Site icon Vistara News

Lok Sabha Election 2024: ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದು ಎಚ್‌ಡಿಕೆ ಹೇಳಿಲ್ಲ; ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಆಕ್ರೋಶ

HD Revanna

HD Revanna Arrested: JDS Meeting Underway To Suspend Him From Party

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ತುಮಕೂರಿನ ತುರವೇಕೆರೆಯಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಪ್ರಚಾರ ಭಾಷಣ ಮಾಡುವ ವೇಳೆ ಆಡಿದ ಮಾತುಗಳು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. “ಗ್ಯಾರಂಟಿಯಿಂದ (Congress Guarantee Scheme) ಹಳ್ಳಿಯ ತಾಯಂದಿರು ದಾರಿ ತಪ್ಪುತ್ತಿದ್ದಾರೆ” ಎಂಬ ಎಚ್‌ಡಿಕೆ ಹೇಳಿಕೆ ರಾಜ್ಯದಲ್ಲಿ ಸಂಚಲವನ್ನು ಸೃಷ್ಟಿಸಿದೆ. ಆದರೆ, ಇದರ ಬಗ್ಗೆ ಈಗ ಜೆಡಿಎಸ್‌ (JDS Karnataka) ಆಕ್ರೋಶವನ್ನು ಹೊರಹಾಕಿದ್ದು, ಇದೊಂದು ಸುಳ್ಳು ಸುದ್ದಿ. ಇಂತಹ ಹೇಳಿಕೆಯನ್ನು ಕುಮಾರಸ್ವಾಮಿ ನೀಡುತ್ತಾರೆಯೇ ಎಂದು ಪ್ರಶ್ನೆ ಮಾಡಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಜೆಡಿಎಸ್‌, ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆನ್ನಲಾದ ಹೇಳಿಕೆ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ಕುಮಾರಸ್ವಾಮಿ ಅವರು ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದಾರೆ ಎಂದು ಹೇಳಿದೆ.

ಜೆಡಿಎಸ್‌ ಪೋಸ್ಟ್‌ನಲ್ಲೇನಿದೆ?

• “ಸತ್ಯವನ್ನು ವಕ್ರೀಕರಿಸುವುದು, ತಿರುಚುವುದು ಕಾಂಗ್ರೆಸ್‌ ಪಕ್ಷದ ಪುರಾತನ-ಪರಂಪರಾಗತ ಚಾಳಿ. 75 ವರ್ಷಗಳಿಂದ ಇದನ್ನೇ ಮಾಡಿಕೊಂಡು ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಆಳುತ್ತಿದೆ. ಈಸ್ಟ್ ಇಂಡಿಯಾ ಕಂಪನಿಯ ಆಧುನಿಕ ಅವತಾರವೇ ಕಾಂಗ್ರೆಸ್. ಜನರನ್ನು ರಣಹದ್ದಿನಂತೆ ಕಿತ್ತು ತಿನ್ನುತ್ತಿದೆ ಹಾಗೂ ಕರ್ನಾಟಕದಲ್ಲಿ ತನ್ನ ರಕ್ಕಸಭೋಜನ ಮುಂದುವರಿದಿದೆ.

• ತುರುವೇಕೆರೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದನ್ನು ಕಾಂಗ್ರೆಸ್ ಫೇಕ್ ಫ್ಯಾಕ್ಟರಿ ತಿರುಚಿ ಮೈ ಪರಚಿಕೊಳ್ಳುತ್ತಿದೆ. “ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ” ಎಂದು ಹಸಿಸುಳ್ಳು ಹಬ್ಬಿಸುತ್ತಿದೆ. ನೆನಪಿರಲಿ, ಇದೇ ಹಳ್ಳಿ ತಾಯಂದಿರ ಬದುಕಿಗೆ ನರಕವಾಗಿದ್ದ ಸಾರಾಯಿ, ಲಾಟರಿ ನಿಷೇಧ ಮಾಡಿ ಅವರ ಮಾಂಗಲ್ಯ ಉಳಿಸಿದ್ದು ಇದೇ ಕುಮಾರಣ್ಣ. ನಿತ್ಯನರಕವಾಗಿದ್ದ ಅವರ ಬದುಕಿಗೆ ಸಾಂತ್ವನ ಹೇಳಿದ್ದೂ ಇವರೇ. ವಿಧವಾ ಪಿಂಚಣಿಯನ್ನು ₹200 ರಿಂದ ₹400ಕ್ಕೆ ಹೆಚ್ಚಿಸಿ ಅವರಿಗೆ ಶಕ್ತಿ ತುಂಬಿದ್ದು ಕುಮಾರಣ್ಣ ಅಲ್ಲವೇ?

• 2018-19ರಲ್ಲಿ ಕಾಂಗ್ರೆಸ್‌ ಕರ್ನಾಟಕದ ವಿರೋಧ ಲೆಕ್ಕಿಸದೆ ರೈತರ 25,000 ಕೋಟಿ ರೂಪಾಯಿ ಸಾಲ ಮಾಡಿದ್ದು ಹಳ್ಳಿ ತಾಯಂದಿರ ಅಣ್ಣ ಇದೇ ಕುಮಾರಣ್ಣ. ಸಾಲ ಮನ್ನಾ ನಮ್ಮ ಕಾರ್ಯಕ್ರಮವೇ ಅಲ್ಲ. ನಮ್ಮ ಭಾಗ್ಯಗಳಿಗೆ ನಯಾಪೈಸೆ ಕಮ್ಮಿ ಆಗಂಗಿಲ್ಲ ಎಂದು ಟವೆಲ್ ಕೊಡವಿದ್ದು ಯಾರು ಕಾಂಗ್ರೆಸಿಗರೇ? ನಿಮಗೆ ನೆನಪಿಲ್ಲವೇ? ಇಂಥ ಕುಮಾರಣ್ಣ ತಾಯಂದಿರನ್ನು ಅಪಮಾನಿಸುತ್ತಾರೆಯೇ? ಸುಳ್ಳು ಹೇಳಿದರೆ ಜನ ನಂಬುತ್ತಾರೆಯೇ?

• ಕಾಂಗ್ರೆಸ್ ಮಾಡಿದ್ದೇನು? ಲಾಟರಿ ಕಿಂಗ್‌ಗಳಿಗೆ ರತ್ನಗಂಬಳಿ ಹಾಸಿ ಲೂಟಿ ಮಾಡಿದ್ದು, ಮನೆಮನೆಗೂ ಹಳ್ಳಿಹಳ್ಳಿಗೂ ಸಾರಾಯಿ ಸಮಾರಾಧನೆ ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಅಷ್ಟೇ ಏಕೆ? ಒಂದು ಕೈಯಲ್ಲಿ 2000 ರೂಪಾಯಿ ಕೊಟ್ಟು ಇನ್ನೊಂದು ಕೈಯಲ್ಲಿ ತಾಯಂದಿರ ಮನೆಗಳ ಪಕ್ಕದ ಕಿರಾಣಿ ಅಂಗಡಿಗಳಲ್ಲಿಯೇ ಮದ್ಯದ ಬಾಟಲಿ ಮಾರಾಟ ಮಾಡುತ್ತಿರುವುದು ಇದೇ ಢೋಂಗಿ ಗ್ಯಾರಂಟಿ ಕಾಂಗ್ರೆಸ್ ಸರ್ಕಾರ! ಇಲ್ಲ ಎನ್ನಲು ಅವರಿಗೆ ಧೈರ್ಯ, ನೈತಿಕತೆ ಇದೆಯೇ?

• ಸ್ವಚ್ಛ ಮನಸ್ಸಿನ ಹಳ್ಳಿಗಳಲ್ಲಿ ಸುಪ್ರಭಾತದ ವೇಳೆಗೆ ದೇವಾಲಯದ ಘಂಟೆನಾದ ಮೊಳಗುತ್ತಿತ್ತು. ಉಷೋದಯಕ್ಕೆ ಮೊದಲೇ ಹಳ್ಳಿಗೆ ಹಳ್ಳಿಯೇ ಮಂಗಳಕರವಾಗಿ ಕಂಗೊಳಿಸುತ್ತಿತ್ತು. ತಾಯಂದಿರು ಮನೆಗಳ ಮುಂದೆ ರಂಗೋಲಿ ಬಿಡಿಸುತ್ತಿದ್ದರೆ, ಪುರುಷರು ಹೊಲ-ತೋಟದ ಕೆಲಸಗಳಿಗೆ ಹೋಗುತ್ತಿದ್ದರು. ಗ್ಯಾರಂಟಿಗಳು ಬಂದ ಮೇಲೆ ಏನಾಗಿದೆ? ತಾಯಂದಿರು ರಂಗೋಲಿ ಬಿಡಿಸುವ ಮುನ್ನವೇ ಕಿರಾಣಿ ಅಂಗಡಿಗಳಲ್ಲಿ, ಹಾದಿಬೀದಿಗಳ ಬಾರ್‌ಗಳಲ್ಲಿ ಮದ್ಯದ ಘಾಟು ಹೊಡೆಯುತ್ತಿದೆ. ತಾಯಂದಿರ ಸಬಲೀಕರಣ, ಆರ್ಥಿಕ ಸ್ವಾತಂತ್ರ್ಯ, ಸ್ವಾಭಿಮಾನ ಎಂದರೆ ಸೂರ್ಯೋದಕ್ಕೆ ಮೊದಲೇ ಮದ್ಯ ಮಾರಾಟ ಮಾಡುವುದೇ?

• ಕಾಂಗ್ರೆಸ್ ದಾರಿದ್ರ್ಯ ಎಲ್ಲಿಗೆ ಬಂದು ನಿಂತಿದೆ ನೋಡಿ.. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮದ್ಯಪಾನಕ್ಕೆ ಭಾರಿ ಪ್ರೋತ್ಸಾಹ ಕೊಡುವುದು ‘ಕಾಂಗ್ರೆಸ್ ಪಕ್ಷದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ಆಗಿದೆ. ಶ್ರೀಗಂಧ, ಸುಗಂಧದ ನಾಡಾಗಿರುವ ಕರ್ನಾಟಕವನ್ನು ಮದ್ಯದ ಬೀಡನ್ನಾಗಿಸುತ್ತಿದೆ. ಇದನ್ನು ಪ್ರಶ್ನಿಸಿದರೆ ತಾಯಂದಿರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ ಹಾಗೆಯೇ?

ಇದನ್ನೂ ಓದಿ: Lok Sabha Election 2024: ಲೋಕಸಭಾ ಚುನಾವಣೆಗಾಗಿ ರಾಜ್ಯಕ್ಕೆ ಬಿ.ಎಲ್. ಸಂತೋಷ್ ಎಂಟ್ರಿ; ಇಂದು ಮಂಗಳೂರಲ್ಲಿ ಸಭೆ?

ಕುಮಾರಸ್ವಾಮಿ ಅವರು ಹೇಳಿದ್ದು.. ಗ್ಯಾರಂಟಿಗಳಿಂದ ತಾಯಂದಿರನ್ನು ದಿಕ್ಕು ತಪ್ಪಿಸುತ್ತಿದೆ ಎಂದು. ಉಚಿತ ಆರೋಗ್ಯ, ಉಚಿತ ಶಿಕ್ಷಣ ನೀಡುವ ಬದಲು ಅಗ್ಗದ ರಾಜಕೀಯ ಲಾಭ ಮಾಡಿಕೊಳ್ಳುತ್ತಿದೆ ಎಂದು. ಕಾಂಗ್ರೆಸ್ ತನ್ನ ಪಾಪಗಳನ್ನು ಮುಚ್ಚಿಟ್ಟುಕೊಳ್ಳಲು ಸತ್ಯಕ್ಕೆ ಸುಳ್ಳಿನ ಮುಖವಾಡ ಹಾಕುತ್ತಿದೆ. ನಿಜಕ್ಕಾದರೆ, ದಾರಿ ತಪ್ಪುತ್ತಿರುವುದು ರಾಜ್ಯದ ಆರ್ಥಿಕತೆ, ಕರ್ನಾಟಕದ ಹೆಗ್ಗಳಿಕೆ, ಕರ್ನಾಟಕ ಪ್ರತಿಷ್ಠೆ.

ಹೆಚ್ಚುತ್ತಿರುವುದು ತಾಯಂದಿರ ಮೇಲಿನ ಸಾಲ. ಈ ವರ್ಷ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಾಲ ಮಾಡುವ ಗುರಿ ಇಟ್ಟುಕೊಂಡಿದೆ ಈ ಸರ್ಕಾರ. ಆ ಸಾಲ ತೀರಿಸೋರು ಯಾರು? ಕಾಂಗ್ರೆಸ್ ತನ್ನ ಖಜಾನೆಯಿಂದ ತೀರಿಸುತ್ತದೆಯೇ?” ಎಂದು ಜೆಡಿಎಸ್‌ ಪ್ರಶ್ನೆ ಮಾಡಿದೆ.

Exit mobile version