Site icon Vistara News

Lok Sabha Election 2024: ಬಿಜೆಪಿಗೆ ಸೀಜ್‌ ಆದ ಹಣ ಕೊಟ್ಟಿದ್ದು ಏಕೆ? ಚುನಾವಣಾಧಿಕಾರಿಗಳ ವಿರುದ್ಧ ತನಿಖೆಗೆ ಸಚಿವ ಕೃಷ್ಣ ಬೈರೇಗೌಡ ಆಗ್ರಹ

Lok Sabha Election 2024 Krishna Byre Gowda demands probe against Election officers for to given seized money to BJP

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಹಣವನ್ನು (Money laundering) ಸೀಜ್‌ ಮಾಡಿ ಕೇವಲ ನಾಲ್ಕೇ ಗಂಟೆಯಲ್ಲಿ ಬಿಜೆಪಿ ನಾಯಕರಿಗೆ ವಾಪಸ್‌ ಕೊಟ್ಟಿರುವುದು ಅನ್ಯಾಯ. ಬಿಜೆಪಿ ನಾಯಕರು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಇಡೀ ವ್ಯವಸ್ಥೆಯನ್ನೇ ಅವಮಾನಿಸುವ ರೀತಿ ಚುನಾವಣೆ ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಸರ್ಜಿಕಲ್ ಸ್ಟ್ರೈಕ್ (Surgical strike) ಆಗಿದ್ದು, ಈ ಗೋಲ್‌ಮಾಲ್ ಪ್ರಕರಣವನ್ನು ಚುನಾವಣಾ ಅಧಿಕಾರಿಗಳು ನ್ಯಾಯಯುತ ತನಿಖೆ ನಡೆಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ, “ಚುನಾವಣಾ ಖರ್ಚಿಗಾಗಿ ಬಿಜೆಪಿ ನಾಯಕರು ಅಕ್ರಮವಾಗಿ ಸಾಗಾಟ ನಡೆಸಿದ್ದ ರೂ. 2 ಕೋಟಿ ಹಣವನ್ನು ಚುನಾವಣಾ ಅಧಿಕಾರಿಗಳು ಶನಿವಾರ ಕಾಟನ್‌ ಪೇಟೆಯಲ್ಲಿಯಲ್ಲಿ ಸೀಜ್ ಮಾಡಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಆದರೆ, ಆದಾಯ ತೆರಿಗೆ ಅಧಿಕಾರಿಗಳು ಸೀಜ್ ಮಾಡಲಾದ ಹಣಕ್ಕೆ ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ಕ್ಲೀನ್ ಚಿಟ್‌ ನೀಡಿ, ಹಣವನ್ನೂ ಬಿಜೆಪಿ ಗೆ ಹಿಂತಿರುಗಿಸಿದೆ. ಇದು ಹೇಗೆ ಸಾಧ್ಯವಾಯಿತು?” ಎಂದು ಪ್ರಶ್ನೆ ಮಾಡಿದ್ದಾರೆ.

ಸಿಕ್ಕಿಬಿದ್ದ ಹಣಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿರುವ ಬಿಜೆಪಿ ಮಾರ್ಚ್‌ 27 ರಂದೇ 5 ಕೋಟಿ ರೂಪಾಯಿಯನ್ನು ಕೆನೆರಾ ಬ್ಯಾಂಕ್‌ನಿಂದ ವಿತ್‌ಡ್ರಾ ಮಾಡಿ ಇಟ್ಟುಕೊಂಡಿರುವುದಾಗಿ ತಿಳಿಸಿದೆ. ಅಲ್ಲದೆ, ಈ ಹಣವನ್ನು ಚುನಾವಣಾ ಖರ್ಚಿಗಾಗಿ ಮೈಸೂರು, ಚಾಮರಾಜನಗರ ಹಾಗೂ ಮಂಗಳೂರಿಗೆ ಕಳುಹಿಸುತ್ತಿರುವುದಾಗಿ ಮಾಹಿತಿ ನೀಡಿದೆ. ಆದರೆ, ಈ ದಾಖಲೆಗಳು ಎಷ್ಟರ ಮಟ್ಟಿಗೆ ಸಾಚಾತನ ಹೊಂದಿವೆ. ನೀತಿ ಸಂಹಿತೆ ನಿರ್ದಿಷ್ಟಗೊಳಿಸಿರುವ ಶೇ.90ರಷ್ಟು ಹಣವನ್ನು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಖರ್ಚು ಮಾಡಿದ್ದು, ಈ ಬಗ್ಗೆ ಅಧಿಕಾರಿಗಳು ಕನಿಷ್ಠ ತನಿಖೆ ನಡೆಸದೇ ಹೋದದ್ದು ವಿಪರ್ಯಾಸ ಎಂದು ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.

ಅನುಮಾನಕ್ಕೆಡೆ ಮಾಡಿದ ಅಧಿಕಾರಿಗಳ ನಡೆ

ಅಲ್ಲದೆ, ಕಳೆದ ಒಂದು ತಿಂಗಳಿನಿಂದ ಬಿಜೆಪಿ ಒಂದು ರೂಪಾಯಿಯನ್ನೂ ಚುನಾವಣೆಗಾಗಿ ಖರ್ಚು ಮಾಡಿಲ್ಲವೇ? ಹೀಗೆ ಯಾವುದೋ ಉದ್ದೇಶಕ್ಕೆ ಬ್ಯಾಂಕಿನಿಂದ ಹಣ ಪಡೆದ ದಾಖಲೆಗಳನ್ನು ತೋರಿಸಿದಾಕ್ಷಣ ಅದರ ಸಾಚಾತನದ ಬಗ್ಗೆ ಕಿಂಚಿತ್ತೂ ತನಿಖೆ ನಡೆಸದೆ ಬೆಳಕಿನ ವೇಗದಲ್ಲಿ ಅಧಿಕಾರಿಗಳು ಹಣವನ್ನು ಹಿಂತಿರುಗಿಸಿದ್ದಾರೆ. ಹೀಗೆ ಯಾವುದೋ ದಾಖಲೆಗಳನ್ನು ತೋರಿಸಿ ಕಳ್ಳತನದಿಂದ ಸಿಕ್ಕಿಬಿದ್ದ ಹಣವನ್ನು ಬಿಡಿಸಿಕೊಳ್ಳುವುದಾದರೆ ಚುನಾವಣೆ ಪಾವಿತ್ಯ್ರತೆ ಉಳಿಯುವುದು ಹೇಗೆ ಸಾಧ್ಯ. ನಾವೂ ಹೀಗೆ ಹಣದ ಮೂಲಕ ವಹಿವಾಟು ನಡೆಸಿದರೆ ನಮ್ಮ ಎಲ್ಲ ವಹಿವಾಟನ್ನು ಮನ್ನಾ ಮಾಡ್ತೀರ? ಅಧಿಕಾರಿಗಳ ಇಂತಹ ವರ್ತನೆ ಚುನಾವಣೆ ಕಾನೂನು ಅಡಿ ನಡೆಯುತ್ತಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಸಚಿವ ಕೃಷ್ಣಬೇರೇಗೌಡ ಸುದ್ದಿಗೋಷ್ಠಿಯ ವಿಡಿಯೊ ಇಲ್ಲಿದೆ

ಇದು ಮನಿ ಲಾಂಡರಿಂಗ್ ಅಲ್ಲವೇ?

ಮುಂದುವರಿದು, ಐವತ್ತು ಸಾವಿರಕ್ಕೆ ಮೇಲ್ಪಟ್ಟ ಯಾವುದೇ ಹಣದ ವಹಿವಾಟುಗಳು ಬ್ಯಾಂಕ್ ಖಾತೆ ಅಥವಾ ಚೆಕ್ ಮೂಲಕ ನಡೆಯಬೇಕು ಎಂಬ ಕಾನೂನು ಇದೆ. ಚುನಾವಣಾ ಸಂದರ್ಭದಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಹಣದ ವಹಿವಾಟನ್ನು ಚೆಕ್ ಮೂಲಕವೇ ನಡೆಸಬೇಕು ಎಂಬುದನ್ನು ಚುನಾವಣಾ ನೀತಿ ಸಂಹಿತೆಯೇ ಹೇಳುತ್ತದೆ. ಆದರೆ, ಈ ವಿಚಾರ ನಮ್ಮ ಅಧಿಕಾರಿಗಳಿಗೆ ಗೊತ್ತಿಲ್ಲದೆ ಹೋದದ್ದು ದುರಾದೃಷ್ಟಕರ. ಕಾನೂನು ಉಲ್ಲಂಘಿಸಿ ಅಥವಾ ಮುಂಚಿತವಾಗಿಯೇ ಮಾಹಿತಿ ನೀಡದೆ ಹೀಗೆ ರೂ.2 ಕೋಟಿ ಹಣವನ್ನು ವರ್ಗಾಯಿಸುತ್ತಿರುವುದು ಮನಿ ಲಾಂಡರಿಂಗ್ ಅಲ್ಲವೇ? ಈ ಬಗ್ಗೆ ಅಧಿಕಾರಿಗಳು ಏಕೆ ಪ್ರಶ್ನಿಸುತ್ತಿಲ್ಲ. ಅಥವಾ ಬಿಜೆಪಿ ನಾಯಕರು ಚುನಾವಣಾ ಅಧಿಕಾರಿಗಳ ಸಹಾಯದೊಂದಿಗೆ ಹೊಸ ಮನಿ ಲಾಂಡರಿಂಗ್ ನಡೆಸುತ್ತಿದ್ದಾರ? ಎಂದು ಕೃಷ್ಣ ಬೈರೇಗೌಡ ಕಟುವಾಗಿ ಪ್ರಶ್ನಿಸಿದರು.

ಗೋಲ್‌ಮಾಲ್ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕು

ಸ್ವಾಭಿಮಾನ ಕಳೆದುಕೊಂಡಿರುವ ಕೆಲವು ಅಧಿಕಾರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಬಿಜೆಪಿ ನಾಯಕರು ಅಧಿಕಾರಿಗಳನ್ನೂ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಆಗಿದ್ದು, ಚುನಾವಣಾ ಅಧಿಕಾರಿಗಳು ಈ ಗೋಲ್‌ಮಾಲ್ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ದೇವೇಗೌಡರಿಗೆ ಟಾಂಗ್..!

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು, ಮೋದಿ ರಾಜ್ಯಕ್ಕೆ ಅಕ್ಷಯ ಪಾತ್ರೆ ನೀಡಿದ್ದಾರೆ ಎಂದು ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ ಅವರು, “ದೇವೇಗೌಡರ ಕುಟುಂಬ ಹೇಗಿದ್ದರೂ ಪ್ರಧಾನಿ ಜೊತೆಗೆ ತುಂಬಾ ನಿಕಟವಾಗಿದೆ. ಅಲ್ಲದೆ, ಅವರು ರಾಜ್ಯಕ್ಕೆ ಅಕ್ಷಯ ಪಾತ್ರೆ ನೀಡಿದ್ದಾರೆ ಎಂದು ಕೊಂಡಾಡುತ್ತಿದ್ದಾರೆ. ಹಾಗಾದರೆ ಆ ಅಕ್ಷಯ ಪಾತ್ರೆಯಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಕೊಡಿಸಿಬಿಡಿ ಎಂದು ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದರು.

ಇದನ್ನೂ ಓದಿ: Lok Sabha Election 2024: ಮೋದಿಯ ಖಾಲಿ ಚೆಂಬು ದೇವೇಗೌಡರಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ದು ಹೇಗೆ? ಸಿಎಂ ಸಿದ್ದರಾಮಯ್ಯ

ಕಳೆದ ಬಜೆಟ್‌ನಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರೂ.56 ಕೋಟಿ ಘೋಷಿಸಿತ್ತು. ಈ ಪೈಕಿ ಕನಿಷ್ಟ ರೂ.500 ಕೋಟಿಯನ್ನಾದರೂ ಕೊಡಿಸಿ. ದೊಡ್ಡ ಮನಸ್ಸು ಮಾಡಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ. ಸಮುದ್ರಕ್ಕೆ ಸೇರುವ ನೀರನ್ನು ಉಳಿಸಿ ಬೆಂಗಳೂರಿಗೆ ಕುಡಿಯುವ ನೀರನ್ನಾದರೂ ಪೂರೈಸಬಹುದು. ಮಂಡ್ಯದ ರೈತರ ಭೂಮಿಗೂ ನೀರುಣಿಸಬಹುದು ಎಂದು ಕೃಷ್ಣ ಬೈರೇಗೌಡ ಕುಟುಕಿದರು.

Exit mobile version