ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಹೊತ್ತಿನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (Kalyana Rajya Pragati Party) ಸಂಸ್ಥಾಪಕ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಬಿಜೆಪಿ ಸೇರ್ಪಡೆಯಾಗುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೂಚನೆ ಮೇರೆಗೆ ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡುವುದಾಗಿ ಹೇಳಿದ್ದಾರೆ. ಶಾ ಭೇಟಿ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.
ಚಾಲುಕ್ಯ ಸರ್ಕಲ್ ಬಳಿ ಇರುವ ತಮ್ಮ ನಿವಾಸ ಪಾರಿಜಾತದಲ್ಲಿ ಕೆಆರ್‌ಪಿಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಜನಾರ್ದನ ರೆಡ್ಡಿ ಬಿಜೆಪಿ ಜತೆ ಪಕ್ಷವನ್ನು ವಿಲೀನ ಮಾಡುವ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ನಾಯಕ ಗೋವಿಂದ ಕಾರಜೋಳ ಸಹ ಉಪಸ್ಥಿತರಿದ್ದರು.
ಬಿಜೆಪಿಗೆ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿದ ರೆಡ್ಡಿ
ಜನಾರ್ದನ ರೆಡ್ಡಿ ಅವರು ತಮ್ಮ ರಾಜಕೀಯ ಇತಿಹಾಸದ ಬಗ್ಗೆ ಹಾಗೂ ಬಿಜೆಪಿ ಜತೆಗಿನ ಭಾವನಾತ್ಮಕ ಸಂಬಂಧದ ಬಗ್ಗೆ ಮಾಹಿತಿಯನ್ನು ಸಭೆಯಲ್ಲಿ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ. ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರೊಂದಿಗಿನ ಸಂಬಂಧ ಹಾಗೂ ರಾಜಕೀಯ ಏಳು ಬೀಳುಗಳ ಕುರಿತು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ರಾಜಕೀಯವಾಗಿ ನನಗೆ ಗಂಗಾವತಿ ಪುನರ್ಜನ್ಮ ಕೊಟ್ಟಿದೆ. ನನ್ನ ಕೊನೇ ಉಸಿರು ಇರುವವರೆಗೂ ಗಂಗಾವತಿ ಕ್ಷೇತ್ರವನ್ನು ಬಿಡಲ್ಲ. ಕಷ್ಟಕಾಲದಲ್ಲಿ ನನಗೆ ಕ್ಷೇತ್ರದ ಜನರು ಕೈಹಿಡಿದಿದ್ದಾರೆ ಎಂದು ಗಂಗಾವತಿ ಕ್ಷೇತ್ರದ ಕುರಿತು ರೆಡ್ಡಿ ಇದೇ ವೇಳೆ ಭಾವುಕರಾದರು.
ಪ್ರಧಾನಿ ನರೇಂದ್ರ ಮೋದಿಗಾಗಿ ನಾನು ಬಿಜೆಪಿಯೊಂದಿಗೆ ಕೈಜೋಡಿಸುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೆ. ಆದರೆ ಅಮಿತ್ ಶಾ ಅವರು ನೀವು ಬರಲೇಬೇಕು ಎಂದಿದ್ದಾರೆ. ಪಕ್ಷ ವಿಲೀನ ಮಾಡಿ ಬಿಜೆಪಿಗೆ ಸೇರಿ ಎಂದು ಹೇಳಿದ್ದಾರೆ. ಹೀಗಾಗಿ ತಮ್ಮ ಅಭಿಪ್ರಾಯ ಕೇಳಲು ಸಭೆ ಕರೆದಿದ್ದೇನೆ ಎಂದು ಹೇಳಿದರು. ಬಳಿಕ ಪಕ್ಷವನ್ನು ವಿಲೀನಗೊಳಿಸಲು ಮುಖಂಡರ ಒಪ್ಪಿಗೆಯನು ಪಡೆದುಕೊಂಡರು.
ನಾಳೆ ಬೆಳಗ್ಗೆ ಬಿಜೆಪಿ ಸೇರ್ಪಡೆ ಸಾಧ್ಯತೆ
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿಜೆಪಿಗೆ ಅತಿ ಚಿಕ್ಕ ವಯಸ್ಸಿನಿಂದಲೂ ಕೆಲಸ ಮಾಡಿದ್ದೇನೆ. ಮಧ್ಯದಲ್ಲಿ ಏನೆಲ್ಲ ಆಯಿತು ಎಂಬುದು ನಿಮಗೂ ಗೊತ್ತು. ನಾನು ಕೂಡ ತಾಯಿ ಸಮಾನವಾಗಿರುವ ಬಿಜೆಪಿ ಸೇರ್ಪಡೆಯಾಗುವುದಕ್ಕೂ ಮುನ್ನ ಬೆಂಬಲಿಗರ ಜತೆ ಸಭೆ ಮಾಡಿದ್ದೇನೆ. ಪಕ್ಷದ ಬೆಂಬಲಿಗರು ಬಿಜೆಪಿ ಸೇರಲು ಒಪ್ಪಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ನೇತೃತ್ವದಲ್ಲಿ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Lok Sabha Election 2024: ಯದುವೀರ್ ಟಾರ್ಗೆಟ್ ಬೇಡ; ಮಾತನಾಡುವಾಗ ಬಿ ಕೇರ್‌ಫುಲ್: ಸಿಎಂ ಖಡಕ್ ಸೂಚನೆ
ಕಳೆದ ಹತ್ತು ವರ್ಷದಲ್ಲಿ ದೇಶಕ್ಕೆ ಒಳ್ಳೆಯ ಹೆಸರು ಬಂದಿದೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು. ಮತ್ತೆ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಶ್ರೀರಾಮುಲು ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಶ್ರೀರಾಮುಲು ಚಿಕ್ಕ ಮಗುವಿನಿಂದಲೂ ಜತೆಗಿದ್ದವರು. ನಾನು ಕೆಆರ್‌ಪಿಪಿ ಕಟ್ಟಿದಾಗ ಯಾರಿಗೂ ಪಕ್ಷಕ್ಕೆ ಬನ್ನಿ ಎಂದಿರಲಿಲ್ಲ. ನನ್ನ ಸ್ವಂತ ಸಹೋದರರಿಗೂ ಹೇಳಿರಲಿಲ್ಲ. ಪಕ್ಷ ಘೋಷಣೆ ಮಾಡುವ ಮುನ್ನ ಯಾರನ್ನೂ ಕರೆದಿಲ್ಲ. ಮತ್ತೆ ತಾಯಿ ಪಕ್ಷಕ್ಕೆ ಮರಳುತ್ತೇನೆ. ಇನ್ನೂ ಮಾತನಾಡುವುದಿದೆ. ನಾಳೆ ಮಾತನಾಡುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು.