Site icon Vistara News

Lok Sabha Election 2024: ಬಿಜೆಪಿ ಸೇರಿದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ

Lok Sabha Election 2024 Former MLA Akhanda Srinivasamurthy joins BJP

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಅಲ್ಲದೆ, ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಗೆಲುವಿನ ಹಾದಿಯನ್ನು ಮತ್ತಷ್ಟು ಸುಗಮ ಮಾಡಿಕೊಳ್ಳಲು ಆಯಾ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಇದರ ಭಾಗವಾಗಿ ಈಗ ಹಿಂದುಳಿದ ವರ್ಗಗಳ ನಾಯಕ, ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ (Akhanda Srinivasamurthy) ಅವರು ಬಿಜೆಪಿಗೆ (BJP Karnataka) ಸೇರ್ಪಡೆಯಾಗಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ನಿವಾಸದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿ ಸೇರ್ಪಡೆ ಆದರು. ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಬಿಜೆಪಿ ಧ್ವಜ ನೀಡಿದ ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷಕ್ಕೆ ಬರಮಾಡಿಕೊಂಡರು.

ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರು ನಮ್ಮ ಪಕ್ಷವನ್ನು ಸೇರಿರುವುದು ದೊಡ್ಡ ಶಕ್ತಿ ಕೊಟ್ಟಂತಾಗಿದೆ. ಶೋಭಾ ಕರಂದ್ಲಾಜೆಯವರು 2.5 ಲಕ್ಷದಿಂದ 3 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ವಿಶ್ವಾಸ ವ್ಯಕ್ತಪಡಿಸಿದರು.

ಡಿಜೆ ಹಳ್ಳಿ- ಕೆಜಿ ಹಳ್ಳಿ ಹಿಂದು ಮುಸ್ಲಿಂ ಗಲಾಟೆ ಆದಾಗ ಅಖಂಡ ಶ್ರೀನಿವಾಸಮೂರ್ತಿಯವರ ಮನೆಯನ್ನು ಸುಡಲಾಗಿತ್ತು. ಆಗ ಕಾಂಗ್ರೆಸ್‍ನವರು ಬೆಂಬಲ ಕೊಡಲಿಲ್ಲ. ನಾವು ಆಗ ಶ್ರೀನಿವಾಸಮೂರ್ತಿ ಅವರ ಜತೆ ಗಟ್ಟಿಯಾಗಿ ನಿಂತಿದ್ದೆವು. ಬೆಂಬಲಿಗರ ಜತೆ ಅಖಂಡ ಶ್ರೀನಿವಾಸಮೂರ್ತಿಯವರ ಪಕ್ಷ ಸೇರುವಿಕೆಯಿಂದ ಆನೆ ಬಲ ಬಂದಂತಾಗಿದೆ. ಅವರಿಗೆ ನಿಮ್ಮೆಲ್ಲರ ಪರವಾಗಿ ಸ್ವಾಗತ ಕೋರುತ್ತೇನೆ. ಅವರನ್ನು ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಬಿ.ಎಸ್.‌ ಯಡಿಯೂರಪ್ಪ ಹೇಳಿದರು.

ಎಲ್ಲವನ್ನೂ ಎದುರಿಸಿ ಪಕ್ಷ ಕಟ್ಟೋಣ: ಶೋಭಾ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಒಬ್ಬೊಂಟಿಯಾಗಿ ಕ್ಷೇತ್ರದಲ್ಲಿ ಹೋರಾಟ ಮಾಡುವುದು ಕಷ್ಟ. ನಮ್ಮ ಪಕ್ಷಕ್ಕೆ ಬಂದರೆ ಸದ್ಯಕ್ಕೆ ಅವರಿಗೆ ಯಾವುದೇ ಲಾಭ ಇಲ್ಲ ಎಂಬುದು ಗೊತ್ತಿದ್ದರೂ ಅಖಂಡ ಶ್ರೀನಿವಾಸಮೂರ್ತಿ ಅವರು ನಮ್ಮ ಪಕ್ಷವನ್ನು ಸೇರಿದ್ದಾರೆ. ಅವರು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಿದ್ದಾರೆ. ಗೋವಿಂದರಾಜು ಅವರು ಕಾರ್ಪೊರೇಟರ್ ಆಗಿದ್ದವರು, ಗೌರಮ್ಮ ಕೂಡ ಮಾಜಿ ಕಾರ್ಪೊರೇಟರ್ ಆಗಿದ್ದಾರೆ. ಎಲ್ಲರೂ ಪಕ್ಷವನ್ನು ಕಟ್ಟಬೇಕು ಅಂತ ಬಂದಿದ್ದಾರೆ. ಎಲ್ಲವನ್ನೂ ಎದುರಿಸಿ ಪಕ್ಷ ಕಟ್ಟೋಣ. ಯಾವುದೇ ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆ ನಡೆದರೂ ಒಗ್ಗಟ್ಟಾಗಿ ಎದುರಿಸೋಣ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು: ಅಖಂಡ

ಅಖಂಡ ಶ್ರೀನಿವಾಸ್ ಮೂರ್ತಿ ಮಾತನಾಡಿ, ಶ್ರೀರಾಮ ನವಮಿಯಂದು ಪಕ್ಷ‌ ಸೇರ್ಪಡೆಯಾಗಲು ಅವಕಾಶ ನೀಡಿದ್ದಾರೆ. ನಾನು ಬಿಜೆಪಿ ಸೇರಲು ಕಾರಣ ಶ್ರೀರಾಮನ ಆಶೀರ್ವಾದವಾಗಿದೆ. ಬಿ.ಎಸ್. ಯಡಿಯೂರಪ್ಪ,‌ ಶೋಭಾ ಕರಂದ್ಲಾಜೆ ಅವರ ಬೆಂಬಲ ನನಗೆ ಇದೆ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. 2018ರಲ್ಲಿ ಅತಿ ಹೆಚ್ಚು ಮತ ಪಡೆದು ಗೆದ್ದವನು ನಾನು. ನನಗೆ ಟಿಕೆಟ್ ತಪ್ಪಿಸಿದ್ದು ಕಾಂಗ್ರೆಸ್. ನನ್ನದಲ್ಲದ ತಪ್ಪಿಗೆ ನನ್ನ ಮನೆಯನ್ನು ಸುಟ್ಟುಹಾಕಿದರು. ನಮ್ಮ ಕ್ಷೇತ್ರದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಒಗ್ಗಟ್ಟಾಗಿದ್ದೇವೆ. ಮುಸ್ಲಿಂ ಬಾಂಧವರಿಗೆ ಮನವಿ ಮಾಡುತ್ತೇನೆ. ಅಮಾಯಕರು ಜೈಲಲ್ಲಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಅದಕ್ಕೆ ನಾನು ಕಾರಣ ಅಲ್ಲ. ನಿಜವಾಗಿ ಬೆಂಕಿ ಹಚ್ಚಿದವರು ಹೊರಗೆ ಓಡಾಡಿಕೊಂಡು, ಪಕ್ಷದಲ್ಲಿ ಪದವಿ ಪಡೆದುಕೊಂಡಿದ್ದಾರೆ. ನನಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ತಪ್ಪಿಸಿದ್ದು ಒಳ್ಳೆಯದಾಯ್ತು. ಇದರಿಂದ ನಾನು ಬಿಜೆಪಿಗೆ ಬರುವಂತಾಗಿದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಕೊಡಿಸೋಣ. ನಾವೆಲ್ಲರೂ ಒಗ್ಗಟ್ಟಾಗಿ ಶೋಭಾ ಗೆಲುವಿಗೆ ಕಾರಣರಾಗೋಣ ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಹರೀಶ್ ಮಾತನಾಡಿ, ಧರ್ಮ- ಅಧರ್ಮದ ನಡುವೆ ಯುದ್ಧ ನಡೆಯುತ್ತಿದೆ. ಅಖಂಡ ಶ್ರೀನಿವಾಸಮೂರ್ತಿ ಅವರು ಧರ್ಮದ ಪರವಾಗಿ ಬಿಜೆಪಿ ಸೇರಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್‍ ಕುಮಾರ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಮಂಜುಳಾ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಗೋವಿಂದರಾಜ್, ಪುಲಕೇಶಿ ನಗರದ ಮಂಡಲ ಅಧ್ಯಕ್ಷ ರವಿ, ಮುಖಂಡರಾದ ಮುರಳಿ, ಸೂರ್ಯಕಾಂತ ರಾವ್, ಜೆಡಿಎಸ್ ಪ್ರಮುಖರು ಭಾಗವಹಿಸಿದ್ದರು.

Exit mobile version