ಬೆಳಗಾವಿ: ಲೋಕಸಭಾ ಚುನಾವಣಾ (Lok Sabha Election 2024) ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಅಲ್ಲದೆ, ರಾಜಕೀಯ ಮುಖಂಡರ ವಾಕ್ಸಮರಗಳು ಶುರುವಾಗಿವೆ. ಈ ಮಧ್ಯೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ (Udupi Chikkamagaluru Lok Sabha constituency) ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಅವರಿಗೆ ಹಿಂದಿ, ಇಂಗ್ಲಿಷ್ ಬರುವುದಿಲ್ಲ. ಅವರಿಗೆ ಮತ ಹಾಕಬೇಡಿ ಎಂಬ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (Jayaprakash Hegde) ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಹೆಗ್ಡೆ ವಿರುದ್ಧ ಬಿಜೆಪಿ ದೂರನ್ನೂ ಕೊಟ್ಟಿದೆ. ಈಗ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಒಂದು ತಿಂಗಳಲ್ಲೇ ಇಂಗ್ಲಿಷ್ ಕಲಿಸುವುದಾಗಿ ಬೆಳಗಾವಿಯ ಇಂಗ್ಲಿಷ್ ಟ್ರೆನರ್‌ವೊಬ್ಬರು ಮುಂದೆ ಘೋಷಿಸಿದ್ದಾರೆ.
ಜಿ.ಎಲ್. ಮಂಜುನಾಥ ಎಂಬ ಇಂಗ್ಲಿಷ್ ಟ್ರೈನರ್ ಈಗ ಈ ಬಗ್ಗೆ ಹೇಳಿದ್ದಾರೆ. ಮೂಲತಃ ಹಾಸನದವರಾಗಿರುವ ಮಂಜುನಾಥ್ ಬೆಳಗಾವಿಯಲ್ಲಿ ಕಳೆದ 20 ವರ್ಷಗಳಿಂದ ಟೈಮ್ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಇಂಗ್ಲಿಷ್ ಭಾಷೆ ಬರುವುದಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಿಂಜರಿಕೆ ಬೇಡ. ನಾನು ಅವರಿಗೆ ಒಂದೇ ತಿಂಗಳಲ್ಲಿ ಇಂಗ್ಲಿಷ್ ಕಲಿಸುತ್ತೇನೆ. ಅದರಲ್ಲೂ ಉಚಿತವಾಗಿ ಹೇಳಿಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಹೇಳಿದ್ದೇನು?
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಮಾರ್ಚ್ 22ರ ಶುಕ್ರವಾರ ಬ್ರಹ್ಮಾವರದಲ್ಲಿ ತಮ್ಮ ಚುನಾವಣಾ ಪ್ರಚಾರದ ವೇಳೆ ಮಾತನಾಡುವಾಗ, “ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕನ್ನಡ ಬಿಟ್ಟರೆ ಹಿಂದಿ ಅಥವಾ ಇಂಗ್ಲಿಷ್ ಬರುವುದಿಲ್ಲ. ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳಾಗುವುದಿಲ್ಲ. ಹೀಗಾಗಿ ಅವರಿಗೆ ಮತ ಹಾಕಬೇಡಿ” ಎಂದು ಹೇಳಿದ್ದರು. ಈ ಹೇಳಿಕೆಯು ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ಅಲ್ಲದೆ, ಈ ಬಗ್ಗೆ ಬಿಜೆಪಿ ನಿಯೋಗವು ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿದೆ. ಭಾಷೆಯ ಹೆಸರಿನಲ್ಲಿ ಮತಯಾಚಿಸಿ ಪ್ರತಿಸ್ಪರ್ಧಿಯನ್ನು ಗೆಲ್ಲಿಸಬೇಡಿ ಎಂದು ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ದೂರು ಕೊಟ್ಟ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಶಾಸಕ ಎಸ್. ಸುರೇಶ್ ಕುಮಾರ್, ಉಡುಪಿ – ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಿಂದಿ, ಇಂಗ್ಲಿಷ್ ಭಾಷೆ ಬರಲ್ಲ, ಮತ ಹಾಕಬೇಡಿ ಅಂದಿದ್ದಾರೆ. ಈ ಹೇಳಿಕೆಯನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಜಯಪ್ರಕಾಶ್ ಹೆಗ್ಡೆ ಅವರು ಆ ಹೇಳಿಕೆ ನೀಡಿ ಜನರಿಗೆ ಅವರ ಮೇಲಿದ್ದ ಗೌರವವನ್ನು ಅವರೇ ಕಡಿಮೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ, ಜಯಪ್ರಕಾಶ್ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಬಯಸಿದಲ್ಲಿ ಇಂಗ್ಲಿಷ್ ಕಲಿಸುವೆ
ಈಗ ಈ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಜುನಾಥ್, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಇಂಗ್ಲಿಷ್ ಕಲಿಕೆ ಬಗ್ಗೆ ಹಿಂಜರಿಕೆ ಬೇಡ, ಅವರು ಬಯಸಿದಲ್ಲಿ ತಾವು ಇಂಗ್ಲಿಷ್ ಅನ್ನು ಹೇಳಿಕೊಡುವುದಾಗಿ ತಿಳಿಸಿದ್ದಾರೆ.