ನವ ದೆಹಲಿ/ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಸಮರ ಜೋರಾಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಪಕ್ಷಗಳು ಹೋರಾಟಕ್ಕೆ ಅಣಿಯಾಗಿವೆ. ಕಾಂಗ್ರೆಸ್ ಸಹ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಮೈತ್ರಿ ಪಕ್ಷಗಳಲ್ಲಿ ಸೀಟು ಹಂಚಿಕೆಯಾಗಿದ್ದು, ಕೋಲಾರ ಲೋಕಸಭಾ ಕ್ಷೇತ್ರವು (Kolara Lok Sabha Constituency) ಜೆಡಿಎಸ್ ಪಾಲಾಗಿದ್ದರಿಂದ ಹಾಲಿ ಸಂಸದ ಮುನಿಸ್ವಾಮಿಗೆ ಭಾರಿ ನಿರಾಸೆಯಾಗಿದೆ. ಅವರು ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರನ್ನು ಭೇಟಿಯಾಗಿ ತಮ್ಮ ರಿಪೋರ್ಟ್ ಕಾರ್ಡ್ ನೀಡಿದ್ದಾರೆ. ಅಲ್ಲದೆ, ಕೋಲಾರ ಲೋಕಸಭಾ ಕ್ಷೇತ್ರವು ಬಿಜೆಪಿಯದ್ದು, ಇದನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ (Radha Mohandas Agarwal), ಎಸ್. ಮುನಿಸ್ವಾಮಿ (S Muniswamy) ಬಿಜೆಪಿ ಕಾರ್ಯಕರ್ತರಾಗಿದ್ದು, ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ದೆಹಲಿಗೆ ದೌಡಾಯಿಸಿರುವ ಹಾಲಿ ಸಂಸದ ಮುನಿಸ್ವಾಮಿ, ಕೋಲಾರ ಕ್ಷೇತ್ರದ ಬಗ್ಗೆ ಜೆ.ಪಿ. ನಡ್ಡಾ ಬಳಿ ಚರ್ಚೆ ಮಾಡಿದ್ದಾರೆ. ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಡಿ. ಅವಿಭಜಿತ ಕೋಲಾರ ಕ್ಷೇತ್ರದಲ್ಲಿ ಎಲ್ಲ ಜೆಡಿಎಸ್ ಶಾಸಕರು ಇದ್ದರೂ ಕಳೆದ ಬಾರಿ ಎಂಪಿ ಸ್ಥಾನವನ್ನು ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿಯೂ (Lok Sabha Election 2024) ಬಿಜೆಪಿಗೆ ಗೆಲ್ಲಲು ಹೆಚ್ಚು ಅವಕಾಶಗಳು ಇವೆ. ಕ್ಷೇತ್ರದಲ್ಲಿ ನಾನು ಜನರ ಜತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಅಲ್ಲದೆ, ಎಸ್‌ಸಿ ಸಮುದಾಯದವರ ಬಲ ಇದೆ. ದಕ್ಷಿಣ ಭಾರತದಲ್ಲಿ ಈ ಮಟ್ಟಿನ ಬಲ ಇರುವುದು ನಮ್ಮ ಕ್ಷೇತ್ರದಲ್ಲಿ ಮಾತ್ರ. ಹಾಗಾಗಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಬೇಕು ಎಂದು ನಡ್ಡಾರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಶುಕ್ರವಾರ (ಮಾ. 22) ರಾತ್ರಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಆದರೆ, ಅಲ್ಲಿ ಅವರನ್ನು ಯಾವ ರೀತಿ ಮನವೊಲಿಸಲಾಗಿದೆ ಎಂಬುದು ಮಾತ್ರ ತಿಳಿದು ಬಂದಿಲ್ಲ.
ಬಿಜೆಪಿ ಕಾರ್ಯಕರ್ತರಿಂದಲೂ ಆಕ್ಷೇಪ
ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಸಹ ಹೈಕಮಾಂಡ್ ನಡೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಈ ಲೋಕಸಭಾ ಕ್ಷೇತ್ರವು ಬಿಜೆಪಿಯ ವಶದಲ್ಲಿದೆ. ಇದನ್ನು ಬಿಟ್ಟುಕೊಡುವುದು ಬೇಡ ಎಂದು ಹೇಳುತ್ತಿದ್ದಾರೆ. ಆದರೆ, ಇದು ಚುನಾವಣೆಯಲ್ಲಿ (Lok Sabha Election 2024) ಯಾವ ರೀತಿ ಪರಿಣಾಮ ಬೀರಲಿದೆ? ಮುನಿಸ್ವಾಮಿ ಅವರ ಮುಂದಿನ ನಡೆ ಏನು ಎಂಬುದರ ಮೇಲೆ ಮುಂದಿನ ಚಿತ್ರಣ ಗೊತ್ತಾಗಲಿದೆ.
ರಾಜಕೀಯ ಭವಿಷ್ಯ ಕಲ್ಪಿಸಿಕೊಡುವ ಮಾತನಾಡಿದ ಬಿಜೆಪಿ
ಇನ್ನು ಕೋಲಾರ ಸಂಸದ ಮುನಿಸ್ವಾಮಿ ಬಗ್ಗೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ ನಮ್ಮ ಕಾರ್ಯಕರ್ತ. ಅವರು ಅತ್ಯಂತ ಸಮರ್ಪಣಾ ಭಾವದ ವ್ಯಕ್ತಿ. ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಯೋಚನೆ ಮಾಡುತ್ತೇವೆ. ನಾನು ಯಾವುದೇ ಒಳಜಗಳದ ಬಗ್ಗೆ ಚಿಂತೆ ಮಾಡಲ್ಲ. ದೊಡ್ಡ ಪಕ್ಷ ಎಂದ ಮೇಲೆ ಕೋಟ್ಯಂತರ ಕಾರ್ಯಕರ್ತರು ಇರುತ್ತಾರೆ. ಅಸಮಾಧಾನಿತರು ಇದ್ದೇ ಇರುತ್ತಾರೆ. ನಾನು ಅದ್ಯಾವುದನ್ನೂ ನೋಡಲ್ಲ. ಅಂತಹ ಸಮಸ್ಯೆ ಸಹ ನಮ್ಮಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Lok Sabha Election 2024: ಸುಮಲತಾ ಆಗ್ತಾರಾ ರೆಬೆಲ್?; 3 ಕ್ಷೇತ್ರದಲ್ಲೂ ಜೆಡಿಎಸ್‌ಗೆ ಬಂಡಾಯದ ಟ್ರಬಲ್!
ಎಚ್.ಡಿ. ದೇವೇಗೌಡರ ಭೇಟಿ ಮಾಡಿದ ಮುನಿಸ್ವಾಮಿ
ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ಅಧಿಕೃತ ಹೇಳಿಕೆ ನೀಡುತ್ತಿದ್ದಂತೆ ಹಾಲಿ ಸಂಸದ ಮುನಿಸ್ವಾಮಿ ಚುರುಕಾಗಿದ್ದಾರೆ. ದೆಹಲಿಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ನವ ದೆಹಲಿಯ ದೇವೇಗೌಡರ ನಿವಾಸದಲ್ಲಿ ಭೇಟಿ ಮಾಡಿ ಮಾಡಿದ ಮುನಿಸ್ವಾಮಿ ಅವರು ಕೋಲಾರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಕೊನೇ ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ.