ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ರಾಜಕೀಯ ಚಟುವಟಿಕೆ ಬಿರಿಸುಗೊಂಡಿವೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಈಗ ಅಭ್ಯರ್ಥಿಗಳ ಘೋಷಣೆ ಹಾಗೂ ಆಯ್ಕೆ ಪ್ರಕ್ರಿಯೆ ನಡೆಯುತ್ತಿವೆ. ಈ ಮಧ್ಯೆ ಕೆಲವು ಲೋಕಸಭಾ ಕ್ಷೇತ್ರಗಳು ಅದರದ್ದೇ ಆದ ಕಾರಣಗಳಿಂದ ಮಹತ್ವವನ್ನು ಪಡೆದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ಶ್ರೀರಾಮುಲುಗೆ ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ (Bellary Lok Sabha constituency) ಬಿಜೆಪಿ ಟಿಕೆಟ್ ಸಿಕ್ಕಿದೆ. ಆದರೆ, ಅವರಿಗೆ ಮಗ್ಗಲು ಮುಳ್ಳಾಗಿ ಕಾಡುತ್ತಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ (Gali Janardhan Reddy) ಆತಂಕ ಇತ್ತು. ಈಗ ಅದೂ ಸಹ ದೂರವಾಗುವ ಮುನ್ಸೂಚನೆ ಸಿಕ್ಕಿದೆ. ರೆಡ್ಡಿ ಮತ್ತು ರಾಮುಲು ಮಧ್ಯೆ ಫ್ರೆಂಡ್‌ಶಿಪ್‌ನ ಸೆಕೆಂಡ್ ಇನ್ನಿಂಗ್ಸ್ ಶುರುವಾಗುತ್ತಿದೆಯೇ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಚುನಾವಣಾ ಚಾಣಕ್ಯ, ಗೃಹ ಸಚಿವ ಅಮಿತ್ ಶಾ (Amit Shah) ಅವರೇ ಸೂತ್ರಧಾರರಾಗಿದ್ದಾರೆ.
ಜನಾರ್ದನ ರೆಡ್ಡಿ ಅವರನ್ನು ದಿಢೀರನೆ ನವ ದೆಹಲಿಗೆ ಕರೆಸಿಕೊಂಡಿದ್ದ ಅಮಿತ್ ಶಾ ಮಾತುಕತೆ ನಡೆಸಿದ್ದರು. ಗುರುವಾರ ಶಾ ಅವರನ್ನು ಭೇಟಿಯಾಗುತ್ತಿದ್ದಂತೆ ಈ ಬಗ್ಗೆ ಟ್ವೀಟ್ ಮಾಡಿದ್ದ ರೆಡ್ಡಿ, ಇನ್ನು ಮೂರ್ನಾಲ್ಕು ದಿನಗಳಲ್ಲಿ ಭೇಟಿಯ ಚರ್ಚೆ ಬಗ್ಗೆ ಹೇಳುವುದಾಗಿ ತಿಳಿಸಿದ್ದರು. ಅಲ್ಲದೆ, ಎಲ್ಲವೂ ಧನಾತ್ಮಕವಾಗಿಯೇ ಚರ್ಚೆಯಾಗಿದೆ ಎಂಬ ಸುಳಿವನ್ನು ಕೊಟ್ಟಿದ್ದರು.
ರಾಮುಲು ಪರ ಕೆಲಸ ಮಾಡಲು ಸೂಚನೆ?
ಜನಾರ್ದನ ರೆಡ್ಡಿ ಭೇಟಿ ವೇಳೆ ಚರ್ಚೆ ನಡೆಸಿದ ಗೃಹ ಸಚಿವ ಅಮಿತ್ ಶಾ, ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಪರ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಗೂ ಮೊದಲು ರೆಡ್ಡಿ – ರಾಮುಲು ಸ್ನೇಹ ಸಂಬಂಧ ಕಟ್ ಆಗಿತ್ತು. ಹೀಗಾಗಿ ಆ ಚುನಾವಣೆಯಲ್ಲಿ ರಾಮುಲು ಅವರನ್ನು ಸೋಲಿಸಲು ರೆಡ್ಡಿ ಪಣ ತೊಟಿದ್ದಲ್ಲದೆ, ಸಕ್ಸಸ್ ಆಗಿದ್ದರು. ಅಲ್ಲದೆ, ಈ ಲೋಕಸಭೆಗೂ ಕೆಲವು ಕಡೆ ತಮ್ಮ ಅಭ್ಯರ್ಥಿಗಳನ್ನು ಹಾಕುವುದಾಗಿ ಹೇಳಿದ್ದರು. ಆದರೆ, ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ. ಇದು ಬಿಜೆಪಿ ಹಾಗೂ ರಾಮುಲು ಆತಂಕಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Lok Sabha Election 2024: ಲೋಕಸಭೆಯಲ್ಲಿ ಬಿಜೆಪಿಗೆ ರೆಡ್ಡಿ ಸಪೋರ್ಟ್? ಅಮಿತ್ ಶಾ ಭೇಟಿ ಹಿಂದಿನ ರಹಸ್ಯವೇನು?
ಅಮಿತ್ ಶಾ ಚಾಣಕ್ಯ ನೀತಿ
ವಿಧಾನಸಭಾ ಅಧಿವೇಶನದಲ್ಲೂ ಬಿಜೆಪಿ ವಿರುದ್ಧ ಜನಾರ್ದನ ರೆಡ್ಡಿ ಗುಡುಗಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತವನ್ನು ಚಲಾವಣೆ ಮಾಡಿದ್ದರು. ಮೊನ್ನೆಯಷ್ಟೇ ಜನಾರ್ದನ ರೆಡ್ಡಿ ಸಹ ನಮ್ಮ ಜತೆ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಎರಡೇ ದಿನದಲ್ಲಿ ಒಟ್ಟಾರೆ ಚಿತ್ರಣವೇ ಬದಲಾವಣೆಯಾಗಿದೆ. ಇಲ್ಲಿ ಅಮಿತ್ ಶಾ ಚಾಣಕ್ಯ ನೀತಿ ಬಹಳವಾಗಿಯೇ ವರ್ಕೌಟ್ ಆದಂತೆ ಕಾಣುತ್ತಿದೆ. ಹೀಗಾಗಿ ಸ್ನೇಹಿತನ ಪರ ಕೆಲಸ ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರವೊಂದೇ ಬಾಕಿ ಇದೆ.