Site icon Vistara News

Lok Sabha Election 2024: ಕೋಲಾರ ಕಾಂಗ್ರೆಸ್‌ ಗಲಾಟೆಗೆ ಸಿಎಂ, ಡಿಸಿಎಂ ಟ್ರೀಟ್ಮೆಂಟ್‌! ತಣ್ಣಗಾದ ರಮೇಶ್‌ ಕುಮಾರ್‌, ಮುನಿಯಪ್ಪ ಬಣ

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಕಾಂಗ್ರೆಸ್‌ಗೆ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಅದರಲ್ಲಿ ಬಹುಮುಖ್ಯವಾಗಿ ಕೋಲಾರ ಲೋಕಸಭೆ ಕ್ಷೇತ್ರ (Kolar Lok Sabha constituency) ಹಾಗೂ ಪಕ್ಕದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ತಲೆನೋವು ತಂದಿದೆ. ಎರಡೂ ಕ್ಷೇತ್ರಗಳಲ್ಲಿ ಬಣ ರಾಜಕೀಯ ಜೋರಾಗಿಯೇ ಇದೆ. ಕೋಲಾರದಲ್ಲಿ ಕೆ.ಎಚ್.‌ ಮುನಿಯಪ್ಪ (K.H. Muniyappa) ಅವರ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಒಲವು ತೋರಿದೆ ಎಂದು ಮಾಜಿ ಸಚಿವ ರಮೇಶ್ ಕುಮಾರ್ (Ramesh Kumar) ಟೀಮ್ ಕೆರಳಿತ್ತು. ಆದರೆ, ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದು ಎರಡೂ ಬಣದ ನಾಯಕರು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸಭೆ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಬೈರತಿ ಸುರೇಶ್‌, ಕೋಲಾರದ ಸಮಸ್ಯೆ ಬಗೆಹರಿದಿದೆ. ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಹೈಕಮಾಂಡ್‌ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂದು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾವು ಬದ್ಧ‌ ಎಂದು ರಮೇಶ್‌ ಕುಮಾರ್‌ ಬಣ ಹಾಗೂ ಕೆ.ಎಚ್.‌ ಮುನಿಯಪ್ಪ ಅವರ ಬಣ ಒಪ್ಪಿಕೊಂಡಿದೆ ಎಂದು ಹೇಳಿದರು.

ರಾಜೀನಾಮೆ ಕೊಡುವ ಹಂತಕ್ಕೆ ಹೋಗಿದ್ದ ಕೋಲಾರ ಗಲಾಟೆ

ಇದು ಸಹಿತ ದಲಿತ ಎಡಗೈ ಸಮುದಾಯಕ್ಕೇ ಟಿಕೆಟ್‌ ನೀಡುವುದನ್ನು ವಿರೋಧಿಸಿ ರಾಜೀನಾಮೆ ನೀಡುವ ಹಂತಕ್ಕೂ ಹೋಗಿತ್ತು. ಈಗ ಒಂದು ಹಂತ ಕೆಳಕ್ಕೆ ಇಳಿಯಲು ಮುಂದಾಗಿರುವ ಈ ಬಣವು ಎಡಗೈ ಸಮುದಾಯಕ್ಕೆ ಟಿಕೆಟ್‌ ಕೊಟ್ಟರೂ ಸರಿ. ಕೆ.ಎಚ್‌. ಮುನಿಯಪ್ಪ ಅವರ ಕುಟುಂಬಕ್ಕೆ ಬೇಡ ಎಂದು ಪಟ್ಟು ಹಿಡಿದು ಕುಳಿತಿತ್ತು. ಮುನಿಯಪ್ಪ ಸಹ ತಾವು ಹೇಳಿದವರಿಗೇ ಬೇಕು ಎಂದು ಕುಳಿತಿದ್ದಾರೆ. ಈ ಸಂಬಂಧ ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸಂಧಾನ ಸಭೆಯನ್ನು ನಡೆಸಲಾಗಿದ್ದು, ಯಶಸ್ವಿಯಾಗಿದೆ.

Lok Sabha Election 2024 Kolar Congress Dilemma Resolved CM DCM mediation meeting Success

ಡಿಕೆಶಿ ಗುಡುಗಿಗೆ ಬೆದರಿದರೇ?

ಗುರುವಾರ ಬೆಳಗ್ಗೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಪಕ್ಷ ಯಾರಿಗೆ ಟಿಕೆಟ್‌ ಕೊಡುತ್ತದೆಯೋ ಅದನ್ನು ಒಪ್ಪಿಕೊಂಡು ಕೆಲಸ ಮಾಡಬೇಕು ಎಂದು ಖಡಕ್‌ ಸಂದೇಶವನ್ನು ರವಾನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್‌ ಕುಮಾರ್‌ ಬಣವು ನಿಲುವು ಬದಲು ಮಾಡಿದ್ದು, ಕೆ.ಎಚ್. ಮುನಿಯಪ್ಪ ಫ್ಯಾಮಿಲಿಗೆ ಬಿಟ್ಟು ಬೇರೆ ಯಾರಿಗೆ ಬೇಕಿದ್ದರೂ ಕೊಡಿ. ದಲಿತ ಎಡಗೈ ಸಮುದಾಯಕ್ಕೆ ಕೊಟ್ಟರೂ ಸರಿ, ಬಲಗೈ ಸಮುದಾಯಕ್ಕಾದರೂ ಸರಿ ಎಂದು ಪಟ್ಟು ಹಿಡಿದು ಕುಳಿತಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮುಂದೆ ಹೇಳಿತ್ತು.

ಸಿಎಂ ಕಾರಿನಲ್ಲೂ ಸಭೆ!

ಇನ್ನು ಕೋಲಾರ ರಾಜಕೀಯ ಕಗ್ಗಂಟು ವಿಚಾರದ ಬಗ್ಗೆ ಚರ್ಚೆ ಮಾಡುವ ಸಂಬಂಧ ಸಚಿವ ಎಂ ಸಿ ಸುಧಾಕರ್ ಮತ್ತು ಕೊತ್ತನೂರು ಮಂಜುನಾಥ್ ಅವರು ರಾಮನಗರಕ್ಕೆ ಬಂದಿದ್ದರು. ಅಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಡಿ.ಕೆ. ಸುರೇಶ್‌ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಆ ಕಾರ್ಯಕ್ರಮ ಮುಗಿದ ಕೂಡಲೇ ಸಿಎಂ ಅವರನ್ನು ಉಭಯ ನಾಯಕರು ಭೇಟಿ ಮಾಡಿದ್ದಾರೆ. ಆಗ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಸಿಎಂ ಸಿದ್ದರಾಮಯ್ಯ ಅವರು ಈ ಇಬ್ಬರನ್ನೂ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದರು.

ಆಗ ಸಚಿವ ಎಂ ಸಿ ಸುಧಾಕರ್ ಮತ್ತು ಕೊತ್ತನೂರು ಮಂಜುನಾಥ್ ಅವರು ರಾಮನಗರದಿಂದ ಬೆಂಗಳೂರಿನವರೆಗೂ ಸಿಎಂಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮುನಿಯಪ್ಪ ಸೂಚಿಸಿದವರಿಗೆ ಮಾತ್ರ ಟಿಕೆಟ್ ಕೊಡಬಾರದು ಎಂದು ಸಿಎಂಗೆ ಹೇಳಿದ್ದಾರೆ. ಕಳೆದ ಚುನಾವಣೆಗಳಲ್ಲಿ ಮುನಿಯಪ್ಪ ಮಾಡಿದ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಅಲ್ಲಿನ ನಾಯಕರನ್ನು ಕೂರಿಸಿ ಇಂದು ಮಾತನಾಡುತ್ತೇನೆ. ಇಲ್ಲಿ ಯಾರೂ ನಾಟಕ ಮಾಡುತ್ತಿಲ್ಲ. ಒಂದೊಂದು ಬಣದವರು ಒಂದೊಂದು ರೀತಿ ಹೇಳಿಕೆಯನ್ನು ಕೊಡುತ್ತಿದ್ದಾರೆ. ಕೋಲಾರ ಸಮಸ್ಯೆ ಸಹ ಬಗೆಹರಿಯುತ್ತದೆ ಎಂದು ಹೇಳಿದ್ದರು.

ಬಿಜೆಪಿಗೆ ಪರಿಣಾಮ ಬೀರಲ್ಲವಾ?

10 ಹಾಲಿ ಸಂಸದರಿಗೆ ಬಿಜೆಪಿಯಲ್ಲಿ ಟಿಕೆಟ್ ಕೊಟ್ಟಿಲ್ಲ. ಹಾಗಾದರೆ ಅದು ಪರಿಣಾಮ ಬೀರಲ್ಲವಾ? ನಮ್ಮಲ್ಲಿ ಮಾತ್ರ ಪರಿಣಾಮ ಬೀರುತ್ತಾ? ಜಿಲ್ಲೆಯವರ ಅಭಿಪ್ರಾಯ ಕೇಳಿ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

ಯಾರಿಗೆ ಟಿಕೆಟ್‌ ಕೊಡಬೇಕೆಂದು ನಮಗೆ ಗೊತ್ತು

ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿ, ಕೋಲಾರದ ನಾಯಕರು ಯಾರಿಗೋ ಟಿಕೆಟ್‌ ಕೊಡಲಾಗಿದೆ ಎಂದು ಕಲ್ಪನೆ ಮಾಡಿಕೊಂಡು ಗಾಬರಿ ಮಾಡಿಕೊಂಡಿದ್ದಾರೆ. ಎಲ್ಲರೂ ಪಾರ್ಟಿ ಲೈನ್‌ನಲ್ಲಿ ಇರಬೇಕು. ಯಾರಿಗೆ ಟಿಕೆಟ್ ಕೊಡಬೇಕು ಎಂದು ನಮಗೆ ಗೊತ್ತಿದೆ. ಮುನಿಯಪ್ಪ‌ ಅವರು ಹಿರಿಯರು ಇದ್ದಾರೆ. ಅವರ ಅಭಿಪ್ರಾಯ ಪಡೆಯುತ್ತೇವೆ. ಅಲ್ಲಿಯ ಶಾಸಕರ ಅಭಿಪ್ರಾಯವನ್ನೂ ಪಡೆಯುತ್ತೇವೆ ಎಂದು ಹೇಳಿದ್ದರು.

ಈ ಬಗ್ಗೆ ಸಚಿವ ಕೆ.ಎಚ್.‌ ಮುನಿಯಪ್ಪ ಪ್ರತಿಕ್ರಿಯೆ ನೀಡಿ, ರಾಜೀನಾಮೆ ಕೊಡುವ ಡ್ರಾಮಾ ಶುರುವಾಗಿದೆ ಅಷ್ಟೇ. ಇದೊಂದು ಆಶ್ಚರ್ಯಕರ ಬೆಳವಣಿಗೆಯಾಗಿದೆ. ಯಾರೂ ರಾಜೀನಾಮೆ ಕೊಡಲ್ಲ. ಮುನಿಯಪ್ಪಗೆ ಟಿಕೆಟ್ ಕೊಟ್ಟರೆ ಗೆದ್ದುಕೊಂಡು ಬರ್ತಾರೆ ಅನ್ನೋ ಭಯ. ನಾನು ಯಾರ ಕೆಲಸಕ್ಕೂ ಅಡ್ಡ ಹೋಗಿಲ್ಲ, ನಾನಾಯ್ತು ನನ್ನ ಕೆಲಸ ಆಯ್ತು ಅಷ್ಟೇ. ಯಾರು ಏನೇನು ಮಾಡಿದ್ದಾರೋ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಿಳಿದುಕೊಳ್ತಾರೆ ಎಂದು ಹೇಳಿದ್ದರು.

ಚಿಕ್ಕಬಳ್ಳಾಪುರದಲ್ಲೂ ಬಂಡಾಯ ಬಿಸಿ

ಕಾಂಗ್ರೆಸ್‌ ಪಕ್ಷಕ್ಕೆ ಕೋಲಾರದೊಂದಿಗೆ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ಕೂಡ ಒತ್ತಡ ಸೃಷ್ಟಿಸಿದೆ. ರಕ್ಷಾ ರಾಮಯ್ಯ ಮತ್ತು ಶಿವಶಂಕರ ರೆಡ್ಡಿ ನಡುವೆ ಟಿಕೆಟ್‌ಗಾಗಿ ಕಾದಾಟವಿದೆ. ಈ ನಡುವೆ ಮಾಜಿ ಸಿಎಂ ವೀರಪ್ಪ ಮೊಯಿಲಿ ಕೂಡ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರದ ಮಾಜಿ ಸಂಸದರೂ ಆದ ಮೊಯಿಲಿ ತಮಗೇ ಟಿಕೆಟ್‌ ನೀಡುವಂತೆ ದಿಲ್ಲಿಯಲ್ಲಿ ಸೋನಿಯಾ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ರಕ್ಷಾ ರಾಮಯ್ಯ ಅವರಿಗೆ ಚುನಾವಣೆ ಗೆಲ್ಲುವ ಶಕ್ತಿ ಇಲ್ಲ. ಹೀಗಾಗಿ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಟಿಕೆಟ್ ಕೊಡಬೇಡಿ. ಜಿಲ್ಲಾ ಸಮಿತಿ ಕಳುಹಿಸಿದ ವೀರಪ್ಪ ಮೊಯ್ಲಿ ಇಲ್ಲವೇ, ಶಿವಶಂಕರರೆಡ್ಡಿ ಹೆಸರು ಅಂತಿಮ ಮಾಡುವಂತೆ ಸ್ಥಳೀಯ ನಾಯಕರು ಒತ್ತಾಯಿಸಿದ್ದಾರೆ.

ಆದರೆ, ಹೈಕಮಾಂಡ್‌ ಈಗಾಗಲೇ ರಕ್ಷಾ ರಾಮಯ್ಯ ಹೆಸರು ಅಂತಿಮ ಮಾಡಿದೆ. ಅಧಿಕೃತ ಘೋಷಣೆ ಒಂದೇ ಬಾಕಿಯಾಗಿದೆ. ಆದರೆ ಇದನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಪತ್ರ ಬರೆದಿದ್ದು, ನಿಮ್ಮ ನಿರ್ಧಾರ ಪುನರ್ ಪರಿಶೀಲನೆ ಮಾಡಿ ಎಂದಿದ್ದಾರೆ. ತಮ್ಮ ಮನವಿಗೆ ಮಣಿಯದಿದ್ದರೆ ಕೋಲಾರದ ಮಾದರಿಯಲ್ಲಿ ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದೂ ಹೇಳಿದ್ದಾರೆ.

ಶಿವಶಂಕರ ರೆಡ್ಡಿ ಏನು ಹೇಳುತ್ತಾರೆ?

ವಿಸ್ತಾರ ನ್ಯೂಸ್‌ಗೆ ಶಿವಶಂಕರರೆಡ್ಡಿ ಪ್ರತಿಕ್ರಿಯೆ ನೀಡಿ, ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಜಿಲ್ಲಾ ಸಮಿತಿ ಶಿಫಾರಸು ಮಾಡುವಾಗ ನನ್ನ ಹೆಸರು ಕಳಿಸಿದ್ದಾರೆ. ನನ್ನ ಮತ್ತು ವೀರಪ್ಪ ಮೊಯ್ಲಿ ಹೆಸರನ್ನು ಶಿಫಾರಸು ಮಾಡಿದ್ದರು. ವೀರಪ್ಪ ಮೊಯ್ಲಿ ಅವರು ವಯಸ್ಸು ಆಗಿದೆ ಅಂತ ಹಿಂದೆ ಸರಿದಿದ್ದಾರೆ. ಹೀಗಾಗಿ ನಾನು ಆಕಾಂಕ್ಷಿ ಅಂತ ಹೇಳಿದ್ದೇನೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೂ ಹೇಳಿದ್ದೇನೆ. ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್‌ ನೀಡಿದ್ದಾರೆ. ಕಾಂಗ್ರೆಸ್‌ನಲ್ಲೂ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಬಿಜೆಪಿಗೆ ಲಾಭವಾಗುತ್ತದೆ. ಎರಡು ಬಿರಿಯಾನಿ ಹಂಚಿದರೆ ಸಂಘಟನೆ ಆಗಲ್ಲ ಎಂದು ರಕ್ಷಾ ರಾಮಯ್ಯ ಅವರಿಗೆ ಪರೋಕ್ಷ ಟಾಂಗ್‌ ನೀಡಿದ್ದಾರೆ.

ನಮ್ಮನ್ನು ಪಕ್ಷ ಪರಿಗಣಿಸಿದರೆ ನಾವು ಪಕ್ಷದಲ್ಲಿ ಇರುತ್ತೇವೆ. ಹಣಬಲ ಮಾತ್ರ ಅಂದರೆ ನಮ್ಮ ಜನಬಲದ ಶಕ್ತಿ ತೋರಿಸಬೇಕಾಗುತ್ತದೆ. ಒಕ್ಕಲಿಗ ಸಮುದಾಯಕ್ಕೆ ಬಿಟ್ಟು ಬೇರೆ ಸಮುದಾಯಕ್ಕೆ ಟಿಕೆಟ್ ಕೊಟ್ಟರೆ ಗೆಲ್ಲೋದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾನು ಪಕ್ಷದಲ್ಲಿ ಇರಲ್ಲ ಎಂದು ಶಿವಶಂಕರ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

Exit mobile version