ತಿರುವನಂತಪುರಂ: ಲೋಕಸಭಾ ಚುನಾವಣೆಯ (Lok Sabha Election 2024) ಕಾವು ಹೆಚ್ಚಾಗುತ್ತಿದ್ದಂತೆ ವೈಯಕ್ತಿಕ ಟೀಕೆಯೂ ಹದ್ದು ಮೀರುತ್ತಿದೆ. ಇದೀಗ ಕೇರಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಸಿಪಿಎಂ ಬೆಂಬಲಿತ ಸ್ವತಂತ್ರ ಶಾಸಕ ಪಿ.ವಿ.ಅನ್ವರ್ (PV Anwar) ಆಡಿರುವ ಲೇವಡಿಯ ಮಾತು ಭಾರೀ ವಿವಾದ ಸೃಷ್ಟಿಸಿದೆ. ʼʼನೆಹರೂ ವಂಶಸ್ಥರಿಂದ ನಿರೀಕ್ಷಿಸುವ ಗುಣಮಟ್ಟವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಅವರ ಡಿಎನ್‌ಎಯನ್ನು ಪರೀಕ್ಷಿಸಬೇಕುʼʼ ಎಂದು ಪಿ.ವಿ.ಅನ್ವರ್ ಹೇಳಿದ್ದಾರೆ.
ಪಾಲಕ್ಕಾಡ್‌ನಲ್ಲಿ ಸಿಪಿಐ(ಎಂ) ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪಿ.ವಿ.ಅನ್ವರ್, ”ರಾಹುಲ್ ಗಾಂಧಿ ಅವರು ಗಾಂಧಿ ಎಂಬ ಸರ್‌ನೇಮ್ ಅನ್ನೂ ಬಳಸಲಾಗದ ನಾಲ್ಕನೇ ದರ್ಜೆಯ ವ್ಯಕ್ತಿ. ನೆಹರೂ ವಂಶದ ವ್ಯಕ್ತಿಗೆ ಈ ರೀತಿ ಮಾತನಾಡಲು ಸಾಧ್ಯವೇ? ಆ ವಿಚಾರದಲ್ಲಿ ನನಗೆ ಸಂಶಯವಿದೆʼʼ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ. “ನಾನು ರಾಹುಲ್ ಗಾಂಧಿ ಅವರ ಕ್ಷೇತ್ರವಾದ ವಯನಾಡ್‌ನ ಭಾಗವಾಗಿದ್ದೇನೆ. ನಾನು ಅವರನ್ನು ಗಾಂಧಿ ಎಂಬ ಉಪನಾಮದಿಂದ ಕರೆಯಲು ಸಾಧ್ಯವಿಲ್ಲ. ಅವರು ಗಾಂಧಿ ಉಪನಾಮದಿಂದ ಕರೆಯಲು ಅರ್ಹರಲ್ಲದ ನಾಗರಿಕನಾಗಿ ಮಾರ್ಪಟ್ಟಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ. ಕಳೆದ ಎರಡು ದಿನಗಳಿಂದ ಭಾರತದ ಜನರು ಇದನ್ನು ಹೇಳುತ್ತಿದ್ದಾರೆʼʼ ಎಂದು ನಿಲಂಬೂರು ಕ್ಷೇತ್ರದ ಶಾಸಕ ಅನ್ವರ್ ಹೇಳಿದ್ದಾರೆ.
Palakkad, Kerala | On Congress leader Rahul Gandhi, Independent MLA PV Anwar yesterday said, "I am part of the Wayanad Parliament constituency, Rahul Gandhi's constituency. He has turned into such a low-level citizen who does not deserve to be called by the surname of Gandhi. I… pic.twitter.com/oYnHQpR2io
— ANI (@ANI) April 23, 2024
ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ಮತನಾಡಿ, ʼʼಪಿಣರಾಯಿ ವಿಜಯನ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದರೂ, ಕೇಂದ್ರ ಏಜೆನ್ಸಿಗಳು ಅವರನ್ನು ಏಕೆ ವಿಚಾರಣೆ ನಡೆಸುತ್ತಿಲ್ಲ?ʼʼ ಎಂದು ಪ್ರಶ್ನಿಸಿದ್ದರು. ಇದರಿಂದ ಕೆರಳಿದ ಅನ್ವರ್ ಈ ರೀತಿ ವೈಕ್ತಿಕ ತೇಜೋವಧೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನಿಂದ ಖಂಡನೆ
ಸದ್ಯ ಅನ್ವರ್ ಹೇಳಿಕೆ ಕೋಲಾಹಲ ಎಬ್ಬಿಸಿದೆ. ಅವರ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು, ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸಿಪಿಎಂ ಹಾಗೂ ಬೆಂಬಲಿತ ನಾಯಕರು ರಾಹುಲ್ ಗಾಂಧಿ ಅವರ ವಿರುದ್ಧ ವೈಯಕ್ತಿಕ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಜನರು ಉತ್ತರ ನೀಡಲಿದ್ದಾರೆ ಎಂದಿದೆ.
ರಾಜ್ಯ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಎಂ.ಎಂ.ಹಸನ್ ಮಾತನಾಡಿ, ʼʼಅನ್ವರ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ. “ಪಿ.ವಿ.ಅನ್ವರ್ ಗೋಡ್ಸೆಯ ಹೊಸ ಅವತಾರ. ಗಾಂಧೀಜಿಯನ್ನು ಕೊಂದ ಗೋಡ್ಸೆಯ ಗುಂಡುಗಳಿಗಿಂತ ಅನ್ವರ್ ಅವರ ಮಾತುಗಳು ಮಾರಕವಾಗಿವೆ. ಅನ್ವರ್ ಅವರು ಜನಪ್ರತಿನಿಧಿಯೊಬ್ಬರು ಆಡಬಾರದ ಮಾತುಗಳನ್ನು ಆಡಿದ್ದಾರೆʼʼ ಎಂದು ಹೇಳಿದ್ದಾರೆ.
ʼʼರಾಹುಲ್ ಗಾಂಧಿಯನ್ನು ನಿರಂತರವಾಗಿ ಟೀಕಿಸುತ್ತಿರುವ ಪಿಣರಾಯಿ ವಿಜಯನ್ ಅವರು ಇದೀಗ ಪಿ.ವಿ.ಅನ್ವರ್ ಅವರನ್ನು ಕಾಂಗ್ರೆಸ್ ವಿರುದ್ಧ ಮಾತನಾಡುವಂತೆ ತಯಾರು ಮಾಡಿದ್ದಾರೆ. ಅನ್ವರ್ ಮುಖ್ಯಮಂತ್ರಿಯ ಆತ್ಮಹತ್ಯಾ ದಳವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹಸನ್ ಟೀಕಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ
ಇತ್ತ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ಗಂಭೀರ ರಾಜಕಾರಣಿ ಅಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.