ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಕೆಲವು ಪಕ್ಷಗಳ ಕಾರ್ಯಕರ್ತರು ಇನ್ನೊಂದು ಪಕ್ಷದ ಪ್ರಚಾರ ಸಭೆಗಳಿಗೆ ಹೋಗಿ ಗಲಾಟೆ ಮಾಡುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಈ ನಡುವೆ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರು ಪ್ರಚಾರ ಮಾಡುವ ವೇಳೆ ಸ್ಥಳಕ್ಕೆ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು ನುಗ್ಗಿ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಈಗ ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೆ.ಎನ್. ರಾಜಣ್ಣ ಅವರು ಕುಮ್ಮಕ್ಕು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದು ಗಲಾಟೆ ಮಾಡಿದ್ದಾರೆ. ಇದರಿಂದ ಮಾಜಿ ಪ್ರಧಾನಿಗೆ ನೀಡಬೇಕಿದ್ದ ಭದ್ರತೆಯಲ್ಲಿ ಲೋಪವಾಗಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ರಿಟರ್ನಿಂಗ್ ಆಫೀಸರ್ಗೆ ಜೆಡಿಎಸ್ ಪಕ್ಷದ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ. ರಂಗನಾಥ್ ದೂರು ನೀಡಿದ್ದಾರೆ
ತಕ್ಕ ಶಿಕ್ಷೆಯಾಗಬೇಕು
ಎಚ್.ಡಿ. ದೇವೇಗೌಡರು ನಡೆಸುತ್ತಿದ್ದ ಪ್ರಚಾರ ಸಭೆಗೆ ಏಕಾಏಕಿ ನುಗ್ಗಿ ಗಲಾಟೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ಕೊಡಿಸಬೇಕು. ಅವರ ಮೇಲೆ ಕೂಡಲೇ ಎಫ್‌ಐಆರ್ ದಾಖಲು ಮಾಡಬೇಕು, ಕಾರ್ಯಕ್ರಮ ನಡೆಯುವ ಜಾಗದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರನ್ನು ಕರ್ತವ್ಯ ಲೋಪದಡಿ ಅಮಾನತು ಮಾಡಬೇಕು ಎಂದು ದೂರಿನಲ್ಲಿ ಕೋರಲಾಗಿದೆ.
ಏನಿದು ಗಲಾಟೆ?
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಅವರ ಪರವಾಗಿ ತುಮಕೂರಿನ ಕುಂಚಿಟಿಗರ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಆಗ ಒಂದಿಷ್ಟು ಮಂದಿ ಮಹಿಳೆಯರು ದೇವೇಗೌಡರ ಬಳಿ ಬಂದಿದ್ದು, ತಾವು ಬಿಜೆಪಿ ಕಾರ್ಯಕರ್ತೆಯರಾಗಿದ್ದು ಫೋಟೊಗೆ ಪೋಸ್ ಕೊಡಿ ಎಂದು ಮನವಿ ಮಾಡಿದ್ದರು. ಜತೆಗೆ ನಿಂತವರು ಏಕಾಏಕಿಯಾಗಿ ಮಹಿಳೆಯರ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಸಾಕಷ್ಟು ಗದ್ದಲವಾಗಿದೆ.
ಹೊರಗೆ ಕಳಿಸಿದ ಬಿಜೆಪಿ
ತಕ್ಷಣ ಮಧ್ಯ ಪ್ರವೇಶ ಮಾಡಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತೆಯರನ್ನು ಹೊರಗೆ ಕಳಿಸಲು ಮುಂದಾದರು. ಜತೆಗೆ ಬಿಜೆಪಿ ಕಾರ್ಯಕರ್ತರೂ ಒಟ್ಟಾಗಿದ್ದು, ಎಲ್ಲರೂ ಸೇರಿ ಆ ಇಬ್ಬರು ಮಹಿಳೆಯರನ್ನು ಸಭಾಂಗಣದಿಂದ ಹೊರಗೆ ಕಳುಹಿಸಿದರು.
ಈ ಬಗ್ಗೆ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ, ಕಾಂಗ್ರೆಸ್‌ನವರು ಸೋಲಿನ ಹತಾಶೆಯಿಂದ ಈ ರೀತಿ ಮಾಡುತ್ತಿದ್ದಾರೆ. ಯಾರೋ ಹೆಣ್ಣು ಮಕ್ಕಳನ್ನು ಕಳುಹಿಸಿ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.