Site icon Vistara News

Lok Sabha Election 2024: ಕೋಲಾರ ಸೇರಿ 3 ಕ್ಷೇತ್ರ ಜೆಡಿಎಸ್‌ಗೆ; ಬಿಜೆಪಿ ಅಧಿಕೃತ ಪ್ರಕಟಣೆ

BJP State Election Preparedness Workshop in Radha Mohandas Agarwal leadership

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿವೆ. ಕರ್ನಾಟಕದಲ್ಲಿ ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ (BJP Karnataka) ಹಾಗೂ ಕಾಂಗ್ರೆಸ್‌ನಿಂದ (Congress Karnataka) ಟಿಕೆಟ್‌ ಘೋಷಣೆ ಮಾಡಿಯಾಗಿದೆ. ಇನ್ನು ಬಾಕಿ ಕ್ಷೇತ್ರಗಳಿಗೆ ಘೋಷಣೆ ತಯಾರಿ ನಡೆಸಿವೆ. ಈ ನಡುವೆ ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್‌ಗೆ (JDS Karnataka) ರಾಜ್ಯದಲ್ಲಿ ಎಷ್ಟು ಸೀಟನ್ನು ಬಿಟ್ಟುಕೊಡಲಾಗಿದೆ ಎಂಬ ಬಗ್ಗೆ ಗೊಂದಲ ಮುಂದುವರಿದಿತ್ತು. ಈಗ ಅದಕ್ಕೆ ಬಿಜೆಪಿ ಕರ್ನಾಟಕ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌ (Radha Mohandas Agarwal) ತೆರೆ ಎಳೆದಿದ್ದಾರೆ. ಕೋಲಾರ (Kolar constituency) ಸೀಟ್‌ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದು, ಈ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಅರಮನೆ ಮೈದಾನದಲ್ಲಿ ಶನಿವಾರ ನಡೆಯುತ್ತಿರುವ ಬಿಜೆಪಿ ರಾಜ್ಯ ಚುನಾವಣಾ (Lok Sabha Election 2024) ಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿದ ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌, ಕೋಲಾರ ಸೀಟನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ. ರಾಜ್ಯದಲ್ಲಿ ಜೆಡಿಎಸ್‌‌ಗೆ ಒಟ್ಟು ಮೂರು ಸೀಟು ಬಿಟ್ಟು ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ಅಭ್ಯರ್ಥಿ ಆಯ್ಕೆಯಲ್ಲಿ ಹಸ್ತಕ್ಷೇಪವಿಲ್ಲ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮೈತ್ರಿ ಪಕ್ಷ ಜೆಡಿಎಸ್‌‌ಗೆ ಮೂರು ಸೀಟು ಬಿಟ್ಟು ಕೊಟ್ಟಿದ್ದೇವೆ. ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಿ. ಕೋಲಾರ, ಹಾಸನ, ಮಂಡ್ಯ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಪ್ರಧಾನಿ ನರೇಂದ್ರ ಮೋದಿಗಾಗಿ ಕೆಲಸ ಮಾಡಿ. ಮೂರು ಕ್ಷೇತ್ರದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ. ನಿಮ್ಮ ವೈಯಕ್ತಿಕ ಮುನಿಸು ಏನೇ ಇದ್ದರೂ ಅವುಗಳನ್ನು ಬಿಟ್ಟುಬಿಡಿ. ಬಿಜೆಪಿಯಿಂದ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. ಜೆಡಿಎಸ್‌ಗೆ ಮೂರು ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದೇವೆ. ಅಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ನಾವು ಹಸ್ತಕ್ಷೇಪ ಮಾಡಿಲ್ಲ. ಆದರೆ, ಒಟ್ಟಾಗಿ ಕೆಲಸ ಮಾಡಿ ಎಂದು ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌ ಕರೆ ನೀಡಿದರು.

ಉತ್ತರ ಪ್ರದೇಶದಲ್ಲೂ ಇರದ ಉತ್ಸಾಹಿ ಕಾರ್ಯಕರ್ತರು ಇಲ್ಲಿದ್ದಾರೆ

ಒಂದು ತಿಂಗಳಿಂದ‌ ಕರ್ನಾಟಕದಲ್ಲಿ ಇದ್ದೇನೆ. ನಾನು ಖುದ್ದಾಗಿ ರಾಜ್ಯ ಪ್ರವಾಸ ಮಾಡಿದ್ದೇನೆ. ರಾಜ್ಯದಲ್ಲಿ ಶ್ರಮ, ಉತ್ಸಾಹಿ, ಅನುಭವಿ ಕಾರ್ಯಕರ್ತರಿದ್ದಾರೆ. ಅವರ ಕೆಲಸ ನೋಡಿದರೆ, ಉತ್ತರ ಪ್ರದೇಶದಲ್ಲೂ ಇಂತಹ ಉತ್ಸಾಹಿ ಕಾರ್ಯಕರ್ತರಿಲ್ಲ. ಶಿವಮೊಗ್ಗ ರ‍್ಯಾಲಿ, ಕಲಬುರಗಿ ರ‍್ಯಾಲಿಯನ್ನು ನೋಡಿದೆ. ಎರಡು ದಿನದಲ್ಲಿ ಇಂತಹ ದೊಡ್ಡ ಮಟ್ಟದ ತಯಾರಿ ನಡೆದಿದೆ. ಈ ಚುನಾವಣೆಯಲ್ಲಿ (Lok Sabha Election 2024) ಪ್ರಧಾನಿ ನರೇಂದ್ರ ಮೋದಿ (PM Narendra Modi) ಪರವಾದ ಕೆಲಸ ನಡೆಯುತ್ತಿದೆ ಎಂದು ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌ ತಿಳಿಸಿದರು.

ಬಿಜೆಪಿ ರಾಜ್ಯ ಚುನಾವಣಾ ಸಿದ್ಧತಾ ಕಾರ್ಯಾಗಾರ

ಕಷ್ಟ-ನಷ್ಟಗಳನ್ನು ಬದಿಗಿಡಿ

ಬಿಜೆಪಿ ಕಾರ್ಯಕರ್ತರು ಒಂದೇ ಒಂದು ವಿಚಾರವನ್ನು ನೋಡಬೇಕು. ಈ ಚುನಾವಣೆಯಲ್ಲಿ (Lok Sabha Election 2024) ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದೇ ಗುರಿಯಾಗಿರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು. ನಮ್ಮ ನಡುವೆ ಏನೇ ಮನಸ್ಥಾಪಗಳಿದ್ದರೂ ಅದನ್ನು ನಿವಾರಿಸಿಕೊಳ್ಳಬೇಕು. ನಿಮಗೆ ಇಷ್ಟವೋ, ಇಲ್ಲವೋ, ಉದ್ದೇಶ ಇದೆಯೋ, ಇಲ್ಲವೋ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಒಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಬಿಜೆಪಿ ಮತ್ತು ಮೋದಿ ಗೆಲುವಿಗೆ ಕೆಲಸ ಮಾಡಬೇಕು ಎಂದು ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌ ಕರೆ ನೀಡಿದರು.

ಇದನ್ನೂ ಓದಿ: Lok Sabha Election 2024 : ಮೋದಿ ಜನಪ್ರಿಯತೆ ಉತ್ತುಂಗಕ್ಕೆ, ಮತ್ತೊಮ್ಮೆ ಸರ್ಕಾರ ಗ್ಯಾರಂಟಿ ಎಂದ ವಿಜಯೇಂದ್ರ

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್, ಪಿ. ರಾಜೀವ್, ಪ್ರೀತಮ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಕೇಶವ್ ಪ್ರಸಾದ್ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖರು, ಕ್ಲಸ್ಟರ್ ಪ್ರಮುಖರು, ಸಂಚಾಲಕರು, ಸಹ ಸಂಚಾಲಕರು ಭಾಗಿಯಾಗಿದ್ದಾರೆ.

Exit mobile version