ಶಿವಮೊಗ್ಗ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳಲ್ಲೂ ಈಗ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದೆ. ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ (Congress Karnataka) ತನ್ನ ಮೊದಲ ಪಟ್ಟಿಯಲ್ಲಿ ಏಳು ಮಂದಿಗೆ ಟಿಕೆಟ್ ನೀಡಿದೆ. ಬಿಜೆಪಿ ಇನ್ನು ಎರಡು – ಮೂರು ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನವ ದೆಹಲಿಯಲ್ಲಿ ಟಿಕೆಟ್‌ಗೆ ವಿಚಾರವಾಗಿ ಸರಣಿ ಸಭೆಗಳು ನಡೆಯುತ್ತಲಿದೆ. ಈ ನಡುವೆ ಹಾವೇರಿ ಲೋಕಸಭಾ ಕ್ಷೇತ್ರದ (Haveri Lok Sabha constituency) ಮೇಲೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಪುತ್ರ ಕೆ.ಇ. ಕಾಂತೇಶ್ ಕಣ್ಣಿಟ್ಟಿದ್ದಾರೆ. ಅವರಿಗೆ ಟಿಕೆಟ್ ನೀಡುವಂತೆ ಲಾಬಿ ಶುರುವಾಗಿದೆ. ಈ ಬಗ್ಗೆ ಈಗ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಮೇಲೆ ಒತ್ತಡ ಬರುತ್ತಿದ್ದು, ಅವರೂ ಸಹ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಜತೆ ನವ ದೆಹಲಿಗೆ ಈಶ್ವರಪ್ಪ ಅವರು ಬಂದರೆ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಬಹುದು ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.
ಈ ಬಗ್ಗೆ ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾಂತೇಶ್ ಬೆಂಬಲಿಗರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಅವರಿಗೆ ಹಾವೇರಿ ಲೋಕಸಭಾ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ. ಇದಕ್ಕೆ ಬಿಎಸ್‌ವೈ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಬಳಿಕ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಕಾಂತೇಶ್‌ಗೆ ಟಿಕೆಟ್ ಕೊಡಿಸುವ ಬಗ್ಗೆ ನಾನು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ದಯವಿಟ್ಟು ಈಶ್ವರಪ್ಪ ಅವರಿಗೆ ದೆಹಲಿಗೆ ಬರುವುದಕ್ಕೆ ಹೇಳಿ. ಅವರು ಅಲ್ಲಿಗೆ ಬಂದರೆ ಗೃಹ ಸಚಿವ ಅಮಿತ್ ಶಾ ಜತೆ ಮನವಿ ಮಾಡಿಕೊಳ್ಳಲು ಅನುಕೂಲ ಆಗುತ್ತದೆ. ಈಶ್ವರಪ್ಪ ಅವರ ಜತೆಗೆ ನಾನು ಇರುತ್ತೇನೆ. ನಿನ್ನೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಈಶ್ವರಪ್ಪ ಭೇಟಿ ಮಾಡಿದ್ದಾರೆ. ನಾನೇ ಅಲ್ಲಿಗೆ ಅವರನ್ನು ಕಳಿಸಿದ್ದೆ. ಈಶ್ವರಪ್ಪ ಬೇರೆ ಅಲ್ಲ, ನಾನು ಬೇರೆ ಅಲ್ಲ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳಿದರು.
ಕಾಲ ಮಿಂಚಿಲ್ಲ ಎಂದ ಬಿಎಸ್‌ವೈ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಚುನಾವಣೆ ಸಮಿತಿ ಸಭೆಯನ್ನು ಸೋಮವಾರ (ಮಾ. 11) ಮತ್ತೆ ಕರೆಯಬಹುದು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗಿಯಾಗಬಹುದು. ಹಾಗಾಗಿ ಒಂದು ದಿನ ಸಭೆಯನ್ನು ಮುಂದೂಡಿದ್ದಾರೆ. ನಾನು ಈಗ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Fraud Case : ಬ್ರಾಂಡೆಡ್ ಹೆಸರಲ್ಲಿ ನಕಲಿ ಡಿಟರ್ಜೆಂಟ್ ಪೌಡರ್‌ಗಳ ಮಾರಾಟ! ಕಳ್ಳಾಟ ಬಯಲು ಮಾಡಿದ ಪೊಲೀಸರು
ಬನ್ನಿ ಈಶ್ವರಪ್ಪನವರೇ
ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಬಿಜೆಪಿ ಟಿಕೆಟ್ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ. ಈಗಲೂ ಕಾಲ ಮಿಂಚಿಲ್ಲ, ಅವರು ನನ್ನ ಜತೆ ಬಂದರೆ ದೆಹಲಿಗೆ ಕರೆದುಕೊಂಡು ಹೋಗುತ್ತೇನೆ. ಅಮಿತ್ ಶಾ ಜತೆ ಮಾತನಾಡಿಸುತ್ತೇನೆ. ಸೀಟ್ ಕೊಡಿಸಲು ನನ್ನಿಂದ ಆಗುವ ಎಲ್ಲ ಪ್ರಯತ್ನ ಮಾಡುತ್ತೇನೆ. ಎಲ್ಲ ರೀತಿಯ ಪ್ರಯತ್ನ ಮಾಡಲು ನಾನು ಸಿದ್ಧ ಇದ್ದೇನೆ. ಈಶ್ವರಪ್ಪ ಬಂದರೆ ಜತೆಗೆ ಕರೆದುಕೊಂಡು ಮಾತನಾಡಬಹುದು. ನಿಮ್ಮ (ಮಾಧ್ಯಮಗಳ) ಮೂಲಕ ಅವರಿಗೆ ಮನವಿ ಮಾಡ್ತೇನೆ. ದಯವಿಟ್ಟು ಬನ್ನಿ ಈಶ್ವರಪ್ಪನವರೇ ದೆಹಲಿಗೆ ಹೋಗೋಣ ಎಂದು ಹೇಳಿದರು.