Site icon Vistara News

Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

Lok Sabha Election 2024

Lok Sabha Election 2024

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಮೊದಲ ಹಂತದ ಮತದಾನ ಇಂದು (ಏಪ್ರಿಲ್‌ 19) ನಡೆದಿದೆ. ಒಟ್ಟು 7 ಹಂತಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಎಂದರೆ ಈ ಬಾರಿ ಚುನಾವಣಾ ಆಯೋಗ ಕೆಲ ವೃದ್ಧ, ಅಸಕ್ತ, ನಡೆಯಲು ಬಾರದ ಮತದಾರರಿಗೆ ಮನೆಯಿಂದಲೇ ವೋಟು ಹಾಕುವ ಅವಕಾಶವನ್ನು ಕಲ್ಪಿಸಿದೆ. ಈ ವೋಟ್‌ ಪ್ರಮ್ ಹೋಮ್‌ (Vote from home)ಗಾಗಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿ ವೃದ್ಧರ ಮನೆ ಬಾಗಿಲಿಗೇ ಬರುತ್ತಾರೆ. ಅದರಂತೆ ಕೇರಳದಲ್ಲಿ 92 ವರ್ಷದ ವೃದ್ಧರೊಬ್ಬರ ಒಂದೇ ಒಂದು ವೋಟಿಗಾಗಿ ಚುನಾವಣಾ ಸಿಬ್ಬಂದಿ ದಟ್ಟ ಕಾಡಿನಲ್ಲಿ ಸುಮಾರು 18 ಕಿ.ಮೀ. ಪ್ರಯಾಣ ಬೆಳೆಸಿದ್ದಾರೆ. ಸದ್ಯ ಚುನಾವಣಾ ಸಿಬ್ಬಂದಿಯ ಈ ಕರ್ತವ್ಯ ಪ್ರಜ್ಞೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೇರಳದ ಇಡುಕ್ಕಿ ಜಿಲ್ಲೆಯ ಎಡಮಲಕ್ಕುಡಿ ಎಂಬ ಬುಡಕಟ್ಟು ಗ್ರಾಮದಲ್ಲಿ ವಾಸಿಸುತ್ತಿರುವ ಶಿವಲಿಂಗಂ ಅವರ ವೋಟಿಗಾಗಿ ಚುನಾವಣಾ ಸಿಬ್ಬಂದಿ ಕಲ್ಲು-ಮುಳ್ಳುಗಳ ಹಾದಿ ತುಳಿದು 18 ಕಿ.ಮೀ. ನಡೆದಿದ್ದಾರೆ. ಇಡುಕ್ಕಿ ಲೋಕಸಭಾ ಕ್ಷೇತ್ರದ ಹಿರಿಯ ನಾಗರಿಕ ಮತದಾರರಾದ ಶಿವಲಿಂಗಂ ಅನಾರೋಗ್ಯದಿಂದ ಹಾಸಿಗೆ ಹಾಸಿಗೆ ಹಿಡಿದಿದ್ದಾರೆ. ಆದರೂ ತಮ್ಮ ಹಕ್ಕನ್ನು ಚಲಾಯಿಸಬೇಕೆಂಬ ಮಹದಾಸೆ ಹೊಂದಿದ್ದರು.

ಆನಂದ ಭಾಷ್ಪ

ಈ ಬಾರಿಯ ವೋಟ್ ಫ್ರಮ್ ಹೋಮ್ ಸೌಲಭ್ಯ ಶಿವಲಿಂಗಂ ಅವರ ಕುಟುಂಬದವರ ಗಮನಕ್ಕೆ ಬಂದಿತ್ತು. ಕೂಡಲೇ ಕುಟುಂಬಸ್ಥರು ಸ್ಥಳೀಯ ಬೂತ್ ಅಧಿಕಾರಿಯ ಸಹಾಯದಿಂದ ವೋಟ್ ಫ್ರಮ್ ಹೋಮ್‌ಗೆ ಅರ್ಜಿ ಸಲ್ಲಿಸಿದ್ದರು. ಇವರ ಮನವಿಯನ್ನು ಪುರಸ್ಕರಿಸಿದ ಚುನಾವಣಾ ಆಯೋಗ ಸಿಬ್ಬಂದಿಯನ್ನು ನೇಮಿಸಿತ್ತು. ಮತ ಚಲಾಯಿಸುವಾಗ ಶಿವಲಿಂಗಂ ಅವರಿಗೆ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ರೋಚಕ ಪ್ರಯಾಣ

ಚುನಾವಣಾ ಸಿಬ್ಬಂದಿ ಶಿವಲಿಂಗಂ ಅವರ ಮನೆಗೆ ತಲುಪಿದ್ದೇ ಒಂದು ಸಾಹಸಗಾಥೆ. ಮೂವರು ಮಹಿಳೆಯರು ಸೇರಿದಂತೆ 9 ಜನರಿದ್ದ ಚುನಾವಣಾ ಸಿಬ್ಬಂದಿಯ ತಂಡ ಬುಧವಾರ ಶಿವಲಿಂಗಂ ಮನೆಗೆ ಹೊರಟಿತ್ತು. ಇದಕ್ಕಾಗಿ ಸಿಬ್ಬಂದಿ ಬೆಳಿಗ್ಗೆ ಸುಮಾರು 6 ಗಂಟೆಗೆ ಮುನ್ನಾರ್‌ನಿಂದ ಹೊರಟು ಅಲ್ಲಿಂದ ವಾಹನದಲ್ಲಿ ಪಯಣಿಸಿ ಇರ್ವಿಕುಲಂ ರಾಷ್ಟ್ರೀಯ ಉದ್ಯಾನವನದ ನಡುವೆ ಸಾಗಿ ಇಡಮಲಕ್ಕುಡಿಯ ಪ್ರವೇಶ ದ್ವಾರವಾದ ಪೆಟ್ಟಿಮುಡಿಯಲ್ಲಿರುವ ಕೆಪ್ಪಕಾಡು ಪ್ರದೇಶವನ್ನು ತಲುಪಿದರು.

ಅಲ್ಲಿಂದ ಮತ್ತೆ ನಿಜವಾದ ಸವಾಲು ಆರಂಭವಾಗಿತ್ತು. ಕಡಿದಾದ ನಿರ್ಜನ ರಸ್ತೆಯ ಮೂಲಕ ಅವರು ಮತ್ತೆ 18 ಕಿ. ಮೀ. ಪ್ರಯಾಣ ಬೆಳೆಸಿದರು. ದಟ್ಟ ಅರಣ್ಯದಲ್ಲಿ ಕಾಲ್ನಡಿಗೆ ಮೂಲಕ ಸಾಗಿದ ಅವರು ಶಿವಲಿಂಗಂ ಅವರ ಮನೆಗೆ ತಲುಪುವಾಗ ಗಂಟೆ ಮಧ್ಯಾಹ್ನ 1.15 ಆಗಿತ್ತು.

ಇದನ್ನೂ ಓದಿ: Lok Sabha Election 2024: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ; ಕಾರಣ ಇದು

ʼʼಅಲ್ಲಿಗೆ ತಲುಪಿದಾಗ ಮೊದಲಿಗೆ ಶಿವಲಿಂಗಂ ಅವರನ್ನು ಗುರುತಿಸುವುದು ಕಷ್ಟವಾಗಿತ್ತು. ಯಾಕೆಂದರೆ ಅಲ್ಲಿ ಸುಮಾರು 10 ಮನೆಗಳಿದ್ದವು. ಕೊನೆಗೂ ಶಿವಲಿಂಗಂ ಅವರನ್ನು ಗುರುತಿಸಿದೆವು. ಗುಡಿಸಲಿನಲ್ಲಿ ವಾಸವಾಗಿರುವ ಅವರು ಮಾತನಾಡಲು ಮತ್ತು ಎದ್ದು ನಿಲ್ಲಲೂ ಕಷ್ಟ ಪಡುತ್ತಿದ್ದಾರೆ. ಆದರೂ ಈ ಇಳಿ ವಯಸ್ಸಿನಲ್ಲಿಯೂ ತಮ್ಮ ಕರ್ತವ್ಯವನ್ನು ಮರೆಯದ ಅವರನ್ನು ನೋಡಿ ಹೆಮ್ಮೆ ಎನಿಸಿತು. ಕೊನೆಗೆ ಅವರ ಮನೆಯಲ್ಲೇ ವೋಟಿಂಗ್ ಬೂತ್ ಸಿದ್ಧಪಡಿಸಿ ಅವರ ಗೌಪ್ಯ ಮತದಾನಕ್ಕೆ ಅವಕಾಶ ಮಾಡಿಕೊಟ್ಟೆವುʼʼ ಎಂದು ಸಿಬ್ಬಂದಿಯೊಬ್ಬರು ವಿವರಿಸಿದಾರೆ.

Exit mobile version