Site icon Vistara News

Lok Sabha Election 2024: ಪಕ್ಷೇತರ ಸ್ಪರ್ಧೆ ಎಂದ ಜಿ.ಬಿ. ವಿನಯ್ ಕುಮಾರ್; ದಾವಣಗೆರೆ ಕಾಂಗ್ರೆಸ್‌ಗೆ ಬಂಡಾಯ ಬಿಸಿ

Lok Sabha Election 2024 GB Vinay Kumar rebels from Congress and contest as Independent

ದಾವಣಗೆರೆ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಬಂಡಾಯದ ತಲೆಬಿಸಿ ಇನ್ನೂ ತಪ್ಪಿಲ್ಲ. ಕೆಲವು ಟಿಕೆಟ್‌ ವಂಚಿತರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಲೇ ಬಂದಿದ್ದಾರೆ. ಈಗ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ (Davangere Lok Sabha constituency) ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಜಿ.ಬಿ. ವಿನಯ್ ಕುಮಾರ್ (GB Vinay Kumar) ಘೋಷಿಸಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್‌ ಪಾಲಿಗೆ ದೊಡ್ಡ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿರುವ ಜಿ.ಬಿ. ವಿನಯ್ ಕುಮಾರ್, ತಮ್ಮ ಮನೆಯಲ್ಲಿ ನಡೆದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯ ಬಳಿಕ ಈ ನಿರ್ಣಯವನ್ನು ಪ್ರಕಟಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ವಿನಯ್‌ ಕುಮಾರ್‌, ನಿನ್ನೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ. ಆ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಫೋಟೋ ನೋಡಿ ನನ್ನ ಬೆಂಬಲಿಗರು ಜನರು ವಿನಯ್ ಕುಮಾರ್ ಕಾಂಪ್ರಮೈಸ್ ಆದರಾ ಎಂದು ಆತಂಕಕ್ಕೆ ಒಳಗಾಗಿದ್ದರು. ಆದರೆ, ಅಂಥವನು ನಾನಲ್ಲ ಎಂದು ಇಂದು ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಕಳಕಳಿ ಇರುವ ವ್ಯಕ್ತಿ. ಎಲ್ಲಿ ಈ ಹುಡುಗ ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲ ಆಗುತ್ತಾನೆ ಅನ್ನೋ ಕಳಕಳಿಯಿಂದ ಹೇಳಿದ್ದರು ಎಂಬುದಾಗಿ ಸಿಎಂ ಭೇಟಿ ಬಗ್ಗೆ ವಿನಯ್‌ ಕುಮಾರ್‌ ಸ್ಪಷ್ಟನೆ ನೀಡಿದರು.

ನಾನು ಸೋಲುವುದಕ್ಕೂ ಸಿದ್ಧ

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಿಚಾರವಾಗಿ ನಾನು ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬಳಿ ಕೇಳಿಕೊಂಡಿದ್ದೆ. ಈಗಲೂ ಕಾಲ ಮಿಂಚಿಲ್ಲ ದೊಡ್ಡ ಮನಸ್ಸು ಮಾಡಿ ಟಿಕೆಟ್ ನೀಡಿ ಎಂದು ಕೋರಿದ್ದೆ. ಆಗಲ್ಲ ಎಂದು ಅವರು ಹೇಳಿಲ್ಲ. ಯೋಚಿಸುತ್ತೇನೆ ಎಂದಿದ್ದಾರೆ. ರಾಜಕೀಯ ಹಿನ್ನೆಲೆ ಇಲ್ಲದೆ ಇರುವ ನನ್ನನ್ನು ಸಾಮಾನ್ಯ ಜನರು ಇಷ್ಟ ಪಟ್ಟಿದ್ದಾರೆ. ನೀವು ಗಟ್ಟಿಯಾಗಿ ನಿಲ್ಲಿ, ನಿಮ್ಮ ಜತೆ ನಾವು ಇರುತ್ತೇವೆ ಎಂದು ವಿಶ್ವಾಸ ಇಟ್ಟುಕೊಂಡಿದ್ದಾರೆ. ನಾನು ಸೋಲುವುದಕ್ಕೂ ಸಿದ್ಧ. ಆದರೆ, ಗೆಲ್ಲಲು ಚುನಾವಣೆಗೆ ಬಂದಿದ್ದೇನೆ ಎಂದು ವಿನಯ್‌ ಕುಮಾರ್‌ ಹೇಳಿದರು.

ವಾಸ್ತವದ ಹೋರಾಟ ಇದು

ಇಲ್ಲಿ ಯಾವುದೇ ಕುಟುಂಬ ಜನಾಂಗದ ವಿರುದ್ಧ ಹೋರಾಡುತ್ತಿಲ್ಲ. ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಹೊಸ ನಾಯಕತ್ವ ಹಿನ್ನೆಲೆಯಲ್ಲಿ ಆದರ್ಶದ ಹೋರಾಟ ನನ್ನದು. ವಾಸ್ತವದ ಹೋರಾಟ ಇದಾಗಿದ್ದು, ಜನರ ಅಭಿಲಾಷೆ ಮೇರೆಗೆ ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದೇನೆ. ಇಲ್ಲಿ ಗೆಲ್ಲುವ ಮೂಲಕ ಹೊಸ ಅಧ್ಯಾಯ ಬರೆಯೋಣ ಎಂದು ವಿನಯ್ ಕುಮಾರ್ ಹೇಳಿದರು.

ಇದನ್ನೂ ಓದಿ: Lok Sabha Election 2024: ಹಾಸನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಜೈ ಎಂದ ಪ್ರೀತಂ ಗೌಡ ಅತ್ಯಾಪ್ತರು; ಪ್ರಜ್ವಲ್‌ ರೇವಣ್ಣಗೆ ಶಾಕ್!

ಇದು ದುಡುಕಿನ ನಿರ್ಧಾರ ಅಲ್ಲ

ಎರಡು ಪ್ರಬಲ ಕುಟುಂಬಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದರಿಂದ ಜನರು ಬೇಸತ್ತು ಹೋಗಿದ್ದಾರೆ. ಎರಡು ಕುಟುಂಬಗಳ ವಿರುದ್ಧ ಲಕ್ಷಕ್ಕೂ ಅಧಿಕ ಮತ ಪಡೆದು ಗೆಲ್ಲುತ್ತೇನೆ. ನಿನ್ನೆ ನಡೆದ ಸಭೆಯಲ್ಲಿ ನನಗೆ ಸಿಎಂ ಸಿದ್ದರಾಮಯ್ಯ ಅವರು ಹೂಮಾಲೆ ಹಾಕಿದ್ದಾರೆ. ಅದು ವಿಜಯದ ಮಾಲೆ ಅಂದುಕೊಳ್ಳುವೆ. ನಿಮ್ಮ ಮೇಲೆ ಪ್ರೀತಿ ಗೌರವ ಉಳ್ಳವನು ನಾನು. ಇದು ದುಡುಕಿನ ನಿರ್ಧಾರ ಅಲ್ಲ. ಜನರ ನಿರ್ಧಾರವಾಗಿದೆ ಎಂದು ವಿನಯ್‌ ಕುಮಾರ್‌ ಹೇಳಿದರು.

ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಖಚಿತ

ಇದು ಪೊಲಿಟಿಕಲ್ ಸೂಸೈಡ್ ಎನ್ನಿಸಬಹುದು. ಇದು ದಾವಣಗೆರೆಯಲ್ಲಿ ಕುಳಿತು ತೆಗೆದುಕೊಂಡ ನಿರ್ಧಾರ ಅಲ್ಲ. ಕ್ಷೇತ್ರದ ಗಡಿ ಭಾಗದ ಜನರ ನಿರ್ಧಾರಕ್ಕೆ ಬದ್ಧವಾಗಿ ನಿಲ್ಲಲು ಮಾಡಿದ ನಿರ್ಧಾರವಾಗಿದೆ. ನನ್ನ ಒಲವು ಎಲೆಕ್ಷನ್‌ನಲ್ಲಿ ಸ್ಪರ್ಧೆ ಮಾಡಬೇಕು ಎಂಬುದಾಗಿದೆ. ನನಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳಿಬ್ಬರೂ ಎದುರಾಳಿಗಳೇ ಆಗಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಹೀಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಖಚಿತ ಎಂದು ಜಿ.ಬಿ. ವಿನಯ್ ಕುಮಾರ್ ಸ್ಪಷ್ಟಪಡಿಸಿದರು.

Exit mobile version