Site icon Vistara News

Lok Sabha Election 2024: ಅನಂತನಾಗ್-ರಾಜೌರಿ ಕ್ಷೇತ್ರದಲ್ಲಿ ಮೆಹಬೂಬಾ-ಗುಲಾಂ ನಬಿ ಆಜಾದ್ ಮುಖಾಮುಖಿ!

Jammu-Kashmir Election

ಶ್ರೀನಗರ: ಬಹು ನಿರೀಕ್ಷಿತ ಲೋಕಸಭೆ ಚುನಾವಣೆ (Lok Sabha Election 2024)ಯ ಕಾವು ದಿನ ಕಳೆದಂತೆ ಹೆಚ್ಚಾಗತೊಡಗಿದೆ. ಈ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ (Jammu Kashmir) ಪಿಡಿಪಿಯು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿರುವ ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti) ಅವರು ಅನಂತ್‌ನಾಗ್‌-ರಾಜೌರಿ (Anantnag-Rajouri) ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರನ್ನು ಎದುರಿಸಲಿದ್ದಾರೆ. ಹೀಗಾಗಿ ಈ ಕ್ಷೇತ್ರ ಈಗ ದೇಶದ ಗಮನ ಸೆಳೆದಿದೆ.

ಜತೆಗೆ ಪಿಡಿಪಿಯು ಇತರ ಕ್ಷೇತ್ರಗಳ ತನ್ನ ಅಭ್ಯರ್ಥಿಗಳ ಹೆಸರನ್ನೂ ಘೋಷಿಸಿದೆ. ಶ್ರೀನಗರದಿಂದ ವಹೀದ್ ಪಾರಾ ಮತ್ತು ಬಾರಾಮುಲ್ಲಾ ಕ್ಷೇತ್ರದಿಂದ ಫಯಾಜ್ ಮಿರ್ ಅವರು ಪಿಡಿಪಿಯಿಂದ ಕಣಕ್ಕಿಳಿಯಲಿದ್ದಾರೆ. ಅದಾಗ್ಯೂ ಜಮ್ಮುವಿನ ಎರಡು ಕೇತ್ರಗಳಾದ ಉಧಂಪುರ ಮತ್ತು ಜಮ್ಮುವಿನಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುವುದಾಗಿ ಪಿಡಿಪಿ ಹೇಳಿದೆ.

ಕಾಶ್ಮೀರ ಕಣಿವೆಯ ಮೂರು ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಪಿಡಿಪಿ ಹೇಳಿದ ಕೆಲವು ದಿನಗಳ ನಂತರ ಘೋಷಣೆ ಹೊರಬಿದ್ದಿದೆ. ಕೆಲವು ದಿನಗಳ ಹಿಂದೆ ಈ ಬಗ್ಗೆ ಮತನಾಡಿದ್ದ ಮೆಹಬೂಬಾ ಮುಫ್ತಿ, “ಜಮ್ಮು-ಕಾಶ್ಮೀರದ ಮೂರಕ್ಕೆ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಪಿಡಿಪಿ ಸ್ಪರ್ಧಿಸಲಿದೆ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಉಮರ್‌ ಅಬ್ದುಲ್ಲಾ ಅವರು ಸಹಕಾರ ನೀಡುತ್ತಿಲ್ಲ. ಇಂಡಿಯಾ ಒಕ್ಕೂಟದ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷವು ನಾವು ಸ್ವತಂತ್ರವಾಗಿ ಸ್ಪರ್ಧಿಸುವ ಹೊರತು ಬೇರೆ ಆಯ್ಕೆಯನ್ನೇ ನೀಡಿಲ್ಲʼʼ ಎಂದು ಹೇಳಿದ್ದರು.

ಈ ಮಧ್ಯೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ತಿರುಗೇಟು ನೀಡಿ, ʼʼ2020ರಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (DDC) ಚುನಾವಣೆಗೆ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (PAGD) ಘಟಕಗಳ ನಡುವೆ ಮಾಡಿಕೊಂಡ ಒಪ್ಪಂದದಿಂದ ಪಿಡಿಪಿ ಹಿಂದೆ ಸರಿಯುತ್ತಿದೆʼʼ ಎಂದು ಆರೋಪಿಸಿದ್ದರು.

ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಮುಖ್ಯಸ್ಥ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ. ʼʼರಾಜ್ಯ ಸ್ಥಾನ ಮಾನ ಇಲ್ಲದಿರುವುದೇ ನಾವು ಎದುರಿಸುತ್ತಿರುವ ಮುಖ್ಯ ಸಮಸ್ಯೆ. ಆರ್ಟಿಕಲ್‌ 370ಯನ್ನು ಹಿಂಪಡೆದ ತೀರ್ಮಾನದ ವಿರುದ್ಧ ರಾಜ್ಯಸಭೆಯಲ್ಲಿ ಹೋರಾಡಿದ್ದೇನೆ. ಇನ್ನು ಮುಂದೆ ರಾಜ್ಯ ಸ್ಥಾನಮಾನಕ್ಕಾಗಿ ಲೋಕಸಭೆಯಲ್ಲಿ ಹೋರಾಡಲಿದ್ದೇನೆ. ಇದು ಲೋಕಸಭೆಯಲ್ಲಿ ನನ್ನ ಮೊದಲ ಸ್ಪರ್ಧೆʼʼ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Vijender Singh: ಕಾಂಗ್ರೆಸ್​ಗೆ ಪಂಚ್​ ನೀಡಿ ಬಿಜೆಪಿ ಸೇರಿದ ಬಾಕ್ಸರ್‌ ವಿಜೇಂದರ್ ಸಿಂಗ್

ಅನಂತ್‌ನಾಗ್‌-ರಾಜೌರಿಯಲ್ಲಿ ಮೂರನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ಆಯೋಜಿಸಲಾಗಿದ್ದು, ಫಲಿತಾಂಶ ಜೂನ್‌ 4ರಂದು ಪ್ರಕಟವಾಗಲಿದೆ. ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ʼಇಂಡಿಯಾʼ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್‌ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಜತೆಗೆ ನಿತೀಶ್‌ ಕುಮಾರ್‌ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version