ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಗೆ ದಿನ ಗಣನೆ ಆರಂಭವಾಗಿದೆ. ಒಟ್ಟು 7 ಹಂತಗಳಲ್ಲಿ ನಡೆಯುವ ಮತದಾನಕ್ಕೆ ಏಪ್ರಿಲ್ 19ರಂದು ಚಾಲನೆ ಸಿಗಲಿದೆ. ಹೀಗಾಗಿ ಮತದಾನದಕ್ಕೆ ಒಂದು ವಾರ ಮಾತ್ರ ಬಾಕಿ ಇದ್ದು, ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಉತ್ತರಾಖಂಡದ ನೈನಿತಾಲ್‌ನ ರಾಮನಗರದಲ್ಲಿ ಶನಿವಾರ (ಏಪ್ರಿಲ್ 13) ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದರು. ʼʼದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ (Pandit Jawaharlal Nehru) ಅವರು ಪ್ರಯತ್ನ ಪಡದಿದ್ದರೆ ಭಾರತದಲ್ಲಿ ಐಐಟಿಗಳು, ಐಐಎಂಗಳು, ಏಮ್ಸ್‌ಗಳು ಇರುತ್ತಿರಲಿಲ್ಲ. ಮಾತ್ರವಲ್ಲ ಚಂದ್ರಯಾನಕ್ಕೆ ಅವರು ಗಣನೀಯ ಕೊಡುಗೆ ನೀಡಿದ್ದಾರೆʼʼ ಎಂದು ಹೇಳಿದರು.
“ಬಿಜೆಪಿಯವರು ಎಷ್ಟು ಕಾಲ ಕಾಂಗ್ರೆಸ್ ಅನ್ನು ದೂಷಿಸುತ್ತಾರೆ? ಕಾಂಗ್ರೆಸ್ 10 ವರ್ಷಗಳಿಂದ ಅಧಿಕಾರದಲ್ಲಿಲ್ಲ. ಈ ಅವಧಿಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸುತ್ತಿದೆ. ಈಗ ಅವರು ‘400 ಸೀಟು’ ಬೇಕು ಎಂದು ಹೇಳುತ್ತಾರೆ. 75 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ ಎಂದು ಅವರು ದೂರಉತ್ತಾರೆ. ಆದರೆ ಕಾಂಗ್ರೆಸ್ ಈ ದೇಶಕ್ಕೆ ಮಹತ್ವಪೂರ್ನ ಕೊಡುಗೆಗೆಳನ್ನು ನೀಡಿದೆʼʼ ಎಂದು ತಿಳಿಸಿದರು.
#WATCH | Uttarakhand | Addressing a public rally at Ramnagar, in Nainital, Congress leader Priyanka Gandhi Vadra says, "For how long you'll keep blaming Congress. Congress is not in power for the last 10 years. For the last 10 years, they (BJP) have been in govt with a full… pic.twitter.com/dsEiOWx5Cg
— ANI (@ANI) April 13, 2024
“ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಐಐಟಿ, ಐಐಎಂ ಮತ್ತು ಏಮ್ಸ್ ಜಾರಿಗೆ ಬಂದಿತ್ತು. ಕಾಂಗ್ರೆಸ್ ಕಾರಣದಿಂದ ಉತ್ತರಾಖಂಡವೂ ಅಭಿವೃದ್ಧಿ ಹೊಂದಿದೆ. ಪಂಡಿತ್ ಜವಾಹರಲಾಲ್ ನೆಹರೂ ಅವರ ಪ್ರಯತ್ನದ ಕಾರಣದಿಂದ ʼಚಂದ್ರಯಾನʼ ಚಂದ್ರನ ಮೇಲೆ ಇಳಿಯಿತುʼʼ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಒತ್ತಿ ಹೇಳಿದ ಅವರು, “ಎಲ್ಲರೂ ಭ್ರಷ್ಟರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ತಾನು ಮಾತ್ರ ಶುದ್ಧ ಎಂದು ಅವರನ್ನು ಅವರೇ ಹೊಗಳಿಕೊಳ್ಳುತ್ತಾರೆ. ಅವರು ತಮ್ಮ ಪಕ್ಷಕ್ಕೆ ವಿವಿಧ ಪಕ್ಷದ ನಾಯಕರನ್ನು ಕರೆತರಲು ಮತ್ತು ಕೆಲವು ರಾಜ್ಯ ಸರ್ಕಾರವನ್ನು ಉರುಳಿಸಲು ಇ.ಡಿ, ಸಿಬಿಐ ಮತ್ತು ಐಟಿಯನ್ನು ಬಳಸುವುದರಲ್ಲಿ ಎಷ್ಟು ನಿರತರಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಅವರು ಉದ್ಯೋಗ ಮತ್ತು ಹಣದುಬ್ಬರದ ಸಮಸ್ಯೆಯನ್ನೂ ಮರೆತು ಇದರ ಬಗ್ಗೆ ಗಮನ ಹರಿಸುತ್ತಿದ್ದಾರೆ. ಚುನಾವಣಾ ಬಾಂಡ್‌ಗಳ ವಿವರ ಇದೀಗ ಬಹಿರಂಗಗೊಂಡಿದೆ. ಅತೀ ಹೆಚ್ಚು ದೇಣಿಗೆ ಬಿಜೆಪಿಗೆ ಸಂದಾಯವಾಗಿದೆ. ಈಗ ಹೇಳಿ ಯಾರು ಭ್ರಷ್ಟರು?ʼʼ ಎಂದು ಅವರು ಪ್ರಶ್ನಿಸಿದರು.
ತಾನು ಕೇವಲ 19 ವರ್ಷದವಳಿದ್ದಾಗ ಮಾಜಿ ಪ್ರಧಾನಿ, ತನ್ನ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯಾಗಿತ್ತು. ಅವರ ದೇಹವನ್ನು ತನ್ನ ತಾಯಿಯ ಮುಂದೆ ಇರಿಸಿದಾಗ ತ್ಯಾಗದ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಪ್ರಿಯಾಂಕಾ ಹೇಳಿದರು. “ಹಿಂದು ಧರ್ಮದಲ್ಲಿನ ಅತಿ ದೊಡ್ಡ ವೈಶಿಷ್ಟ್ಯ ‘ತ್ಯಾಗ’. ನಾನು 19 ವರ್ಷದವಳಿದ್ದಾಗ ತಂದೆಯ ಛಿದ್ರಗೊಂಡ ದೇಹವನ್ನು ತಾಯಿಯ ಮುಂದೆ ಇರಿಸಲಾಗಿತ್ತು. ಈಗ ನಮ್ಮ ವಿರೋಧಿಗಳು ನಮ್ಮ ಕುಟುಂಬವನ್ನು ಎಷ್ಟೇ ನಿಂದಿಸಿದರೂ ಮತ್ತು ಹುತಾತ್ಮರಾದ ತಂದೆಯನ್ನು ಅವಮಾನಿಸಿದರೂ ನಾವು ಮೌನವಾಗಿರುತ್ತೇವೆ. ಏಕೆಂದರೆ ಅವರು ನಮ್ಮ ಹೋರಾಟವನ್ನು ಅರ್ಥ ಮಾಡಿಕೊಂಡಿಲ್ಲ. ನಮ್ಮ ಹೃದಯದಲ್ಲಿ ಈ ದೇಶದ ಬಗ್ಗೆ ನಂಬಿಕೆ ಮತ್ತು ನಿಜವಾದ ಭಕ್ತಿ ಇರುವುದರಿಂದ ನಾವು ಮೌನವಾಗಿದ್ದೇವೆʼʼ ಎಂದು ಅವರು ಹೇಳಿದರು.
ಉತ್ತರಾಖಂಡದ ಎಲ್ಲ ಐದು ಸ್ಥಾನಗಳಿಗೆ ಏಪ್ರಿಲ್ 19ರಂದು ಅಂದರೆ ಮೊದಲ ಹಂತದಲ್ಲಿ ಒಂದೇ ಬಾರಿಗೆ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ED Chargesheet: ಇ.ಡಿ ಚಾರ್ಜ್‌ಶೀಟ್; ಪ್ರಿಯಾಂಕಾ ಗಾಂಧಿಗೂ ಎದುರಾಯ್ತು ಸಂಕಷ್ಟ!