Site icon Vistara News

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Lok Sabha Election 2024 Gokarna priest shalls to make DK Shivakumar CM Whats wrong says Shivakumar

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಟೆಂಪಲ್‌ ರನ್‌ ಮಾಡುತ್ತಿದ್ದಾರೆ. ಮಂಗಳವಾರ (ಮಾ. 26) ಧರ್ಮಸ್ಥಳ, ಶೃಂಗೇರಿ ಸೇರಿದಂತೆ ಹಲವು ಕಡೆ ಭೇಟಿ ನೀಡಿದ್ದ ಡಿಕೆಶಿ, ಇಂದು (ಬುಧವಾರ – ಮಾ. 27) ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಭೇಟಿ ನೀಡಿ ಮಹಾಬಲೇಶ್ವರ ಸನ್ನಿದಿಯಲ್ಲಿ (Gokarna Mahabaleshwara Temple) ಆತ್ಮಲಿಂಗ ಪೂಜೆ (Atmalinga Pooja) ಸಲ್ಲಿಸಿದ್ದಾರೆ. ಈ ವೇಳೆ ಡಿ.ಕೆ‌‌. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಅರ್ಚಕರು ಸಂಕಲ್ಪ ಮಾಡಿದ್ದಾರೆ.

ಗೋಕರ್ಣದಲ್ಲಿ ಆತ್ಮಲಿಂಗ ಪೂಜೆ ಸಲ್ಲಿಸುವ ವೇಳೆ ಮಹಾಬಲೇಶ್ವರ ದೇವಸ್ಥಾನದ ಅರ್ಚಕರು ಈ ಸಂಕಲ್ಪವನ್ನು ಮಾಡಿದ್ದು, ಡಿಕೆಶಿಯಿಂದ ವಿಧಿ ವಿಧಾನದಂತೆ ಶಿವನ ಪೂಜೆ ಮಾಡಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಡಿ‌.ಕೆ‌. ಶಿವಕುಮಾರ್ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ.

ಡಿ.ಕೆ ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗಲಿ ಎಂದು ದೇವರ ಮುಂದೆ ಅರ್ಚಕರು ಸಂಕಲ್ಪ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ‌.ಕೆ. ಶಿವಕುಮಾರ್, ಅರ್ಚಕರು ಹೇಳುವುದರಲ್ಲಿ ತಪ್ಪೇನಿಲ್ಲ, ಅವರಿಗೂ ಆಸೆಯಿರುತ್ತದೆ. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ನಾಯಕತ್ವದಲ್ಲಿ ನಾವು ಮುಂದೆ ಹೋಗುತ್ತಿದ್ದೇವೆ. ಕೆಲವರು ನನ್ನನ್ನು ಸಿಎಂ ಆಗಲಿ ಎಂದು ಹೇಳುತ್ತಾರೆ. ಅವರ ಬಾಯಲ್ಲಿ ಬರುವುದನ್ನು ತಪ್ಪಿಸಲು ಸಾಧ್ಯವೇ? ಯಾರು ಏನೇ ಆಸೆಪಟ್ಟರೂ ಪಕ್ಷ ಅಂತಿಮವಾಗಿ ತೀರ್ಮಾನಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ ಎಂಬುದಾಗಿ ಪ್ರಾರ್ಥಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ, ರಾಮನ ಗಾಳಿ ಇಲ್ಲ

ರಾಜ್ಯದಲ್ಲಿ ಬಿಜೆಪಿ ಗಾಳಿಯೂ ಇಲ್ಲ, ರಾಮನ ಗಾಳಿಯೂ ಇಲ್ಲ, ಹಿಂದುತ್ವನೂ ಇಲ್ಲ, ಯಾರ ಗಾಳಿಯೂ ಇಲ್ಲ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಗ್ಯಾರಂಟಿ ಅನ್ನುವ ಬದಲು ಮೋದಿ ಗ್ಯಾರಂಟಿ ಅನ್ನುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಅನ್ನುವುದನ್ನು ಕಟ್ ಮಾಡಿ ಮೋದಿ ಗ್ಯಾರಂಟಿ ಮಾಡಿಕೊಂಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಕಿಡಿಕಾರಿದರು.

ಗೋಕರ್ಣದ ಮಹಾಗಣಪತಿ ದೇವರ ಮೂರ್ತಿಗೆ ಜಲಾಭಿಷೇಕ ನೆರವೇರಿಸುತ್ತಿರುವ ಡಿ.ಕೆ. ಶಿವಕುಮಾರ್

ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಯಾರಾದರೂ ಪಕ್ಷದ ಸಿದ್ಧಾಂತ ಒಪ್ಪಿ ಕೆಲಸ ಮಾಡುವುದಾದರೆ ಅವರಿಗೆ ಸ್ವಾಗತ. ಯಾರೂ ಅವರಿಗೆ ವಿರೋಧ ಮಾಡುವಂತಿಲ್ಲ. ಪಕ್ಷ ತೀರ್ಮಾನ ಮಾಡಿದ ನಂತರ ಯಾರೂ ಅದಕ್ಕೆ ವಿರೋಧವಾಗಿ ನಡೆದುಕೊಳ್ಳುವಂತಿಲ್ಲ ಎಂದು ಹೇಳಿದರು.

ಮಂಗಳವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್

ಗೋಕರ್ಣ ಮಹಾಬಲೇಶ್ವರಿಗೆ ವಿಶೇಷ ಪೂಜೆ

ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸಿದ ಡಿ.ಕೆ. ಶಿವಕುಮಾರ್‌, ಬಳಿಕ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗ ಸ್ಪರ್ಶಿಸಿ ಪೂಜೆ ಸಲ್ಲಿಸಿದರು. ಮಹಾಬಲೇಶ್ವರನಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕವನ್ನು ಮಾಡಿಸಿದ್ದಾರೆ. ಹತ್ತು ಅರ್ಚಕರಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಮಾಡಿಸಲಾಗಿದೆ. ಡಿಕೆಶಿಗೆ ಸಚಿವ ಮಂಕಾಳ ವೈದ್ಯ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್, ಶಾಸಕ ಸತೀಶ ಸೈಲ್ ಸಾಥ್‌ ನೀಡಿದ್ದಾರೆ.

Exit mobile version