Site icon Vistara News

Lok Sabha Election 2024: ವಿಧಾನ ಪರಿಷತ್‌ಗೆ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್‌: ಸುಳಿವು ಕೊಟ್ಟ ಬಿಎಸ್‌ವೈ

KS Eshwarappa Shivamogga

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಿಂದ (Haveri Lok Sabha constituency) ಪುತ್ರ ಕೆ.ಇ. ಕಾಂತೇಶ್‌ಗೆ (KE Kantesh) ಟಿಕೆಟ್‌ ಮಿಸ್‌ ಆಗಿದ್ದರಿಂದ ಈಗ ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ (KS Eshwarappa) ಕೆಂಡವಾಗಿದ್ದಾರೆ. ಪಕ್ಷದ ವರಿಷ್ಠರ ನಿರ್ಧಾರ ಹಾಗೂ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಈಗ ಅವರ ಶಮನ ಕಾರ್ಯಕ್ಕೆ ಬಿಜೆಪಿ ಮುಂದಾಗುತ್ತಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ, ಕಾಂತೇಶ್‌ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಸುಳಿವನ್ನು ನೀಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯತಂತ್ರ ಚುರುಕುಗೊಂಡಿದೆ. ಈ ಬಾರಿ ಶತಾಯಗತಾಯ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿದೆ. ಅಲ್ಲದೆ, ತನ್ನ ಪಾಲಿನ ಕ್ಷೇತ್ರಗಳಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಅಳೆದೂ ತೂಗಿ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲದೆ, 8 ಹಾಲಿ ಸಂಸದರನ್ನು ಬದಲಾವಣೆ ಮಾಡಿದೆ. ಈ ವೇಳೆ ಹಾವೇರಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಕೆ.ಎಸ್.‌ ಈಶ್ವರಪ್ಪ ಅವರಿಗೆ ನಿರಾಸೆಯಾಗಿತ್ತು. ಇದರಿಂದ ಅವರು ರೊಚ್ಚಿಗೆದ್ದು, ಬಿಎಸ್‌ವೈ ವಿರುದ್ಧ ಸಮರ ಸಾರಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ನಿಲ್ಲುವ ಬೆದರಿಕೆಯನ್ನೂ ಒಡ್ಡಿದ್ದರು. ಈಗ ಬಿ.ಎಸ್.‌ ಯಡಿಯೂರಪ್ಪ ಅವರು ಖುದ್ದು ತಾವೇ ಈಶ್ವರಪ್ಪ ಅವರ ಜತೆ ಮಾತನಾಡುವುದಾಗಿ ಹೇಳಿದ್ದಾರೆ.

ಯಡಿಯೂರಪ್ಪ ಹೇಳಿದ್ದೇನು?

ಟಿಕೆಟ್ ಕೊಡುವ ವಿಚಾರದಲ್ಲಿ ಬಿ.ಎಸ್.‌ ಯಡಿಯೂರಪ್ಪ ಅವರು ನುಡಿದಂತೆ ನಡೆದುಕೊಳ್ಳಲಿಲ್ಲ ಎಂದು ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ, ಈಶ್ವರಪ್ಪ ಅವರ ಜತೆ ಮಾತನಾಡುತ್ತೇನೆ. ಅಲ್ಲದೆ, ಹೈಕಮಾಂಡ್ ನಾಯಕರು ಸಹ ಮಾತನಾಡಲಿದ್ದಾರೆ. ಅವರ ಮಗನನ್ನು ಎಂಎಲ್‌ಸಿ ಮಾಡಲಿದ್ದಾರೆ ಎಂದು ಹೇಳಿದರು. ಈ ಮೂಲಕ ಕಾಂತೇಶ್‌ಗೆ ಎಂಎಲ್‌ಸಿ ಮಾಡುವ ಸುಳಿವನ್ನು ಯಡಿಯೂರಪ್ಪ ನೀಡಿದ್ದಾರೆ.

ಇದನ್ನೂ ಓದಿ: ‌Lok Sabha Election 2024: ಪ್ರತಾಪ್‌ ಸಿಂಹ, ಕರಡಿ, ಡಿವಿಎಸ್‌ಗೆ ಕಾಂಗ್ರೆಸ್‌ನಿಂದ ಟಿಕೆಟ್‌? ಏನಿದು ಡಿಕೆಶಿ ಪ್ಲ್ಯಾನ್?

ಯದುವೀರ್‌ ಸ್ಪರ್ಧೆಯಿಂದ ಏನು ಲಾಭ ಎಂದು ವಿವರಿಸಿದ ಬಿಎಸ್‌ವೈ

ಮೈಸೂರು ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್‌ ಸಿಂಹ ಬದಲಾಗಿ ಮಹಾರಾಜ ಯದುವೀರ್‌ ಒಡೆಯರ್‌ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿಗೆ ಏನು ಲಾಭ ಎಂಬ ಬಗ್ಗೆ ಬಿ.ಎಸ್.‌ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಯದುವೀರ್‌ ಅವರದ್ದು ಮೈಸೂರಿನ ರಾಜಕುಟುಂಬವಾಗಿದೆ. ಅವರನ್ನು ಮೈಸೂರು -ಕೊಡುಗು ಕ್ಷೇತ್ರದ ಅಭ್ಯರ್ಥಿಯನ್ನಾಗಿ ತೀರ್ಮಾನ ಮಾಡಲಾಗಿದೆ. ಇದರಿಂದ ಆರೇಳು ಕ್ಷೇತ್ರಗಳಿಗೆ ಅನುಕೂಲ ಆಗುವ ವಿಶ್ವಾಸ ಇದೆ. ನಾವು ರಾಜ್ಯದಲ್ಲಿ ಕನಿಷ್ಠ 25 – 26 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಗುರಿಯನ್ನು ಇಟ್ಟುಕೊಂಡಿದ್ದೇವೆ. ಅದಕ್ಕೆ ಪಕ್ಷದ ಹಾಗೂ ವೈಯಕ್ತಿಕವಾಗಿ ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

Exit mobile version