ಹುಬ್ಬಳ್ಳಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರವೇ ಮುಂದುವರಿಯುತ್ತದೆ. ಕನಿಷ್ಠ ಇನ್ನೂ 10 ವರ್ಷ ಕಾಲ ಮೋದಿ ಆಡಳಿತ ನಡೆಸುತ್ತಾರೆ ಎಂದು ಇಂಟರ್‌ನ್ಯಾಶನಲ್ ಮಾನಿಟರಿ ಫಂಡ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ – International Monetary Fund) ಹೇಳಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ದುಂಡಶಿ ಗ್ರಾಮದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ಅಂತಾರಾಷ್ಟ್ರೀಯ ಮಟ್ಟದಲ್ಲೇ ಪ್ರಧಾನಿ ಮೋದಿ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.
ಇಂಟರ್‌ನ್ಯಾಶನಲ್ ಮಾನಿಟರಿ ಫಂಡ್ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ. ನರೇಂದ್ರ ಮೋದಿ ಆಡಳಿತದಲ್ಲಿ ದೇಶದ 25 ಕೋಟಿ ಜನರು ಬಡತದಿಂದ ವಿಮುಕ್ತಿ ಹೊಂದಿದ್ದಾರೆಂದು ಆ ಸಂಸ್ಥೆಯ ವರದಿ ಹೇಳಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಸಂಪೂರ್ಣ ಬಡತನ ನಿರ್ಮೂಲನೆಗೆ ಮೋದಿ ಸಂಕಲ್ಪ
ಬರುವ ಹತ್ತು ವರ್ಷದಲ್ಲಿ ದೇಶದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಜತೆಗೆ ಜಗತ್ತಿನಲ್ಲೇ ಭಾರತವನ್ನು ಅಭಿವೃದ್ಧಿಯಲ್ಲಿ ನಂಬರ್ 1 ರಾಷ್ಟ್ರವಾಗಿ ಪರಿವರ್ತಿಸಲು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಹೊಂದಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಕೇಂದ್ರದ ವಿವಿಧ ಯೋಜನೆಗಳು ಮತ್ತು ಆರ್ಥಿಕ ಸುಧಾರಣೆ ಪರಿಣಾಮ 25 ಕೋಟಿ ರೂಪಾಯಿಗೂ ಅಧಿಕ ಜನರು ಈಗಾಗಲೇ ಬಹು ಆಯಾಮದ ಬಡತನದಿಂದ (Multidimensional poverty) ಹೊರ ಬಂದು ಆರ್ಥಿಕ ಸಬಲತೆಯನ್ನು ಸಾಧಿಸಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದರು.
5 ವರ್ಷದಲ್ಲಿ ಎಲ್ಲರಿಗೂ ಮನೆ
ಬರುವ 5 ವರ್ಷದೊಳಗೆ ದೇಶದ ಎಲ್ಲರಿಗೂ ಮನೆ ಸಿಗಬೇಕು ಎಂಬ ದಿಶೆಯಲ್ಲಿ ಕೇಂದ್ರ ಸಂಪುಟದಲ್ಲಿ ಚರ್ಚೆಯಾಗಿದೆ. 2 ಕೋಟಿ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಲು ಆಗಲೇ ಅನುಮೋದಿಸಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಹತ್ತೇ ವರ್ಷದಲ್ಲಿ 6 ಕೋಟಿ ಮನೆ ನೀಡಿದೆ ಕೇಂದ್ರ
ಕಾಂಗ್ರೆಸ್ 65 ವರ್ಷದ ಆಡಳಿತದಲ್ಲಿ ಕೇವಲ 3.5 ಕೋಟಿ ಮನೆಗಳನ್ನು ನೀಡಲಾಗಿದೆ. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಹತ್ತೇ ವರ್ಷದಲ್ಲಿ ಕಾಂಗ್ರೆಸ್‌ಗಿಂತ ಅಧಿಕ, ಅಂದರೆ 4 ಕೋಟಿಗೂ ಅಧಿಕ ಮನೆಗಳನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಿದ್ದಾರೆ. ಒಟ್ಟು 6 ಕೋಟಿ ಮನೆಗಳನ್ನು ಮೋದಿ ಸರ್ಕಾರವು ಇದುವರೆಗೆ ಹಂಚಿಕೆ ಮಾಡಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಇದನ್ನೂ ಓದಿ: Lok Sabha Election 2024: ಎಚ್.ಡಿ. ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ತಾರಾ ದರ್ಶನ್? ಏನಂದ್ರು ಸುಮಲತಾ?
ಕೇಂದ್ರ ಕೊಟ್ಟ ಮನೆಗಳನ್ನೇ ರಾಜ್ಯ ಸರ್ಕಾರ ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ಹಂಚುತ್ತಿದೆ. ನಾವು ದಿಲ್ಲಿಯಲ್ಲಿ ಕುಳಿತು ಹಂಚಲು ಬರುವುದಿಲ್ಲ. ಸ್ಥಳೀಯ ಆಡಳಿತ ಸಮನಾಗಿ ಹಂಚುವ ಕೆಲಸ ಮಾಡಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಸಮಾವೇಶದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪಕ್ಷದ ಪ್ರಮುಖರಾದ ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣನವರ, ಶೋಭಾ ನಿಸ್ಸೀಮಗೌಡ್ರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.