ಕೋಲಾರ: ಕೋಲಾರದಲ್ಲಿ (Kolar) ಲೋಕಸಭೆ ಚುನಾವಣೆ (Lok Sabha Election 2024) ಸ್ಪರ್ಧೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಕೂತಿರುವ ಹಿನ್ನೆಲೆಯಲ್ಲಿ, ಉಭಯ ಬಣಗಳ ತಿಕ್ಕಾಟದಿಂದ ಬೇಸತ್ತಿರುವ ಹೈಕಮಾಂಡ್ ಅಚ್ಚರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಟಿಕೆಟ್ ಆಯ್ಕೆ ಕಗ್ಗಂಟು ಇಂದು ಬಗೆಹರಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕಠಿಣ ನಿರ್ಧಾರ ಮಾಡಿದ್ದು, ಕೆ.ವಿ ಗೌತಮ್ ಎಂಬುವವರನ್ನು ಆಯ್ಕೆ ಮಾಡಿದೆ. ಕೆ.ವಿ ಗೌತಮ್ ಸದ್ಯ ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದಾರೆ. ಈ ಆಯ್ಕೆ ಮೂಲಕ ರಮೇಶ್ ಕುಮಾರ್ ಹಾಗೂ ಕೆ.ಎಚ್. ಮುನಿಯಪ್ಪ ಬಣಕ್ಕೆ ತೀವ್ರ ಮುಖಭಂಗವಾಗಿದೆ.
ಕೋಲಾರದಲ್ಲಿ ಪ್ರಾತಿನಿಧ್ಯಕ್ಕಾಗಿ ರಮೇಶ್ ಕುಮಾರ್ (Ramesh Kumar) ಬಣ ಹಾಗೂ ಸಚಿವ ಕೆ.ಎಚ್ ಮುನಿಯಪ್ಪ (KH Muniyappa) ಟೀಮ್ ನಡುವೆ ಜಿದ್ದಾಜಿದ್ದಿ ಇತ್ತು. ಟಿಕೆಟ್ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಕೊಡಬೇಕು ಎಂದು ಕೆ.ಎಚ್. ಮುನಿಯಪ್ಪ ಪಟ್ಟು ಹಿಡಿದಿದ್ದರು. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಬೇಡ ಎಂದು ರಮೇಶ್ ಕುಮಾರ್, ಎಂಸಿ ಸುಧಾಕರ್ ಟೀಮ್ ಪಟ್ಟು ಬಿಗಿಮಾಡಿತ್ತು. ಸಿ.ಎಂ ಮುನಿಯಪ್ಪ ಅವರನ್ನು ಅಭ್ಯರ್ಥಿ ಮಾಡಿ ಎಂದು ರಮೇಶ್ ಕುಮಾರ್ ಬಣ ಹೇಳುತ್ತಿತ್ತು ಉಭಯ ಬಣಗಳ ಬಡಿದಾಟಕ್ಕೆ ಬ್ರೇಕ್ ಹಾಕಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕೆ.ಎಚ್. ಮುನಿಯಪ್ಪ ಅವರಿಂದ ಲಾಬಿ
ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಕೆ.ಎಚ್. ಮುನಿಯಪ್ಪ ಅವರು ಇನ್ನಿಲ್ಲದ ಲಾಬಿ ಮಾಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಮಾತನಾಡಿದ್ದರು. ಒತ್ತಡಕ್ಕೆ ಮಣಿದು ಟಿಕೆಟ್ ತಪ್ಪಿಸಿದರೆ ತಪ್ಪು ಸಂದೇಶ ಹೋಗುತ್ತದೆ ಎಂದು ಹೇಳಿದ್ದರು. ಅಲ್ಲದೆ, ಈ ಎಲ್ಲ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದ್ದರೂ ಅವರು ಮನಸ್ಸು ಮಾಡುತ್ತಿಲ್ಲ ಎಂದು ಶುಕ್ರವಾರವಷ್ಟೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಇದನ್ನೂ ಓದಿ: Lok Sabha Election 2024: ಜಯಪ್ರಕಾಶ್ ಹೆಗ್ಡೆ ವಿರುದ್ಧ ಮತ್ತೊಂದು ನೀತಿ ಸಂಹಿತಿ ಉಲ್ಲಂಘನೆ ದೂರು
ಪ್ರಚಾರ ಪ್ರಜಾಧ್ವನಿ ಯಾತ್ರೆ ಮುಂದೂಡಿಕೆ
ಕೋಲಾರ ಸಮಸ್ಯೆ ಬಗೆಹರಿಯದೇ ಇದ್ದಿದ್ದರಿಂದ ಕೋಲಾರದ ಕುರುಡುಮಲೆಯಿಂದಲೇ ಕಾಂಗ್ರೆಸ್ ಆರಂಭಿಸಬೇಕಿದ್ದ ಪ್ರಜಾಧ್ವನಿ ಯಾತ್ರೆ ಪ್ರಚಾರ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಿತ್ತು. ಶತಾಯಗತಾಯ ತಮ್ಮ ಅಳಿಯನಿಗೇ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಕೆ.ಎಚ್. ಮುನಿಯಪ್ಪ ಅವರು ಇದ್ದರು. ಬೇರೆ ಅಭ್ಯರ್ಥಿಯನ್ನು ಇಲ್ಲಿ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದೂ ಹೇಳಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಈಗ ಕಾಂಗ್ರೆಸ್ ಹೈಕಮಾಂಡ್ ಕೆ.ವಿ. ಗೌತಮ್ ಅವರನ್ನು ಆಯ್ಕೆ ಮಾಡಿದೆ.
ಚಿಕ್ಕಪೆದ್ದಣ್ಣಗೂ ಟಿಕೆಟ್ ಇಲ್ಲ, ಸಿ.ಎಂ. ಮುನಿಯಪ್ಪಗೂ ಮಿಸ್!
ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಕೋಲಾರ ಕಾಂಗ್ರೆಸ್ ಕಿತ್ತಾಟದಿಂದ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೂ ಟಿಕೆಟ್ ಇಲ್ಲದಂತಾಗಿದೆ. ಇತ್ತ ರಮೇಶ್ ಕುಮಾರ್ ಬಣದ ಸಿ.ಎಂ. ಮುನಿಯಪ್ಪ ಅವರಿಗೂ ಟಿಕೆಟ್ ಇಲ್ಲದಂತಾಗಿದೆ.
ಯಾರು ಈ ಕೆ.ವಿ ಗೌತಮ್?
- ದಲಿತ ಎಡ ಸಮುದಾಯಕ್ಕೆ ಸೇರಿದ ನಾಯಕ
- ಗೌತಮ್ ತಂದೆ ಬೆಂಗಳೂರು ಮೇಯರ್ ಆಗಿದ್ದವರು
- ಕೋಲಾರಕ್ಕೆ ನೇರವಾಗಿ ನಂಟು ಇಲ್ಲದಿದ್ದರೂ ಸಹೋದರಿಯರನ್ನು ಈ ಭಾಗದ ವರನಿಗೆ ಮದುವೆ ಮಾಡಿ ಕೊಡಲಾಗಿದೆ.
- ಹೀಗಾಗಿ ಕೋಲಾರದ ಜತೆ ಬಾಂಧವ್ಯ ಇದೆ
- ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ