Site icon Vistara News

Lok Sabha Election 2024: ವ್ಯಾಟ್ಸ್‌ ಆ್ಯಪ್‌ಗೆ ವಿಕಸಿತ ಭಾರತ ಸಂದೇಶ ಕಳುಹಿಸುವುದನ್ನು ನಿಲ್ಲಿಸಿ; ಕೇಂದ್ರಕ್ಕೆ ಚುನಾವಣಾ ಆಯೋಗ

election commission

election commission

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಗೆ ದಿನಾಂಕ ಘೋಷಣೆಯಾಗಿದೆ. ಜತೆಗೆ ಮಾದರಿ ನೀತಿ ಸಂಹಿತೆಯೂ ಜಾರಿಯಾಗಿದೆ. ಈ ಮಧ್ಯೆ ವ್ಯಾಟ್ಸ್‌ ಆ್ಯಪ್‌ಗೆ ವಿಕಸಿತ ಭಾರತ ಅಭಿಯಾನ (Viksit Bharat Abhiyan)ದ ಸಂದೇಶ ಕಳುಹಿಸುವುದನ್ನು ನಿಲ್ಲಿಸಲು ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ (Election Commission of India) ಸೂಚನೆ ನೀಡಿದೆ. ಕೆಲವು ದಿನಗಳಿಂದ ದೇಶಾದ್ಯಂತದ ಜನರಿಗೆ ವ್ಯಾಟ್ಸ್‌ ಆ್ಯಪ್‌ನಲ್ಲಿ ವಿಕಸಿತ ಭಾರತಕ್ಕೆ ಸಂಬಂಧಿಸಿದ ಸಂದೇಶ ರವಾನೆಯಾಗುತ್ತಿದೆ.

ಈ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (Ministry of Electronics and Information Technology)ಕ್ಕೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಜತೆಗೆ ವರದಿಯನ್ನು ತಕ್ಷಣ ಸಲ್ಲಿಸುವಂತೆ ಚುನಾವಣಾ ಆಯೋಗವು ಸಚಿವಾಲಯವನ್ನು ಕೇಳಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೇಶದ ನಾಗರಿಕರ ಮೊಬೈಲ್ ಫೋನ್‌ಗಳಿಗೆ ಇಂತಹ ಸಂದೇಶಗಳು ರವಾನೆಯಾಗುತ್ತಿರುವುದು ತಿಳಿದು ಬಂದಿದೆ ಎಂದು ಚುನಾವಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.

ದೂರುಗಳು ಬಂದಿದ್ದವು

ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದರೂ ಸರ್ಕಾರದ ಉಪಕ್ರಮಗಳನ್ನು ಎತ್ತಿ ತೋರಿಸುವ ಇಂತಹ ಸಂದೇಶಗಳನ್ನು ನಾಗರಿಕರ ಫೋನ್‌ಗಳಿಗೆ ತಲುಪಿಸಲಾಗುತ್ತಿದೆ ಎಂದು ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಯೋಗವು ಈ ಕ್ರಮ ಕೈಗೊಂಡಿದೆ.

ಸಚಿವಾಲಯ ಹೇಳಿದ್ದೇನು?

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಬಗ್ಗೆ ಉತ್ತರಿಸಿ, ಮಾದರಿ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಈ ಸಂದೇಶಗಳನ್ನು ಕಳುಹಿಸಲಾಗಿತ್ತು. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅವರಿಗೆ ತಲುಪುವುದು ವಿಳಂಬವಾಗಿರಬಹುದು ಎಂದು ಆಯೋಗಕ್ಕೆ ಮಾಹಿತಿ ನೀಡಿದೆ.

ಚುನಾವಣೆ ದಿನಾಂಕ

ದೇಶದ ಜನರು ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗವು ಮಾರ್ಚ್‌ 16ರಂದು ಘೋಷಿಸಿದೆ. ಈ ಬಾರಿಯೂ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ದಿನಾಂಕವನ್ನು ಘೋಷಿಸಿದರು. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮೊದಲ ಹಂತದ ಮತದಾನವು ಏಪ್ರಿಲ್‌ 19ರಿಂದ ಆರಂಭವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ (ಏಪ್ರಿಲ್‌ 26 ಮತ್ತು ಮೇ 7) ಮತದಾನ ನಡೆಯಲಿದೆ. ಜೂನ್ 1ರಂದು ಚುನಾವಣೆ ಮುಗಿಯಲಿದೆ.

ಇದನ್ನೂ ಓದಿ: Assembly Elections: ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ; ಫಲಿತಾಂಶ ದಿನಾಂಕ ಬದಲು

97 ಕೋಟಿ ಮತದಾರರು ಈ ನೋಂದಣಿ ಮಾಡಿಕೊಂಡಿದ್ದಾರೆ. 10.5 ಲಕ್ಷ ಮತಗಟ್ಟೆಗಳನ್ನು ರಚಿಸಲಾಗುತ್ತದೆ. 55 ಲಕ್ಷ ಮತಯಂತ್ರಗಳನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತೇವೆ. ಇದುವರೆಗೆ 100 ಅಧಿಕ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಚುನಾವಣಾ ಆಯೋಗದ್ದಾಗಿದೆ. ಈ ಬಾರಿ 18-19 ವರ್ಷದ 1.89 ಕೋಟಿ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 85 ವರ್ಷ ದಾಟಿದವರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ವಿಶೇಷ ಚೇತನರಿಗೂ ಕೂಡ ಮನೆಯಿಂದಲೇ ಮತದಾನ ಮಾಡಬಹುದು ಎಂದು ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version