Site icon Vistara News

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Yogi Adityanath

Do we have our Atom Bombs to keep in refrigerator; CM Yogi Adityanath on Mani Shankar Aiyar's Remark

ಲಕ್ನೋ: ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿನ ಸಂಪತ್ತು ಮರು ಹಂಚಿಕೆ ವಿಚಾರವನ್ನು ಪ್ರಸ್ತಾವಿಸಿದೆ ಎಂದು ಆರೋಪಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೈ ಪಡೆಯ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರ ಸರದಿ. ಯೋಗಿ ಆದಿತ್ಯನಾಥ್ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ʼʼಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದಲ್ಲಿ ‘ಶರಿಯಾ ಕಾನೂನನ್ನು’ ಜಾರಿಗೆ ತರುವ ಮತ್ತು ಜನರ ಆಸ್ತಿಯನ್ನು ಮರುಹಂಚಿಕೆ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದೆʼʼ ಎಂದು ಹೇಳಿದ್ದಾರೆ (Lok Sabha Election 2024).

ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶಕ್ಕೆ ದ್ರೋಹ ಬಗೆದಿವೆ ಮತ್ತು ಮತ್ತೊಮ್ಮೆ ತಮ್ಮ ತಪ್ಪಾದ ಪ್ರಣಾಳಿಕೆಯೊಂದಿಗೆ ನಿಮ್ಮ ಬಳಿಗೆ ಬಂದಿವೆ. ನೀವು ಕಾಂಗ್ರೆಸ್ ಪ್ರಣಾಳಿಕೆಯನ್ನು ಗಮನಿಸಿದರೆ ಅದರಲ್ಲಿ ಅವರು ತಾವು ಸರ್ಕಾರ ರಚಿಸಿದರೆ, ಶರಿಯಾ ಕಾನೂನನ್ನು ಜಾರಿಗೆ ತರುತ್ತೇವೆ ಎಂದು ಹೇಳುತ್ತಾರೆ. ನೀವು ಹೇಳಿ ಈ ದೇಶವನ್ನು ಡಾ.ಬಿ.ಆರ್‌.ಅಂಬೇಡ್ಕರ್ ರಚಿಸಿದ ಸಂವಿಧಾನದ ಆಧಾರದಲ್ಲಿ ನಡೆಸಬೇಕೆ ಅಥವಾ ಶರಿಯತ್‌ನಿಂದ ನಡೆಸಬೇಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರು ಈ ಹಿಂದೆ ತಮ್ಮ ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜನರ ಆಸ್ತಿಯ ಮರು ಹಂಚಿಕೆಯನ್ನು ಸೇರಿಸಿದೆ ಎಂದು ಆರೋಪಿಸಿದ್ದರು.

ಯೋಗಿ ಆದಿತ್ಯನಾಥ್ ಹೇಳಿದ್ದೇನು?

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ವ್ಯಕ್ತಿಗತ ಕಾನೂನು (Vyaktigat kanoon) ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದೆ. ಶರಿಯಾ ಕಾನೂನು ಜಾರಿ ಎನ್ನುವುದೇ ಇದರ ಅರ್ಥ. ಯಾಕೆಂದರೆ ಮೋದಿ ತ್ರಿವಳಿ ತಲಾಖ್‌ ಕಾನೂನನ್ನು ದೇಶದಲ್ಲಿ ನಿಷೇಧಿಸಿದ್ದಾರೆʼʼ ಎಂದು ಆದಿತ್ಯನಾಥ್‌ ಹೇಳಿದ್ದಾರೆ. ಮುಂದುವರಿದು, ʼʼಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಜನರ ಆಸ್ತಿಯನ್ನು ವಶಪಡಿಸಿಕೊಂಡು ಹಂಚುವ ಬಗ್ಗೆ ಪ್ರಸ್ತಾವಿಸಲಾಗಿದೆ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಾರ್ಟಿಗಳು ನಿಮ್ಮ ಆಸ್ತಿಯನ್ನು ಕೊಳ್ಳೆ ಹೊಡೆಯಲು ಅನುಮತಿ ನೀಡುತ್ತೀರಾ? ಅವರ ಇಬ್ಬಗೆಯ ನೀತಿಯತ್ತ ಗಮನ ಹರಿಸಿ. ಅವರು ಒಂದು ಕಡೆ ನಿಮ್ಮ ಆಸ್ತಿಯ ಮೇಲೆ ಕಣ್ಣಿಡುತ್ತಾರೆ. ಇನ್ನೊಂದು ಕಡೆ ಮಾಫಿಯಾ ಮತ್ತು ಅಪರಾಧಿಗಳಿಗೆ ನೆರವು ನೀಡುತ್ತಿದ್ದಾರೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.

2006ರಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, “ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಿದ್ದರು. ಹಾಗಾದರೆ ನಮ್ಮ ದಲಿತರು, ಹಿಂದುಳಿದ ವರ್ಗಗಳು, ಬಡವರು ಮತ್ತು ರೈತರು ಎಲ್ಲಿಗೆ ಹೋಗುತ್ತಾರೆ? ತಾಯಂದಿರು ಮತ್ತು ಸಹೋದರಿಯರು ಎಲ್ಲಿಗೆ ಹೋಗುತ್ತಾರೆ? ಯುವಕರು ಎಲ್ಲಿಗೆ ಹೋಗುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲ; ಮತ್ತೆ ಸಂಪತ್ತು ಹಂಚಿಕೆ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಮೋದಿ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಭಯೋತ್ಪಾದನೆ ಕೊನೆಗೊಂಡಿದೆ ಎಂದು ಅವರು ಹೇಳಿದ್ದಾರೆ. “10 ವರ್ಷಗಳ ಹಿಂದೆ ದೇಶದಲ್ಲಿ ಭಯದ ವಾತಾವರಣವಿತ್ತು. 2014ರ ನಂತರ ಭಯೋತ್ಪಾದನೆಯನ್ನು ನಿಯಂತ್ರಿಸಲಾಯಿತು ಮತ್ತು 2019ರ ಹೊತ್ತಿಗೆ ಮೋದಿ ಭಯೋತ್ಪಾದನೆಯ ಮೂಲವನ್ನು ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದರು. ಇಂದು ಭಾರತದಲ್ಲಿ ಭಯೋತ್ಪಾದನೆ ನಾಶವಾಗಿದೆ” ಎಂದು ಅವರು ಹೇಳಿದ್ದಾರೆ. ಅಮ್ರೋಹಾದಲ್ಲಿ ಏಪ್ರಿಲ್ 26ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

Exit mobile version