ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವುದರಿಂದ ಒಂದೊಂದು ಪಕ್ಷಗಳಿಂದ ಒಂದೊಂದು ರೀತಿಯ ಕಾರ್ಯತಂತ್ರ. ಕರ್ನಾಟಕದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿಯಾಗಿರುವ ನಿಟ್ಟಿನಲ್ಲಿ ಜಂಟಿ ಹೋರಾಟಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ (Bangalore Rural Lok Sabha constituency) ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ (CN Manjunath) ಅವರನ್ನು ಬಿಜೆಪಿ (BJP Karnataka) ಕಣಕ್ಕಿಳಿಸಿದ್ದರಿಂದ ಡಿಕೆ ಬ್ರದರ್ಸ್ (DK Brothers) ಫುಲ್ ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮದೇ ಕಾರ್ಯತಂತ್ರವನ್ನು ಹೆಣೆಯುತ್ತಿದ್ದಾರೆ. ಕ್ಷೇತ್ರದ ಗೆಲುವಿನ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ಸದಾಶಿವನಗರದ ಡಿ.ಕೆ. ಸುರೇಶ್ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಅನ್ನು ಸಹ ನಡೆಸಲಾಗಿದೆ. ಈ ಸಭೆಯ ಹಿಂದೆ “ಆಪರೇಷನ್ ಜೆಡಿಎಸ್ ಕಾರ್ಯಕರ್ತ” ತಂತ್ರ ಅಡಗಿದೆಯೇ ಎಂಬ ಸಂಶಯ ಹುಟ್ಟಿದೆ.
ಡಾ. ಮಂಜುನಾಥ್ ಸ್ಪರ್ಧೆ ಬೆನ್ನಲ್ಲೇ ಡಿಕೆ ಬ್ರದರ್ಸ್ ತಂತ್ರಗಾರಿಕೆಗೆ ಮೊರೆಹೋಗಿದ್ದಾರೆ. ಕ್ಷೇತ್ರ ಗೆಲ್ಲಲು ಯಾವೆಲ್ಲ ಕೆಲಸಗಳು ಆಗಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಸದಾಶಿವನಗರದ ಡಿ.ಕೆ. ಸುರೇಶ್ ನಿವಾಸದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಈ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ಮುಖಂಡರ ಜತೆಗೆ ಸಭೆ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್, ಶಾಸಕರಾದ ಮಾಗಡಿ ಬಾಲಕೃಷ್ಣ, ಆನೇಕಲ್ ಶಿವಣ್ಣ, ಕುಣಿಗಲ್ ರಂಗನಾಥ್, ಇಕ್ಬಾಲ್ ಹುಸೇನ್, ಎಂಎಲ್ಸಿಗಳಾದ ಪುಟ್ಟಣ್ಣ, ಎಸ್ ರವಿ ಹಾಗೂ ಮುಖಂಡರಾದ ರಘುನಂದನ್ ರಾಮಣ್ಣ, ಮನೋಹರ್, ಹನುಮಂತರಾಯಪ್ಪ, ಕುಸುಮಾ, ಎಚ್. ಗಂಗಾಧರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಆಪರೇಷನ್ ಜೆಡಿಎಸ್ ಕಾರ್ಯಕರ್ತ?
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ತಮ್ಮ ಎದುರಾಳಿಯಾಗಿ ಬಿಜೆಪಯಿಂದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸುತ್ತಿದ್ದಂತೆ ಕೆಂಡವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್, ಜೆಡಿಎಸ್ ಪಕ್ಷ ಮುಳುಗುತ್ತಿದ್ದು, ಅದಕ್ಕೆ ಮಂಜುನಾಥ್ ಬಿಜೆಪಿ ಸೇರಿದ್ದಾರೆ. ಹೀಗಾಗಿ ಆ ಪಕ್ಷದ ಮುಖಂಡರು, ಕಾರ್ಯಕರ್ತರು ಮುಂದಿನ ಆಲೋಚನೆಯನ್ನು ಮಾಡಲಿ ಎಂದು ಹೇಳಿಕೆಯನ್ನು ಕೊಟ್ಟಿದ್ದರು. ಇದೇ ಮಾತನ್ನು ಶುಕ್ರವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಪುನರುಚ್ಚಾರ ಮಾಡಿದ್ದಾರೆ. ಇಂಥ ಹೇಳಿಕೆಗಳ ಮೂಲಕ ಜೆಡಿಎಸ್ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿ ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ಮಾಡಲಾಗುತ್ತಿದೆಯೇ ಎಂಬ ಸಂಶಯ ಮೂಡಿದೆ.
ಜೆಡಿಎಸ್ ಕಾರ್ಯಕರ್ತರು ಸಂಪರ್ಕಿಸುತ್ತಿದ್ದಾರೆ: ಡಿಕೆಶಿ
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕನಾಗಿದ್ದೇನೆ. ಹೀಗಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ತಯಾರಿ ಮಾಡಿಕೊಳ್ಳಬೇಕಲ್ಲ. ಎರಡು ಪಕ್ಷದಿಂದ ನಮ್ಮ ಪಾರ್ಟಿ ಸೇರಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ಇಂದಿನ ಸಭೆಯಲ್ಲಿ ಅದರ ಬಗ್ಗೆಯೇ ಚರ್ಚೆ ಮಾಡುತ್ತಿದ್ದೆವು. ಇಷ್ಟು ವರ್ಷ 5-6 ಕ್ಷೇತ್ರದಲ್ಲಿ ಕಾಂಗ್ರೆಸ್ – ಜೆಡಿಎಸ್ ನೇರ ಸ್ಪರ್ಧೆ ಇತ್ತು. ಈಗ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೆಗೌಡ ಮತ್ತು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕುಟುಂಬದವರೇ ಬಿಜೆಪಿ ಸೇರಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಆತಂಕದಿಂದ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಹಳೆಯದನ್ನೆಲ್ಲ ಮರೆತು ಪಕ್ಷ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಾಯಕರಿಗೆ ಸೂಚನೆಯನ್ನು ಕೊಟ್ಟಿದ್ದೇನೆ. ಮೊದಲು ಅವರ ಪಕ್ಷದ ಬಗ್ಗೆ ಮಾತನಾಡಲಿ. ಜೆಡಿಎಸ್ ಇನ್ನೂ ಇದೆಯಾ ಅಂತ ಎಚ್‌ಡಿಕೆ, ಗೌಡರು ಹೇಳಲಿ. ಪ್ರಬಲ ಅಭ್ಯರ್ಥಿ ಎಂಬೆಲ್ಲ ಹೇಳಿಕೆ ಆಮೇಲೆ ಎಂದು ವ್ಯಂಗ್ಯವಾಗಿ ಹೇಳಿದರು.
ಇದನ್ನೂ ಓದಿ: Lok Sabha Election 2024: ಚಿಗುರೊಡೆಯಿತಾ ರೆಡ್ಡಿ – ರಾಮುಲು ಫ್ರೆಂಡ್‌ಶಿಪ್; ವರ್ಕೌಟ್ ಆಯ್ತಾ ಚಾಣಕ್ಯನ ಸೂತ್ರ?
ಕಾರ್ಯತಂತ್ರದ ಕುರಿತು ಸಭೆ ಮಾಡಿದ್ದೇವೆ: ಡಿ.ಕೆ. ಸುರೇಶ್
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಇಂದು ಚುನಾವಣೆ ಸಂಬಂಧ ಸಭೆ ಕರೆದಿದ್ದೆವು. ಕಾರ್ಯತಂತ್ರದ ಕುರಿತು ಚರ್ಚೆ ಮಾಡಿದ್ದೇವೆ. ಯಾವುದನ್ನು ಮಾನದಂಡ ಮಾಡಿಕೊಂಡು ಚುನಾವಣೆ ಎದುರಿಸಬೇಕು? ಹೀಗೆ ಅನೇಕ ವಿಚಾರದ ಕುರಿತು ಚರ್ಚೆ ಆಗಿದೆ. ಶಾಸಕರು, ಸೋತ ಅಭ್ಯರ್ಥಿಗಳ ಜತೆ ಸಭೆ ಮಾಡಿದ್ದೇವೆ ಎಂದು ಹೇಳಿದರು.
ಡಾ. ಸಿ.ಎನ್. ಮಂಜುನಾಥ್ ಅವರು ಪ್ರಬಲ ಅಭ್ಯರ್ಥಿಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್, ಸಿಂಬಲ್ ಅಥವಾ ವ್ಯಕ್ತಿ ಬಗ್ಗೆ ಮಾತನಾಡಲು ಹೋಗಲ್ಲ. ನಾನು ಕ್ಷೇತ್ರದಲ್ಲಿ ದುಡಿದಿದ್ದೇನೆ. ಅದರ ಕೂಲಿಯನ್ನು ಜನರ ಬಳಿ ಕೇಳುತ್ತಿದ್ದೇನೆ. ಮಂಜುನಾಥ್ ಸ್ಪರ್ಧೆ ಅವರ ತೀರ್ಮಾನ. ಮಂಜುನಾಥ್ ಪ್ರಬಲ ಅಭ್ಯರ್ಥಿ ಆಗಿದ್ದರೆ ಜೆಡಿಎಸ್ ಸಿಂಬಲ್‌ನಿಂದ ನಿಲ್ಲಿಸಬೇಕಿತ್ತು. ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಅವರ ಕಾರ್ಯಕರ್ತರಿಗೆ ನಾನು ಕರೆ ಕೊಡುತ್ತೇನೆ. ಜ್ಯಾತ್ಯತೀತ ಮಹಿಳೆ ಇಂದು ತೆನೆ ಇಳಿಸಿದ್ದಾಳೆ. ನಾನು ಸ್ನೇಹಿತ, ಸಹೋದರನಾಗಿ ಎಲ್ಲರ ಬಳಿ ಸಹಕಾರವನ್ನು ಕೋರುತ್ತೇನೆ. ಸೇವೆ ಮಾಡಲು ನಾನು ಸಿದ್ಧನಿದ್ದೇನೆ. ಯಾವುದೇ ರಾಗ, ದ್ವೇಷ ಇಲ್ಲದೆ ಕೆಲಸ ಮಾಡುತ್ತೇನೆ. ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ. ಮುಕ್ತ ಮನಸ್ಸಿನಿಂದ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದರು.
ಗುಲಾಮತನಕ್ಕೆ ಕೊಟ್ಟಿದ್ದೇವೆ ಅಂದುಕೊಂಡಿದ್ದಾರೆ
ಮಾಗಡಿ ಬಾಲಕೃಷ್ಣ ಮಾತನಾಡಿ, ಕುಮಾರಸ್ವಾಮಿ ಹಾಗೂ ಹಾಸನದವರಿಗೆ ನಾವು ಗುತ್ತಿಗೆ ಕೊಟ್ಟಿದ್ದೇವೆ. ಅವರು ನಮ್ಮ ರಾಮನಗರ ಜಿಲ್ಲೆಯನ್ನು ಗುಲಾಮತನಕ್ಕೆ ಕೊಟ್ಟಿದ್ದೇವೆ ಅಂದುಕೊಂಡಿದ್ದಾರೆ. ಹಾಸನ ಜಿಲ್ಲೆ ನಾಯಕರಿಗೆ ನಾವು ಗುಲಾಮರು ಎಂಬ ಭಾವನೆ ಇದೆ. ನಾವೂ ಸನ್ಯಾಸಿಗಳಾ? ನಾವೂ ರಾಜಕಾರಣ ಮಾಡುವುದಕ್ಕೆ ಬಂದಿರುವುದು. ಕುಮಾರಸ್ವಾಮಿನೇ ಸ್ಪರ್ಧೆ ಮಾಡಬಹುದಿತ್ತಲ್ಲ. ಯಾಕೆ ಅವರ ಸಂಬಂಧಿಯನ್ನು ಬೇರೆ ಪಕ್ಷದಿಂದ ಸ್ಪರ್ಧೆಗೆ ಇಳಿಸಿದರು? ಪಿಚ್ಚರ್ ತೆಗೆಯೋ ಮುನಿರತ್ನಗೆ ರಾಮ, ರಾವಣ ಯಾರೂ ಅಂತ ಗೊತ್ತು. ಮುನಿರತ್ನಗಿಂತ ಬೇರೆ ದೊಡ್ಡ ರಾವಣ ಯಾರಾದ್ರೂ ಇದ್ದಾರಾ? ರಾಮನ ಕೆಲಸ ಮಾಡಿದ್ದು ಯಾರು? ರಾವಣನ ಕೆಲಸ ಮಾಡಿದ್ದು ಯಾರು ಎಂಬುದು ಗೊತ್ತಿದೆ. ಜನರ ಜತೆಗೆ ಡಿ.ಕೆ. ಸುರೇಶ್‌ಗೆ ಇರುವ ಒಡನಾಟ ಅವರನ್ನು ಗೆಲುವಿನ ದಡ ಮುಟ್ಡಿಸುತ್ತದೆ ಎಂದು ಹೇಳಿದರು.