಡಿಲ್ಲ ಎಂದಿದ್ದರು. ಕೊನೆಗೆ ಮಾಜಿ ಪ್ರಧಾನಿ ದೇವೇಗೌಡರು ಸಹ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಆದರೆ, ಎಚ್‌.ಡಿ. ಕುಮಾರಸ್ವಾಮಿ ಅವರು ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Lok Sabha Election 2024: ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ; ಸಿ.ಟಿ. ರವಿ ವಿರುದ್ಧ ಶೋಭಾ ಪರೋಕ್ಷ ವಾಗ್ದಾಳಿ

ದೇವೇಗೌಡರು ಬೇಡ ಎಂದಿದ್ದು ಏಕೆ?

  1. ಮಂಜುನಾಥ್‌ ಅವರು ಇಡೀ ದೇಶಾದ್ಯಂತ ತಮ್ಮದೇ ಆದ ಹೆಸರು ಮಾಡಿದವರು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಅಂಥವರು ಬರೋದು ಸರಿಯಲ್ಲ.
  2. ಅವರಿಗೆ ಒಂದು ಒಳ್ಳೆಯ ಸ್ಥಾನವಿದೆ. ಮುಗಿಲೆತ್ತರದ ಹೆಸರಿದೆ. ಇಂತಹ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿ ಅಂತ ನಾವು ಒತ್ತಾಯಿಸುವುದಿಲ್ಲ.
  3. ಡಾ. ಸಿ.ಎನ್‌ ಮಂಜುನಾಥ್‌ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ತೀರ್ಮಾನ ನಾವು ಮಾಡಲ್ಲ. ಹಾಗಾಗಿ ಸ್ಪರ್ಧೆ ಮಾಡಲ್ಲ

ಈ ಎಲ್ಲ ಕಾರಣವನ್ನು ನೀಡಿ ಎಚ್.ಡಿ. ದೇವೇಗೌಡ ಅವರು ಮಂಜುನಾಥ್‌ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು.

Exit mobile version