ಶಿವಮೊಗ್ಗ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ (Shivamogga Lok Sabha constituency) ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ (BY Raghavendra) ನಾಮಪತ್ರ ಸಲ್ಲಿಸಿದ್ದಾರೆ. ಅವರು ಚುನಾವಣಾ ಆಯೋಗಕ್ಕೆ (Election Commission) ಆಸ್ತಿ ವಿವರ ಸಲ್ಲಿಸಿದ್ದು, ಒಟ್ಟು 73.71 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಬಿ.ವೈ. ರಾಘವೇಂದ್ರ ಬಳಿ 55.85 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದ್ದರೆ, ಪತ್ನಿ ತೇಜಸ್ವಿನಿ ಹೆಸರಿನಲ್ಲಿ 17.86 ಕೋಟಿ ರೂಪಾಯಿ ಆಸ್ತಿ ಇದೆ. ರಾಘವೇಂದ್ರ ಕೈಯಲ್ಲಿ 33,291 ರೂಪಾಯಿ ನಗದು ಹಣವಿದೆ. ಪತ್ನಿ ಬಳಿ ನಗದು 9,39,109 ರೂ. ಇದೆ.
ಪತಿ – ಪತ್ನಿ ಬಳಿ 21 ಬ್ಯಾಂಕ್ ಖಾತೆಗಳು!
ಬಿ.ವೈ. ರಾಘವೇಂದ್ರ ಅವರು ವಿವಿಧ ಬ್ಯಾಂಕ್‌ಗಳಲ್ಲಿ 13 ಅಕೌಂಟ್ ಹೊಂದಿದ್ದಾರೆ. ಅವುಗಳಲ್ಲಿ 98,01,123 ರೂಪಾಯಿ ಇದೆ. ಪತ್ನಿ ತೇಜಸ್ವಿನಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 8 ಅಕೌಂಟ್‌ಗಳಿವೆ. ಇವುಗಳಲ್ಲಿ 25,65,577 ರೂಪಾಯಿ ಹಣವಿದೆ.
ಮ್ಯೂಚುವಲ್ ಕಂಪನಿಗಳಲ್ಲಿ ಹೂಡಿಕೆ
ಬಿ.ವೈ. ರಾಘವೇಂದ್ರ ಅವರು 15 ಕಂಪನಿಗಳಲ್ಲಿ 7.68 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ತೇಜಸ್ವಿನಿ ಆರು ಕಂಪನಿಗಳಲ್ಲಿ 1.22 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಮ್ಯೂಚುವಲ್ ಫಂಡ್ಸ್, ಬಾಂಡ್‌ಗಳಲ್ಲಿ ರಾಘವೇಂದ್ರ 2.22 ಕೋಟಿ ರೂಪಾಯಿ, ತೇಜಸ್ವಿನಿ 30 ಸಾವಿರ ರೂಪಾಯಿಯನ್ನು ಹೂಡಿಕೆ ಮಾಡಿದ್ದಾರೆ.
ಪತ್ನಿ, ಮಕ್ಕಳು, ಸಹೋದರನಿಗೆ ಸಾಲ ನೀಡಿರುವ ರಾಘವೇಂದ್ರ
ಬಿ.ವೈ. ರಾಘವೇಂದ್ರ ಅವರು ತಮ್ಮ ಪತ್ನಿ ತೇಜಸ್ವಿನಿ, ಮಕ್ಕಳಾದ ಭಗತ್, ಸುಭಾಷ್ ಮತ್ತು ತಮ್ಮ ಸಹೋದರ ವಿಜಯೇಂದ್ರ ಅವರಿಗೆ ಸಾಲ ನೀಡಿದ್ದಾರೆ. ವಿಜಯೇಂದ್ರ ಅವರಿಗೆ 85 ಲಕ್ಷ ರೂಪಾಯಿ, ಪತ್ನಿ ತೇಜಸ್ವಿನಿಗೆ 5.49 ಕೋಟಿ ರೂ., ಪುತ್ರ ಭಗತ್‌ಗೆ 65 ಲಕ್ಷ ರೂ., ಮತ್ತೊಬ್ಬ ಪುತ್ರ ಸುಭಾಷ್‌ಗೆ 85 ಲಕ್ಷ ರೂ. ಸಾಲ ನೀಡಿದ್ದಾರೆ. ಇದಲ್ಲದೆ, ವಿವಿಧ ಸಂಸ್ಥೆಗಳಿಗೆ ರಾಘವೇಂದ್ರ ಅವರು ಒಟ್ಟು 20.39 ಕೋಟಿ ರೂ. ಸಾಲ ನೀಡಿದ್ದಾರೆ. ಪತ್ನಿ ತೇಜಸ್ವಿನಿ ಅವರು ಭಗತ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್‌ಗೆ 2.50 ಲಕ್ಷ ರೂ. ನೀಡಿದ್ದಾರೆ
ರಾಘವೇಂದ್ರ – ತೇಜಸ್ವಿನಿ ಸಾಲಗಾರರು!
ಬಿ.ವೈ. ರಾಘವೇಂದ್ರ ಮತ್ತು ಪತ್ನಿ ತೇಜಸ್ವಿನಿ ಸಾಲಗಾರರಾಗಿದ್ದಾರೆ. ರಾಘವೇಂದ್ರ ಅವರಿಗೆ 69.39 ಲಕ್ಷ ರೂ. ಸಾಲವಿದೆ. ಪತ್ನಿ ತೇಜಸ್ವಿನಿಗೆ 12.91 ಕೋಟಿ ರೂ. ಸಾಲವಿದೆ.
ಚಿನ್ನ, ವಜ್ರ, ಬೆಳ್ಳಿ, ವಾಹನಗಳು
ಬಿ.ವೈ. ರಾಘವೇಂದ್ರ ಅವರ ಬಳಿ 1988 ಮಾಡಲ್‌ನ ಅಂಬಾಸಿಡರ್, ಒಂದು ಟ್ರ್ಯಾಕ್ಟರ್, ಟೊಯೋಟ ಫಾರ್ಚುನರ್ ಕಾರು ಇದೆ. ಇವುಗಳ ಒಟ್ಟು ಮೌಲ್ಯ 44.77 ಲಕ್ಷ ರೂಪಾಯಿ ಆಗಿದೆ.
ಸಾವಿರ ಗ್ರಾಂ ಮೇಲೆ ಚಿನ್ನ!
ರಾಘವೇಂದ್ರ ಬಳಿ 1021.50 ಗ್ರಾಂ ಚಿನ್ನವಿದೆ. 114.26 ಕ್ಯಾರೆಟ್ ವಜ್ರ, 8.6 ಕೆ.ಜಿ ಬೆಳ್ಳಿ, 42 ಬೆಲೆಬಾಳುವ ಹರಳು ಇದೆ ಇವುಗಳ ಮೌಲ್ಯ 98.83 ಲಕ್ಷ ರೂಪಾಯಿ ಆಗಿದೆ. ಇನ್ನು, ಪತ್ನಿ ತೇಜಸ್ವಿನಿ ಬಳಿ 1395.92 ಗ್ರಾಂ ಚಿನ್ನ, 96.022 ಕ್ಯಾರೆಟ್ ವಜ್ರ, 5.1 ಕೆ.ಜಿ ಬೆಳ್ಳಿ ಇದೆ. ಇದರ ಮೌಲ್ಯ 1.13 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: Lok Sabha Election 2024: ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ: ಸಿಎಂ ಸಿದ್ದರಾಮಯ್ಯ ಭವಿಷ್ಯ
ಕೃಷಿ ಜಮೀನು ಎಷ್ಟು?
ರಾಘವೇಂದ್ರ ಹೆಸರಿನಲ್ಲಿ 11.33 ಎಕರೆ ಕೃಷಿ ಜಮೀನು ಇದೆ. ಇದರ ಮೌಲ್ಯ 1.32 ಕೋಟಿ ರೂಪಾಯಿ, ವಿವಿಧೆಡೆ 18 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ. ಪತ್ನಿ ಹೆಸರಿನಲ್ಲಿ 8.07 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ.
ಕಟ್ಟಡಗಳ ಮೌಲ್ಯವೆಷ್ಟು?
ರಾಘವೇಂದ್ರ ಹೆಸರಿನಲ್ಲಿ 1.24 ಕೋಟಿ ರೂ. ಮೌಲ್ಯದ ಕಟ್ಟಡಗಳಿವೆ. ರಾಘವೇಂದ್ರ ಹೆಸರಿನಲ್ಲಿ ಶಿವಮೊಗ್ಗದ ವಿನೋಬನಗರ, ಶಿಕಾರಿಪುರದಲ್ಲಿ ವಾಸದ ಮನೆಗಳಿವೆ. ಇವುಗಳ ಮೌಲ್ಯ 4.18 ಕೋಟಿ ರೂಪಾಯಿ ಇದೆ. ಪತ್ನಿ ತೇಜಸ್ವಿನಿ 6.82 ಕೋಟಿ ರೂ. ಮೌಲ್ಯದ ವಾಸದ ಮನೆಗಳಿವೆ. ಇನ್ನು, ಬಿ.ವೈ.ರಾಘವೇಂದ್ರ ವಿರುದ್ಧ ನಾಲ್ಕು ಪ್ರಕರಣಗಳಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.