Site icon Vistara News

Lok Sabha Election 2024: ಜಗನ್ ಮೋಹನ್ ರೆಡ್ಡಿ ವಿರುದ್ಧ ದ್ವೇಷದ ಭಾಷಣ; ಚಂದ್ರಬಾಬು ನಾಯ್ಡುಗೆ ನೋಟಿಸ್‌

Lok Sabha Election 2024

ವಿಜಯವಾಡ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ವಾದ-ವಾಗ್ವಾದ, ಟೀಕೆ, ವ್ಯಂಗ್ಯ, ಆರೋಪಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ವೈಯಕ್ತಿಕ ಟೀಕೆ ಮಾಡುವವರ ವಿರುದ್ಧ ಚುನಾವಣಾ ಆಯೋಗ (Election Commission of India) ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಇದೀಗ ತೆಲುಗು ದೇಶಂ ಪಕ್ಷದ (Telugu Desam Party) ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು (Chandrababu Naidu) ಅವರಿಗೆ ಚುನಾವಣಾ ಆಯೋಗ ಗುರುವಾರ ನೋಟಿಸ್ ನೀಡಿ, ಮಾರ್ಚ್ 31ರಂದು ಆಡಳಿತರೂಢ ಪಕ್ಷವಾದ ವೈಎಸ್ಆರ್‌ಪಿ (YSRCP), ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಿರುದ್ಧ ಮಾಡಿದ ಭಾಷಣದ ವಿವರಣೆ ನೀಡುವಂತೆ ಸೂಚಿಸಿದೆ.

ಚಂದ್ರಬಾಬು ನಾಯ್ಡು ಅವರು ಎಮ್ಮಿಗನೂರು, ಮಾರ್ಕಪುರಂ ಮತ್ತು ಬಾಪಟ್ಲಾ ಕ್ಷೇತ್ರಗಳಲ್ಲಿ ನಡೆದ ಪ್ರಚಾರ ರ‍್ಯಾಲಿಗಳಲ್ಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರನ್ನು ‘ರಾಕ್ಷಸ’, ‘ಪ್ರಾಣಿ’, ‘ಕಳ್ಳ’ ಮತ್ತು ಇತರ ಅವಮಾನಕರ ಪದಗಳನ್ನು ಬಳಸಿ ಸಂಬೋಧಿಸಿದ್ದಾರೆ ಎಂದು ಆರೋಪಿಸಿ ವೈಎಸ್ಆರ್‌ಪಿಯ ಪ್ರಧಾನ ಕಾರ್ಯದರ್ಶಿ ಲೆಲ್ಲಾ ಎಪಿ ರೆಡ್ಡಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ಚುನಾವಣಾ ಆಯೋಗವು 48 ಗಂಟೆಗಳ ಒಳಗೆ ತಮ್ಮ ನಿಲುವನ್ನು ವಿವರಿಸುವಂತೆ ನಾಯ್ಡು ಅವರಿಗೆ ನಿರ್ದೇಶನ ನೀಡಿದೆ. ಚುನಾವಣಾ ಆಯೋಗವು ಮಾರ್ಚ್ 16ರಂದು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದ್ದು, ಅಂದಿನಿಂದಲೇ ದೇಶದಲ್ಲಿ ಮಾದರಿ ನೀತಿ ಸಂಹಿತೆ ಅಸ್ತಿತ್ವಕ್ಕೆ ಬಂದಿದೆ. ವಿಶ್ವದ ಅತಿದೊಡ್ಡ ಚುನಾವಣೆ ಎಂದು ಹೇಳಲಾಗುವ ಇದು ಏಪ್ರಿಲ್ 19ರಿಂದ ಜೂನ್ 1ರವರೆಗೆ ಸುಮಾರು ಎರಡು ತಿಂಗಳ ಕಾಲ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ.

ಹೇಮಾಮಾಲಿನಿಯನ್ನು ನೆಕ್ಕಲು ಬಿಜೆಪಿ ಟಿಕೆಟ್‌ ಎಂದ ರಣದೀಪ್‌ ಸುರ್ಜೇವಾಲಾ

ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ ಅವರು ಹೇಮಾಮಾಲಿನಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. “ಹೇಮಾಮಾಲಿನಿಯನ್ನು ನೆಕ್ಕಲು ಬಿಜೆಪಿಯವರು ಟಿಕೆಟ್‌ ಕೊಡುತ್ತಾರೆ” ಎಂದು ರಣದೀಪ್‌ ಸುರ್ಜೇವಾಲಾ ನೀಡಿದ ಹೇಳಿಕೆಯನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಹಾಗೆಯೇ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.

ಕಾರ್ಯಕ್ರಮವೊಂದರಲ್ಲಿ ರಣದೀಪ್‌ ಸುರ್ಜೇವಾಲಾ ಅವರು ಮಾತನಾಡಿದ್ದು, “ಶಾಸಕ, ಸಂಸದರನ್ನು ಏಕೆ ಆಯ್ಕೆ ಮಾಡಲಾಗುತ್ತದೆ? ನಮ್ಮ ಧ್ವನಿ ಎತ್ತ, ನಮ್ಮ ಪರವಾಗಿ ಕೆಲಸ ಮಾಡಲು, ನಮ್ಮ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಲು ಆಯ್ಕೆ ಮಾಡಲಾಗುತ್ತದೆ. ಆದರೆ, ಹೇಮಾಮಾಲಿನಿಯವರನ್ನು ನೆಕ್ಕಲು ಬಿಜೆಪಿಯವರು ಸಂಸದೆಯನ್ನಾಗಿ ಮಾಡುತ್ತಿದ್ದಾರೆಯೇ” ಎಂಬುದಾಗಿ ಹೇಳಿದ್ದಾರೆ ಎಂದು ಬಿಜೆಪಿಯು ವಿಡಿಯೊ ಹಂಚಿಕೊಂಡಿದೆ.

“ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ ಅವರು ಹೇಮಾಮಾಲಿನಿ ಅವರ ಬಗ್ಗೆ ಮಾತ್ರ ಕೆಟ್ಟ, ಅಶ್ಲೀಲ, ಅಸಹ್ಯಕರವಾದ ಕಮೆಂಟ್‌ ಮಾಡಿಲ್ಲ. ಎಲ್ಲ ಹೆಣ್ಣುಮಕ್ಕಳಿಗೆ ಅವರು ಅವಮಾನ ಮಾಡಿದ್ದಾರೆ. ಒಬ್ಬ ಹೆಣ್ಣುಮಗಳನ್ನು ನೆಕ್ಕುವುದು ಎಂದರೆ ಏನು ಅರ್ಥ? ಯಾರಾದರೂ ಇಷ್ಟು ತುಚ್ಚವಾಗಿ ಹೇಳಿಕೆ ನೀಡಲು ಹೇಗೆ ಸಾಧ್ಯ? ಮತ್ತೊಬ್ಬ ಕಾಂಗ್ರೆಸ್‌ ನಾಯಕ, ಬಿಜೆಪಿ ನಾಯಕಿಯ ರೇಟ್‌ ಕೇಳಿದ್ದರು. ಇದು ರಾಹುಲ್‌ ಗಾಂಧಿಯವರ ಕಾಂಗ್ರೆಸ್‌. ಹೆಣ್ಣುಮಕ್ಕಳನ್ನು ಅಸಹ್ಯಕರವಾಗಿ ಕಾಣುವ ಪಕ್ಷವಾಗಿದೆ” ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಟೀಕಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ನಾಯಕ ಸುರ್ಜೇವಾಲಾ ಅವರ ವಿವಾದಾತ್ಮಕ ಹೇಳಿಕೆ ಬಳಿಕ ಟಿಎಂಸಿಗೂ ಸಂಕಷ್ಟ

Exit mobile version