ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಐಟಿ ದಾಳಿಗಳು ಮುಂದುವರಿದಿವೆ. ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಹಣದ ವಹಿವಾಟು ನಡೆಯುವ ಹಿನ್ನೆಲೆಯಲ್ಲಿ ಪೊಲೀಸರ ಸಹಿತ ಚುನಾವಣಾ ಆಯೋಗವು ಹದ್ದಿನ ಕಣ್ಣಿಟ್ಟಿದೆ. ಇನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ (ಏಪ್ರಿಲ್ 24) ಮುಂಜಾನೆ ಸಂಸದ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ (DK Suresh) ಆಪ್ತ, ಕೋಣನಕುಂಟೆ ಬ್ಲಾಕ್ ಮಾಜಿ ಕಾರ್ಪೊರೇಟರ್ ಗಂಗಾಧರ್ ಎಂಬುವವರ ಮನೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ದಾಳಿ (IT Raid) ಮಾಡಿದ್ದಾರೆ.
ಮುಂಜಾನೆ 4 ಗಂಟೆ ವೇಳೆಗೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಗಂಗಾಧರ್ ಅವರ ಮನೆಯಲ್ಲಿ ಕೆಲವು ಗಂಟೆಗಳ ಕಾಲ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಆದರೆ, ಯಾವೆಲ್ಲ ದಾಖಲೆಗಳು ಲಭ್ಯವಾಗಿವೆ? ಹಣ ಸಿಕ್ಕಿವೆಯಾ? ಮುಂದಿನ ಕ್ರಮ ಏನು ಎಂಬ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ.
ಯಾರ ಯಾರ ಮನೆ ಮೇಲೆ ಐಟಿ ರೇಡ್
ಕೋಣನಕುಂಟೆ, ಅಂಜಾನಪುರ ಹಾಗೂ ಅವಲಹಳ್ಳಿ ಭಾಗದಲ್ಲಿ ಐಟಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಗಂಗಾಧರ್ ಮಾತ್ರವಲ್ಲದೆ ಇನ್ನೂ ಹಲವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರೆಲ್ಲರೂ ಡಿ.ಕೆ. ಸುರೇಶ್ ಆಪ್ತರು ಎಂದು ತಿಳಿದುಬಂದಿದೆ. ಗೊಟ್ಟಿಗೆರೆ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಡಿ.ಕೆ. ಸುರೇಶ್ ಆಪ್ತ ಸಹಾಯಕ ಸುಜಯ್, ಚಂದ್ರು, ಲಕ್ಷ್ಮಣ್, ಬಾಬು ಸೇರಿ ಮತ್ತಿತರರ ಮನೆಗಳ ಮೇಲೆ ಐಟಿ ರೇಡ್ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಕಾಂಗ್ರೆಸ್ ಮುಖಂಡ, ಡಿ.ಕೆ. ಸುರೇಶ್ ಅವರ ಆಪ್ತರಾದ ಗಂಗಾಧರ್ ಹಾಗೂ ಇತರರ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಇದು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಟ್ಟಿಹಾಕುವ ಪ್ರಯತ್ನ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೋಣನಕುಂಟೆ ಬ್ಲಾಕ್‌ನಲ್ಲಿರುವ ಮಾಜಿ ಕಾರ್ಪೊರೇಟರ್ ಗಂಗಾಧರ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಧರಣಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತಿದ್ದೇವೆ. ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮನೆ ಮೇಲೆ ಐಟಿ ದಾಳಿಗಳು ನಡೆಯುತ್ತಿವೆ. ಗಂಗಾಧರ್ ಅವರು ಹಣಕಾಸಿನ ವಿಚಾರದಲ್ಲಿ ಅನುಕೂಲಸ್ಥರು. ಸಾಕಷ್ಟು ಜಮೀನು ಇದೆ. ಬೇರೆ ಪಕ್ಷದಲ್ಲಿ ಇವರಿಗಂತೆ ಶ್ರೀಮಂತರು ಇದ್ದಾರೆ. ಅವರ ಮನೆಗಳ ಮೇಲೆ ದಾಳಿಯಾಗಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಯುತ್ತಿದೆ. ಡಿ.ಕೆ ಸುರೇಶ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಆಪ್ತರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಇದನ್ನೂ ಓದಿ: Namma Metro: ಏಪ್ರಿಲ್ 26ರಂದು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ತಡರಾತ್ರಿವರೆಗೂ ಸೇವೆ ವಿಸ್ತರಣೆ
ಗಂಗಾಧರ್ ಅವರ ಜತೆಗೆ ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಸುರೇಶ್ ಅವರ ಆಪ್ತ ಸಹಾಯಕ ಸುಜಯ್, ಚಂದ್ರು, ಲಕ್ಷ್ಮಣ್, ಬಾಬು ಸೇರಿದಂತೆ ಹಲವರ ಮನೆ ಮೇಲೆ ದಾಳಿ ಮಾಡಲಾಗಿದೆ. ಇದು ಉದ್ದೇಶಪೂರ್ವಕ ದಾಳಿ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಐಡಿ ರೇಡ್; 2 ದಿನದಲ್ಲಿ 21.15 ಕೋಟಿ ರೂ. ಚಿನ್ನಾಭರಣ ವಶ!
ಕಳೆದ 3 ದಿನಗಳಿಂದ 16 ಕಡೆ ಐಟಿ ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿವೆ. ಒಟ್ಟಾರೆ 21.15 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಳಲಾಗಿದೆ.
ಉದ್ಯಮಿಗಳು, ಚಿನ್ನಾಭರಣ ಮಳಿಗೆ ಮಾಲೀಕರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹದಿನಾರು ಕಡೆ ಸೇರಿ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿಯನ್ನು ನಡೆಸಲಾಗಿದೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರವೊಂದರಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ದಾಖಲೆಗಳು ಇಲ್ಲದ ಚಿನ್ನಾಭರಣಗಳು ಪತ್ತೆಯಾಗಿವೆ.
2 ದಿನಗಳಲ್ಲಿ 16 ಕಡೆ ದಾಳಿ; ಸಿಕ್ಕ ಚಿನ್ನ, ನಗದು ಎಷ್ಟು?
1) 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 4 ಕೆಜಿ 400 ಗ್ರಾಂ ಚಿನ್ನಾಭರಣ ಪತ್ತೆ
– ಶಂಕರಪುರ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)
2) 3 ಕೋಟಿ 39 ಲಕ್ಷ ರೂಪಾಯಿ ಮೌಲ್ಯದ 4 ಕೆಜಿ 800 ಗ್ರಾಂ ಚಿನ್ನ ಪತ್ತೆ
ಶಾರದಾದೇವಿ ರಸ್ತೆ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)
3) 2 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ 3 ಕೆಜಿ 400 ಗ್ರಾಂ ಪತ್ತೆ
ಮರ್ಕೈಂಟಲ್ ಬ್ಯಾಂಕ್ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)
4) 5 ಕೋಟಿ 33 ಲಕ್ಷ ರೂಪಾಯಿ ಮೌಲ್ಯದ 7 ಕೆಜಿ 598 ಗ್ರಾಂ ಚಿನ್ನ ಪತ್ತೆ
ಜಯನಗರ 3ನೇ ಬ್ಲಾಕ್ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)
5) 84 ಲಕ್ಷ ಮೌಲ್ಯದ 1 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಪತ್ತೆ
ಸಾರಸ್ವತ ಬ್ಯಾಂಕ್, ಚಾಮರಾಜಪೇಟೆ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)
6) 3 ಲಕ್ಷ 34 ಸಾವಿರ ರೂಪಾಯಿ ಮೌಲ್ಯದ 6.38 ಕ್ಯಾರೆಟ್ ವಜ್ರ ಪತ್ತೆ
ಅಂಚೆ ಕಚೇರಿ ಬಳಿ, ಬಸವನಗುಡಿ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)
7) 3 ಲಕ್ಷದ 14 ಸಾವಿರ ಮೌಲ್ಯದ 5.99 ಕ್ಯಾರೆಟ್ ವಜ್ರ ಪತ್ತೆ
ಮಾತಾ ಶಾರದಾ ದೇವಿ ರಸ್ತೆ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)
8) 6 ಕೋಟಿ 40 ಲಕ್ಷ ಮೌಲ್ಯದ 202.83 ಕ್ಯಾರೆಟ್ ವಜ್ರ ಪತ್ತೆ
ಜಯನಗರ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)
ಇದನ್ನೂ ಓದಿ: VVPAT Verification: ಇವಿಯಂ-ವಿವಿಪ್ಯಾಟ್ ತಾಳೆ ಪ್ರಕರಣ; ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸೇರಿದಂತೆ ಹಲವು ಕಡೆ ದಾಳಿ ನಡೆದಿದ್ದು, ಈ ಕ್ಷೇತ್ರವೊಂದರಲ್ಲೇ ಸರಿ ಸುಮಾರು 21.15 ಕೋಟಿ ರೂಪಾಯಿಯಷ್ಟು ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಎಷ್ಟು ನಗದು ಪತ್ತೆಯಾಗಿದೆ ಎಂಬ ಬಗ್ಗೆ ಇನ್ನೂ ಐಟಿ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿಲ್ಲ.